ಬೆಂಗಳೂರು: ಜಾತಿ ಸಮೀಕ್ಷೆಯು ನಾನು ಮುಖ್ಯಮಂತ್ರಿ ಆಗಿದ್ದಾಗ ಪೂರ್ಣ ಆಗಿರಲಿಲ್ಲ ಆದರೆ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಜಾತಿ ಸಮೀಕ್ಷೆ ಪೂರ್ಣಗೊಂಡಿತ್ತು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಆಗ ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಸಚಿವರಾಗಿದ್ದರು. ವರದಿ ಪೂರ್ಣವಾಗಿದೆ ಎಂದು ನನಗೆ ಮಾಹಿತಿ ನೀಡಿದರು ಎಂದು ಹೇಳಿದ್ದಾರೆ.ಜಾತಿ ಗಣತಿ ಬಿಡುಗಡೆಗೆ ಪುಟ್ಟರಂಗಶೆಟ್ಟಿ ಪ್ರಯತ್ನ ಮಾಡಲು ಹೋಗಿದ್ದರು. ಆದರೆ ಆಗ ಹೆಚ್.ಡಿ. ಕುಮಾರಸ್ವಾಮಿ ಬಿಡುಗಡೆ ಪ್ರಯತ್ನ ಮಾಡಲಿಲ್ಲ. ಪುಟ್ಟರಂಗಶೆಟ್ಟಿಯನ್ನು ಕುಮಾರಸ್ವಾಮಿ ಹೆದರಿಸಿ ಬಿಟ್ಟಿದ್ದರು. ಅವರಿಗೆ ಹೆದರಿ ವರದಿ ಬಿಡುಗಡೆ ಗೋಜಿಗೆ ಹೋಗಲಿಲ್ಲ. ಇದನ್ನು ನಾನು ಹೇಳಿದರೆ ಕುಮಾರಸ್ವಾಮಿಗೆ ಕೋಪ ಬರುತ್ತದೆ ಎಂದರು. ಸಿದ್ದರಾಮಯ್ಯ ಕೂತ್ಕೊಂಡು ಬರೆಸಿಬಿಟ್ಟಿದ್ದಾನೆ ಎನ್ನುತ್ತಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೋವಿಡ್ನಿಂದ ಮೃತರಾದ ಮಡಿವಾಳರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ರಾಜ್ಯ ಮಡಿವಾಳರ ಸಂಘದಿಂದ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ. ಹಿಂದುಳಿದವರು ಜಾತಿ ಹೆಸರಲ್ಲಿ ಸಮ್ಮೇಳನ ಮಾಡಿದರೆ ತಪ್ಪಲ್ಲ.ಆದರೆ ಮುಂದುವರಿದವರು ಜಾತಿ ಸಮ್ಮೇಳನಗಳನ್ನು ಮಾಡಬಾರದು. ಹಿಂದುಳಿದವರು ಸಂಘಟಿತರಾಗಿ ಸಮ್ಮೇಳನ ಮಾಡಬೇಕು. ಕೆಲವರು ಹೆಸರಿಗೆ ಮಾತ್ರ ಬಸವಣ್ಣನ ಹೆಸರು ಹೇಳುತ್ತಾರೆ. ಇವನಾರವ ಇವನಾರವ, ಇವನಮ್ಮವ ಇವನಮ್ಮವ ಎಂದು ವಚನ ಹೇಳುತ್ತಾರೆ. ಪಕ್ಕದಲ್ಲಿ ನಿಂತು ನೀವು ಯಾವ ಜಾತಿ ಎಂದು ಕೇಳುತ್ತಾರೆ. ನಮ್ಮ ಸಂವಿಧಾನ ಅತ್ಯಂತ ಒಳ್ಳೆಯದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.