ತುಮಕೂರು : ಭಾರತ್ ಬಂದ್‌ಗೆ ರೈತ ಪರ ಸಂಘಟನೆಗಳ ಪ್ರತಿಭಟನೆ, ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ
ತುಮಕೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಹಾಗೂ ಬೆಲೆ ಏರಿಕೆ, ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಕಿಸಾನ್ ಸಂಯುಕ್ತ ಮೋರ್ಚಾ ದೇಶಾದ್ಯಂತ ಇಂದು ಕರೆ ನೀಡಿದ್ದ ಭಾರತ್ ಬಂದ್‌ಗೆ ರೈತ ಸಂಘಟನೆಗಳ ಪ್ರತಿಭಟನೆ ಹೊರತುಪಡಿಸಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆ 8 ಗಂಟೆಯಿಂದಲೇ ನಗರದಲ್ಲಿ ಕಿಸಾನ್ ಸಂಯುಕ್ತ ಕರ್ನಾಟಕ, ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ವಿವಿಧ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಸ್ತೆಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದರು.
ತುಮಕೂರಿನ ನಾಲ್ಕು ದಿಕ್ಕುಗಳಾದ ಮರಳೂರು ಕೆರೆಯ ರಿಂಗ್ ರಸ್ತೆಯಿಂದ ಹಾಗೂ ಗುಬ್ಬಿ ಗೇಟ್ ರಿಂಗ್ ರಸ್ತೆಯಿಂದ ಕೆ.ಆರ್.ಆರ್.ಎಸ್ ಎ.ಗೊವಿಂದರಾಜು ಮತ್ತು ಆನಂದ ಪಟೇಲ್ ಹಾಗೂ ಕಟ್ಟಡ ಕಾರ್ಮಿಕ ಸಂಘಟನೆಯ ಶಂಕರಪ್ಪ ಪ್ರಗತಿಪರ ಸಂಘಟನೆ ತಾಜ್ ಉದ್ದೀನ್ ಮುಂದಾಳತ್ವದಲ್ಲಿ ಮತ್ತು ಸಿರಾ ಗೇಟ್ ವೃತ್ತದಿಂದ ಪ್ರಾಂತ್ಯ ರೈತ ಸಂಘದ ಕರಿಬಸವಯ್ಯ, ಕಾರ್ಮಿಕ ಮುಖಂಡರಾದ ಲೈ ಗಿರೀಶ್, ಲೋಕೇಶ್, ಷಣ್ಮುಖಪ್ಪ ಖಲೀಲ್, ಬಟವಾಡಿ ವೃತ್ತದಿಂದ ಆರ್.ಕೆ.ಎಸ್.ನ ಸ್ವಾಮಿ ಮತ್ತು ಎಐಕೆಎಸ್ ಕಂಬೇಗೌಡ ಹಾಗೂ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಎ. ನರಸಿಂಹಮೂರ್ತಿಯವರ ಕಾರ್ಮಿಕ ಸಂಘಟನೆಯ ಮಂಜುಳಾ ನೇತೃತ್ವದ ತಂಡ, ರೈತರು, ಕಾರ್ಮಿಕರು ಸಮಾವೇಶಗೊಂಡು ಪ್ರತಿಭಟನಾ ಮೆರವಣಿಗೆ ಮೂಲಕ ನಗರದ ಹೃದಯಭಾಗವಾದ ಟೌನ್‌ಹಾಲ್ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಟೌನ್‌ಹಾಲ್ ವೃತ್ತಕ್ಕೆ ನಗರದ ನಾಲ್ಕು ದಿಕ್ಕುಗಳಿಂದ ರೈತರು, ಕಾರ್ಮಿಕರ, ಕನ್ನಡ ಪರ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ ಆಗಮಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟದ ಕಿಚ್ಚು ಮತ್ತಷ್ಟು ಜೋರಾಗಿ ಹೊತ್ತಿ ಉರಿಯ ತೊಡಗಿತು. ನಂತರ ಬಿ.ಹೆಚ್. ರಸ್ತೆ ಮುಖಾಂತರ ಜೆ.ಸಿ. ರೋಡ್, ಮಂಡಿಪೇಟೆ, ಅಶೋಕ ರಸ್ತೆ, ಎಂ.ಜಿ. ರಸ್ತೆಯಲ್ಲಿ ಸಾಗಿ ಮತ್ತೆ ಟೌನ್‌ಹಾಲ್ ವೃತ್ತ ಪ್ರತಿಭಟನಾಕಾರರು ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ, ಜನ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಲಜ್ಜೆಗೆಟ್ಟ ಸರ್ಕಾರ ದೇಶದ 70 ಭಾಗ ಇರುವ ರೈತರನ್ನು, ಭೂಮಿಯನ್ನು ನಾಶ ಮಾಡುತ್ತಿದೆ. ರೈತರು ಪ್ರತಿಭಟನೆ ಮಾಡುತ್ತಿದ್ದರೂ ಕರೆದು ಮಾತನಾಡಿ ಸಮಸ್ಯೆ ಆಲಿಸುವುದನ್ನು ಬಿಟ್ಟು ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಬೆಲೆ ದುಬಾರಿಯಾಗಿದೆ. ಜನಸಾಮಾನ್ಯರು ಬದುಕು ನಡೆಸದಂತಹ ಪರಿಸ್ಥಿತಿಯನ್ನು ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ಕಾರ್ಪೋರೇಟ್ ಸಂಸ್ಥೆಗಳಿಗೆ ಭೂಮಿಯನ್ನು ರೈತರಿಂದ ಕಿತ್ತುಕೊಡುವ ಕೆಲಸಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿ ವಿದ್ಯುತ್ ದರವನ್ನು ದುಬಾರಿ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಅಲ್ಲದೆ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಕಾರ್ಯಕ್ಕೂ ಮುಂದಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಆನಂದ್ ಪಟೇಲ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಕಾರ್ಪೋರೇಟ್ ಕಂಪೆನಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಲ್ಲಾಳಿ ರೀತಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಇದನ್ನು ಮೊದಲು ಬಿಡಬೇಕು ಎಂದು ಆಗ್ರಹಿಸಿದರು.
ಪ್ರಗತಿ ಪರ ಚಿಂತಕರಾದ ಸಿ. ಯತಿರಾಜು ಮಾತನಾಡಿ, ರೈತ ವಿರೋಧಿಯಾಗಿರುವ 3 ಕೃಷಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಬಾರದು. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ. ಬೆಲೆ ಏರಿಕೆಗೆ ನಿಯಂತ್ರಣ ಹಾಕಬೇಕು. ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಆದರೆ ಆದಾಯ ಕುಸಿಯುತ್ತಿದೆ. ಇದರಿಂದ ಜನಸಾಮಾನ್ಯರು ದಿನನಿತ್ಯ ಬದುಕು ನಡೆಸಲು ಕಷ್ಟಪಡುವಂತಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಮಾತನಾಡಿ, ಜೆಸಿಟಿಯು ಸಂಘಟನೆಗಳಾದ ಎಐಟಿಯುಸಿ, ಸಿಐಟಿಯು ಸೇರಿದಂತೆ ಕಾರ್ಮಿಕ ಸಂಘಟನೆಗಳು ರೈತರ ಹೋರಾಟಕ್ಕೆ ಕೈ ಜೋಡಿಸಿದ್ದೇವೆ. ಕೇಂದ್ರ ಸರ್ಕಾರ ರೈತರು, ಕಾರ್ಮಿಕ ಸಮಸ್ಯೆಗಳಿಗೆ ಸ್ಪಂದಿಸಬೇಕೇ ಹೊರತು ಪ್ರತಿಭಟನಾಕಾರರ ಮೇಲೆ ಆರೋಪಗಳನ್ನು ಹೊರಿಸುವುದು ಸರಿಯಲ್ಲ ಎಂದರು.
ಜನರಿಗೆ ತಟ್ಟದ ಬಂದ್ ಬಿಸಿ
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ಕರೆ ನೀಡಿದ್ದ ಭಾರತ್ ಬಂದ್ ಜಿಲ್ಲೆಯಲ್ಲಿ ಜನಸಾಮಾನ್ಯರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ.
ಬಸ್, ಆಟೋ ರಿಕ್ಷಾ, ಲಾರಿ, ಕಾರುಗಳು ಎಂದಿನಂತೆ ಸಂಚರಿಸಿದರೆ, ಹೋಟೆಲ್ ಸೇರಿದಂತೆ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಿದವು. ಹೀಗಾಗಿ ಅನ್ನದಾತರ ಭಾರತ್ ಬಂದ್‌ನ ಬಿಸಿ ಜನಸಾಮಾನ್ಯರಿಗೆ ತಟ್ಟಲಿಲ್ಲ.
ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಖಾಸಗಿ ಆಸ್ಪತ್ರೆಗಳು, ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಭಾರತ್ ಬಂದ್ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಸವರಾಜು, ರವೀಶ್, ಉಮೇಶ್, ಕಾರ್ಮಿಕ ಮುಖಂಡರಾದ ಎನ್.ಕೆ. ಸುಬ್ರಹ್ಮಣ್ಯ, ಗಿರೀಶ್, ಅಜ್ಜಪ್ಪ, ಚಿರತೆ ಚಿಕ್ಕಣ್ಣ, ಪಿ.ಎನ್. ರಾಮಯ್ಯ, ನರಸಿಂಹಮೂರ್ತಿ, ಪಂಡಿತ್ ಜವಹರ್ ಸೇರಿದಂತೆ ವಿವಿಧ 47 ಸಂಘಟನೆಗಳ ಮುಖಂಡರುಗಳು ಪಾಲ್ಗೊಂಡಿದ್ದರು.