ಹುಳಿಯಾರು: ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ ೧೬ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು ಹೋಬಳಿಯ ಭಟ್ಟರಹಳ್ಳಿ ಕೆರೆಗೆ ಭದ್ರಾ ನಾಲೆಯಿಂದ ನೀರು ಪೂರೈಕೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯಕ್ಕೂ ಭದ್ರಾ ನಾಲೆಯಿಂದ ೧.೫ ಟಿಎಂಸಿ ನೀರನ್ನು ಹರಿಸಲಾಗುವುದು. ಅಲ್ಲದೆ ಜಲಾಶಯದಿಂದ ಈಗಾಗಲೇ ಹುಳಿಯಾರು ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದ್ದರೂ ಅಸಮರ್ಪಕ ಹಾಗೂ ಅಶುದ್ಧ ನೀರು ಪೂರೈಕೆಯಾಗುತ್ತಿರುವ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ನೀರು ಹರಿದ ನಂತರದ ದಿನಗಳಲ್ಲಿ ಸಮರ್ಪಕ ಹಾಗೂ ಶುದ್ಧ ನೀರ ಪೂರೈಕೆಗೆ ಹೆಚ್ಚಿನ ಆಧ್ಯತೆ ಕೊಡಲಾಗುವುದು ಎಂದರಲ್ಲದೆ ಜಲಾಶಯದಿಂದ ಕೆಂಕೆರೆ, ಹೊಯ್ಸಲಕಟ್ಟೆ ಹಾಗೂ ಗಾಣಧಾಳು ಪಂಚಾಯ್ತಿಯ ಹಳ್ಳಿಗಳಿಗೂ ಮಲ್ಟಿ ವಿಲೇಜ್ ಡ್ರಿಂಕಿAಗ್ ವಾಟರ್ ಸ್ಕೀಂನಲ್ಲಿ ಕುಡಿಯಲು ನೀರು ಕೊಡಲಾಗುವುದು ಎಂದು ಭರವಸೆ ನೀಡಿದರು.
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹೇಮಾವತಿ ನೀರನ್ನು ತಾಲೂಕಿನ ಕೆರೆಗಳಿಗೆ ಹರಿಸುವ ಕಾಮಗಾರಿಯನ್ನು ಕಳೆದ ವರ್ಷ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ನೀರನ್ನೂ ಸಹ ಹರಿಸಲಾಗಿತ್ತು. ಸಾಸಲು, ಶೆಟ್ಟಿಕೆರೆ ಕೆರೆಗಳು ಹಾಗೂ ಕೆಲ ಚೆಕ್‌ಡ್ಯಾಮ್ ತುಂಬುವುದರೊಳಗೆ ಜಲಾಶಯದಲ್ಲಿ ನೀರಿನ ಅಲಭ್ಯತೆಯಿಂದಾಗಿ ತಿಮ್ಲಾಪುರ ಕೆರೆಗೆ ನೀರು ಹರಿಯುವ ಮೊದಲೆ ನಿಲ್ಲಿಸಲಾಗಿತ್ತು. ಈ ವರ್ಷ ಮತ್ತೆ ಹೇಮಾವತಿ ನೀರು ಹರಿಸುತ್ತಿದ್ದು ಇನ್ನದಿನೈದು ದಿನಗಳಲ್ಲಿ ತಿಮ್ಲಾಪುರ ಕೆರೆಗೆ ನೀರು ಬರುವ ಸಾಧ್ಯತೆಯಿದೆ. ಅಲ್ಲದೆ ತಿಮ್ಲಾಪುರ ಕೆರೆ ತುಂಬಿದ ನಂತರ ಹುಳಿಯಾರು ಕೆರೆಗೂ ಸಹ ನೀರು ಹರಿಸಲಾಗುವುದು ಎಂದು ತಿಳಿಸಿದರು.
ತಾಪಂ ಮಾಜಿ ಸದಸ್ಯ ಕೆಂಕೆರೆ ನವೀನ್ ಅವರು ಮಾತನಾಡಿದರು.ಎಇ ನರಸಿಂಹರಾಜು, ಗುತ್ತಿಗೆದಾರ ಭಾಸ್ಕರರೆಡ್ಡಿ, ತಾಪಂ ಸದಸ್ಯ ಕೇಶವಮೂರ್ತಿ, ಮಾಜಿ ಸದಸ್ಯ ನಿರಂಜನಮೂರ್ತಿ, ವಸಂತಯ್ಯ, ಮುಖಂಡರಾದ ಬರಕನಹಾಲ್ ವಿಶ್ವನಾಥ್, ಗ್ರಾಪಂ ಸದಸ್ಯ ದಿನೇಶ್, ಕೆ.ಕೆ.ಹಹನುಮಂತಪ್ಪ, ಪಪಂ ಸದಸ್ಯರುಗಳಾದ ಹೇಮಂತ್, ಬೀಬಿಫಾತೀಮಾ, ಶೃತಿ, ಸಂಧ್ಯ, ಮಾಜಿ ಸದಸ್ಯ ಬಡ್ಡಿಪುಟ್ಟರಾಜು,ಗ್ರಾಪಂ ಮಾಜಿ ಅಧ್ಯಕ್ಷ ಕಿಟ್ಟಪ್ಪ, ಮಾಜಿ ಸದಸ್ಯ ಅಶೋಕ್‌ಬಾಬು, ರೇವಣ್ಣ, ಯಳನಾಡು ಜಯಸಿಂಹ, ಭಜರಂಗದಳದ ಮೋಹನ್ ಇದ್ದರು.