ಪರಿಶ್ರಮದಿಂದ ಮಾತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಸಾಧ್ಯ : ಡಾ.ಕೆ.ಆರ್.ವೇಣುಗೋಪಾಲ್
ತುಮಕೂರುನಲ್ಲಿ ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದ ಶೈಕ್ಷಣಿಕ ಸಮಾವೇಶ ಮತ್ತು ಗುರುವಂಧನಾ ಕಾರ್ಯಕ್ರಮ

ತುಮಕೂರು : ಹಿಂದುಳಿದ ಸಮುದಾಯದ ಜನರು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉನ್ನತ ಹುದ್ದೆಗಳಿಗೆ ಹೋದ ಸಂದರ್ಭದಲ್ಲಿ ಕಾಲೆಳೆಯುವವರ ಸಂಖ್ಯೆಯೇ ಹೆಚ್ಚು.ಹಾಗಾಗಿ ಯುವಜನರು ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ ಎಂದು ಬೆಂಗಳೂರು ವಿವಿಯ ಉಪಕುಲಪತಿಗಳಾದ ಡಾ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.
ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರೀಯ ತಿಗಳ ಯೂತ್ ಫೋರ್ಸ್(ರಿ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶೈಕ್ಷಣಿಕ ಸಮಾವೇಶ ಮತ್ತು ಗುರುವಂಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಕೆಲವರು ತಪ್ಪು ತಿಳುವಳಿಕೆಯಿಂದ ನೀಡಿದ ದೂರಿನಿಂದಾಗಿ ಸರಕಾರಿ ಸೇವೆಯಿಂದ ಅಮಾನತ್ತುಗೊಂಡು ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆದಿದ್ದೇನೆ. ಈ ರೀತಿಯ ಅನುಭವಗಳು ಮತ್ಯಾರಿಗೂ ಆಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಅಗ್ನಿವಂಶ ಕ್ಷತ್ರೀಯ ತಿಗಳ ಸಮುದಾಯದಲ್ಲಿ ಶೈಕ್ಷಣಿಕ ಕ್ಷೇತದಲ್ಲಿ ಗುರುತಿಸಿಕೊಂಡಿರುವವರ ಸಂಖ್ಯೆ ಅತಿ ಕಡಿಮೆ.ಅಲ್ಲಲ್ಲಿ ಒಂದಿಬ್ಬರು ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ.ಅವರುಗಳು ಯುವ ಸಮೂಹಕ್ಕೆ ಹೆಚ್ಚಿನ ಮಾರ್ಗದರ್ಶನ ಮಾಡ ಬೇಕಾಗಿದೆ.ಶಿಕ್ಷಣ ಇಂದು ಅತ್ಯಂತ ಅಗತ್ಯವಾಗಿ ಬೇಕಾಗಿದೆ.ಸತತ ಪರಿಶ್ರಮದಿಂದ ಮಾತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಡಾ.ಕೆ.ಆರ್.ವೇಣುಗೋಪಾಲ್ ತಿಳಿಸಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹನುಮದಾಸ್ ಮಾತನಾಡಿ,ಜ್ಞಾನವೆಂಬುದು ಎಲ್ಲರಿಗೂ ಮುಖ್ಯ.ಅದು ಶಾಲೆಗೆ ಮಾತ್ರ ಸಿಮೀತವಾಗಿಲ್ಲ.ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳ ಆಸ್ಥಿತ್ವ ಉಳಿಯಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ.ಹಾಗಾಗಿ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರೀಯ ತಿಗಳ ಯೂತ್ ಫೋರ್ಸ್ ಸಂಸ್ಥೆ, ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಈ ಶೈಕ್ಷಣಿಕ ಸಮಾವೇಶ ಮತ್ತು ಗುರುವಂಧನಾ ಕಾರ್ಯಕ್ರಮ ಪ್ರಸ್ತುತವಾಗಿದೆ.ಈ ನಿಟ್ಟಿನಲ್ಲಿ ಯುವ ಸಮೂಹದ ಈ ಪ್ರಯತ್ನಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಂಜಯ್ಯ ಮಾತನಾಡಿ,ಗುರುವಿಲ್ಲವೆಂದರೆ ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಸಾಧ್ಯವಿಲ್ಲ.ಹಾಗಾಗಿ ತಿಗಳ ಸಮುದಾಯದ ಯೂತ್ ಫೊರ್ಸ್ ಸಂಸ್ಥೆ ಶೈಕ್ಷಣಿಕ ಸಮಾವೇಶದ ಜೊತೆಗೆ, ಗುರುವಂಧನೆ ಕಾರ್ಯಕ್ರಮ ಆಯೋಜಿಸಿ,ಉತ್ತಮ ಕೆಲಸ ಮಾಡಿದೆ.ಸಮುದಾಯದ ಶಿಕ್ಷಕರನ್ನುಗುರುತಿಸಿ ಸನ್ಮಾನಿಸುವ ಮೂಲಕ ಸಮುದಾಯದ ಯುವಕರು ಮತ್ತು ಶಿಕ್ಷಕರ ನಡುವೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿದೆ.ಇದು ಶಿಕ್ಷಣದಲ್ಲಿ ಬಹಳ ಹಿಂದೆ ಉಳಿದಿರುವ ಈ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ.ವ್ಯವಸಾಯ,ಹಣ್ಣು,ಹೂವು,ತರಕಾರಿ ಬೆಳೆಯುವ ಶ್ರಮಜೀವಿಗಳಾದ ಇವರಲ್ಲಿಯೂ ಶೈಕ್ಷಣಿಕ ಜಾಗೃತಿ ಮೂಡಿಸಲು ಯುವ ಸಮೂಹ ಮುಂದಾಗಿರುವುದು ಶ್ಲಾಘನೀಯ ಕೆಲಸ ಎಂದರು.
ಪಾಲಿಕೆಯ ಮಾಜಿ ಸದಸ್ಯ ಪ್ರೆಸ್ ರಾಜಣ್ಣ ಮಾತನಾಡಿ,ಯುವಜನರನ್ನು ಸಮುದಾಯದ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳುವ ನಿಟ್ಟಿನಲ್ಲಿ ಯೂತ್ ಫೋರ್ಸ್ ಸಂಘಟನೆ ಹುಟ್ಟು ಹಾಕಲಾಗಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಿರಿಯರೊಂದಿಗೆ ಯುವಕರು ಕೈಜೋಡಿಸಲಿದ್ದಾರೆ. ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ನ ಪ್ರಧಾನ ಕಾರ್ಯದರ್ಶಿ ಮಂಜುನಾಥ್,ಶೈಕ್ಷಣಿಕ ಜಾಗೃತಿ ಇಲ್ಲದೆ ಇರುವ ಸಮುದಾಯದಲ್ಲಿ ಜಾಗೃತಿ ಮೂಡಿಸಿ, ಅವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಳೆದ 9 ತಿಂಗಳ ಹಿಂದೆ ಈ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ.ಹಿರಿಯ ಯಜಮಾನರುಗಳ ಮಾರ್ಗದರ್ಶನದಂತೆ ಸಮುದಾಯದ ಸಮಗ್ರ ಅಭಿವೃದ್ದಿಗೆ ಅಗತ್ಯವಿರುವ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಶೈಕ್ಷಣಿಕ ಸಮಾವೇಶದ ಮೂಲಕ ಯುವ ಸಮುದಾಯಕ್ಕೆ ಗುರುಗಳ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಕಂಠಯ್ಯ,ಶಿಕ್ಷಣ ತಜ್ಞರಾದ ಡಾ.ಲೋಕೇಶ್,ಯಜಮಾನರುಗಳಾದ ಟಿ.ಹೆಚ್.ಹನುಮಂತರಾಜು,ಟಿ.ಎಸ್.ಶಿವಕುಮಾರ್,ಪ್ರೆಸ್‌ರಾಜಣ್ಣ,ಗಂಗಹನುಮಯ್ಯ,ಟಿ.ಎಲ್.ಕುಂಭಯ್ಯ,ಟಿ.ಎನ್.ನಾರಾಯಣಸ್ವಾಮಿ,ರವೀಶ್ ಜಹಾಂಗೀರ್,ಎನ್.ಎಸ್.ಶಿವಣ್ಣ,ಪಾಲಿಕೆ ಸದಸ್ಯರಾದ ಶಶಿಕಲಾ ಗಂಗಹನುಮಯ್ಯ, ಟಿ.ಕೆ.ನರಸಿಂಹಮೂರ್ತಿ, ಎ.ಶ್ರೀನಿವಾಸ್, ಜಿ.ಪಂ.ಸದಸ್ಯರಾದ ಎಂ.ಬಿ.ಕೃಷ್ಣಯ್ಯ,ಸಂಗೀತ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಹೆಚ್.ಆರ್.ರೇಣುಕಯ್ಯ, ಎ.ರಾಮುಸ್ವಾಮಿ, ಆನಂತರಾಜು, ಹುಲಿರಾಮಯ್ಯ, ಜಯರಾಮ್ ಅವರುಗಳು ಸೇರಿದಂತೆ ಜಿಲ್ಲೆಯ 16ಜನ ಶಿಕ್ಷಕರುಗಳನ್ನು ಅಭಿನಂದಿಸಲಾಯಿತು.ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರೀಯ ತಿಗಳ ಯೂತ್ ಫೋರ್ಸ್ನ ಅಧ್ಯಕ್ಷರಾದ ಮಾರುತಿ, ಮಂಜುನಾಥ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.