ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ತುಮಕೂರು : ರಾಜ್ಯ ಸರಕಾರ 24 ಸಾವಿರ ವಿಶೇಷ ಬೆಡ್ ಹಾಗೂ 4000 ಅಕ್ಸಿಜ್ಹನ್ ಬೆಡ್‌ಗಳನ್ನು ನಿರ್ಮಾಣ ಮಾಡುವ ಮೂಲಕ 50 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಗದಿರುವ ಕೆಲಸವನ್ನು ಕೇವಲ ಒಂದು ವರ್ಷದಲ್ಲಿ ಮಾಡಿದೆ.ಆದರೂ ವಿರೋಧ ಪಕ್ಷಗಳು ಸರಕಾರವನ್ನು ಟೀಕಿಸುತ್ತಿರುವುದು ಎಷ್ಟು ಸರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ನಿರ್ಮಾಣಗೊಳ್ಳಲಿರುವ ಕ್ಯಾನ್ಸರ್ ಆಸ್ಪತ್ರೆ ಹಾಗೂ ತಾಯಿ, ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತಿದ್ದ ಅವರು, ಸರಕಾರ ಆರೋಗ್ಯ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ವಿರೋಧ ಪಕ್ಷಗಳು ಭ್ರಷ್ಟಾಚಾರ ನಡೆದಿದೆ ಎಂದು ಬೊಬ್ಬಿಡುತ್ತಾ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಸುತ್ತಿವೆ ಎಂದರು.
ಕೋರೋನ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಸರಕಾರ ಆರೋಗ್ಯ ಇಲಾಖೆಯ ಮೂಲಭೂತ ಸೌಕರ್ಯಗಳ ಕೊರತೆಯಿಂದ ಇಕ್ಕಟ್ಟಿಗೆ ಸಿಲಕಿದ್ದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಕಂದಾಯ, ಪೊಲೀಸ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಕಾರದೊಂದಿಗೆ ಸಮರ್ಥವಾಗಿ ಎದುರಿಸಿದೆ.ಆರೋಗ್ಯ ಇಲಾಖೆಯ ಸಿಬ್ಬಂದಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವುದರಿಂದ ನಮಗೂ ಸೋಂಕು ತಗುಲಲಿದೆ ಎಂದು ಗೊತ್ತಿದ್ದರೂ,ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಅತ್ಯಂತ ಮಾನವೀಯತೆಯಿಂದ ಚಿಕಿತ್ಸೆ ನೀಡಿದ್ದಾರೆ.ಇದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು.
ಒಂದೆಡೆ ಆರೋಗ್ಯ ಸೇವೆಗಳು ಹೆಚ್ಚಾಗುವುದು ಸಂತೋಷವಾದರೂ,ಇನ್ನೊಂದೆಡೆ ನಮ್ಮಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕದ ವಿಚಾರವಾಗಿದೆ.ಬೆಂಗಳೂರಿನ ಮೇಲಿನ ಒತ್ತಡ ತಪ್ಪಿಸಬೇಕೆಂದರೆ ತುಮಕೂರಿನಲ್ಲಿ ಎಲ್ಲಾ ರೀತಿಯ ಆರೋಗ್ಯ ಸೇವೆಗಳು ದೊರೆಯುವಂತಾಗಬೇಕು.ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕೋರಿಕೆಯಂತೆ ಜಯದೇವ ಹೃದ್ರೋಗ ಆಸ್ಪತ್ರೆಯ ಒಂದು ವಿಭಾಗವನ್ನು ಇಲ್ಲಿಗೆ ಮಂಜೂರು ಮಾಡಿಕೊಡಲು ಸಿದ್ದನಿದ್ದು,ಇದಕ್ಕೆ ಅಗತ್ಯವಿರುವ ಸಿದ್ದತೆ ಮಾಡಿಕೊಳ್ಳಲು ಸೂಚನೆ ನೀಡಿದರು.
ಯುನೈಟೆಡ್ ನೇಷನ್‌ನ ಸಲಹೆಯಂತೆ 2030ರ ವೇಳೆ ತಾಯಿ ಮತ್ತು ಮಕ್ಕಳ ಸಾವಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ತಾಯಿ,ಮುಗು ಆಸ್ಪತ್ರೆಗಳನ್ನು ರಾಷ್ಟ್ರೀಯ ಹೆಲ್ತ್ ಮಿಷನ್ ಅಡಿಯಲ್ಲಿ ತೆರೆಯಲು ತೀರ್ಮಾನ ಕೈಗೊಳ್ಳಲಾಗಿದೆ.ಇದರ ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ಚಿಂತನೆ ನಡೆಸಲಾಗುವುದು.ತುಮಕೂರಿನಲ್ಲಿ ಇಂದು ಶಂಕುಸ್ಥಾಪನೆಗೊಂಡಿರುವ 100 ಕೋಟಿ ರೂ ವೆಚ್ಚದ ಕ್ಯಾನ್ಸರ್ ಆಸ್ಪತ್ರೆಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸುವಂತೆ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರಿಗೆ ಮುಖ್ಯಮಂತ್ರಿ ಬೊಮ್ಮಯಿ ಆದೇಶ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ತುಮಕೂರು ಬೆಂಗಳೂರಿನ ಹೆಬ್ಬಾಗಿಲು ಇದ್ದಂತೆ. ಹಲವಾರು ಜಿಲ್ಲೆಗಳ ಜನರು ತುಮಕೂರನ್ನು ದಾಟಿ ಬೆಂಗಳೂರಿಗೆ ಬರಬೇಕಿದೆ.ಜಿಲ್ಲೆಯಲ್ಲಿ ಪ್ರಸ್ತುತ ಮಂಜೂರಾಗಿರುವ
ಸಿದ್ದಗಂಗಾ ಮೆಡಿಕಲ್ ಕಾಲೇಜಿನ ಜೊತೆಗೆ, ಶ್ರೀಸಿದ್ದಾರ್ಥ ಮತ್ತು ಶ್ರೀದೇವಿ ಮೆಡಿಕಲ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಮಡಿಕಲ್ ಕಾಲೇಜುಗಳು ಇರುವಲ್ಲಿ ಜನರಿಗೆ ಮೂರನೇ ಹಂತದ ಆರೋಗ್ಯ ಸೇವೆಗಳು ಸುಲಭವಾಗಿ ಕೈಗೆಟುಕಲಿವೆ. ಪ್ರಸ್ತುತ ತಾಯಿ ಮತ್ತು ಮಗುವಿನ ಆಸ್ಪತ್ರೆಯನ್ನು ರಾಷ್ಟ್ರೀಯ ಹೆಲ್ತ್ ಮಿಷನ್ ಅಡಿಯಲ್ಲಿ ಕೇಂದ್ರದ 60, ರಾಜ್ಯದ 40 ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.ರಾಜ್ಯದ ತಾಯಿ ಮತ್ತು ಮಗುವಿನ ಮರಣ ಪ್ರಮಾಣದ ಸರಕಾರಿ ಕೇಂದ್ರ ಸರಕಾರದ ಸರಾಸರಿಗಿಂತಲೂ ಕಡಿಮೆ ಇದ್ದರೂ ಸಹ,2025ರ ವೇಳೆಗೆ 125 ತಾಯಿ ಮಗು ಆಸ್ಪತ್ರೆ ತೆರೆಯಲು ಮುಂದಾ ಗಿದ್ದೇವೆ.ಯುವಜನತೆಗೆ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಕ್ಯಾನ್ಸರ್ ರೋಗ ನಿಮೂರ್ಲನೆಗೆ ಮುಂದಾಗುವಂತೆ ಕರೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ,ಇಂದು ಶಂಕುಸ್ಥಾಪನೆಗೊಂಡ ತಾಯಿ ಮಗುವಿನ ಆಸ್ಪತ್ರೆ ಮತ್ತು ಕಿದ್ವಾಯಿ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿರುವ ಕ್ಯಾನ್ಸರ್ ಆಸ್ಪತ್ರೆಗೆ 2.10 ಎಕರೆ ಜಾಗ ನೀಡಲಾಗಿದೆ.ಇದರ ಜೊತೆಗೆ ಜಯದೇವ ಹೃದ್ರೋಗ ಆಸ್ಪತ್ರೆಯ ಒಂದು ಭಾಗವನ್ನು ತುಮಕೂರು ಜಿಲ್ಲೆಗೆ ನೀಡುವಂತೆ, ಇದರ ಜೊತೆಗೆ ತಿಪಟೂರು ಭಾಗದಲ್ಲಿ ಒಂದು ಮೆಡಿಕಲ್ ಕಾಲೇಜು,ತುಮಕೂರು ಜಿಲ್ಲಾಸ್ಪತ್ರೆಯ ಆವರಣದಲ್ಲಿ ಒಂದು ಪಿ.ಜಿ.ಸೆಂಟರ್ ತೆರೆಯಲು ಅವಕಾಶ ನೀಡುವಂತೆ ಮುಖ್ಯಮಂತ್ರಿಗಳ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ವಹಿಸಿದ್ದರು.ವೇದಿಕೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್,ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ರಾಜೇಶ್ ಗೌಡ,ಚಿದಾನಂದ್ ಎಂ.ಗೌಡ, ಮೇಯರ್ ಬಿ.ಜಿ.ಕೃಷ್ಣಪ್ಪ,ವಿವಿಧ ಮಂಡಳಿಗಳ ಅಧ್ಯಕ್ಷರಾದ ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ, ಕೆ.ಎಸ್.ಕಿರಣ್ ಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್,ಕೇಂದ್ರವಲಯ ಐಜಿ ಚಂದ್ರಶೇಖರ್,ಜಿಲ್ಲಾಧಿಕಾರಿ ವೈ.ಸಿ.ಪಾಟೀಲ್,ಸಿಇಓ ಡಾ.ವಿದ್ಯಾಕುಮಾರಿ,ಎಸ್ಪಿ ರಾಹುಲ್‌ಕುಮಾರ್ ಶಹಾಪುರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.