ತುಮಕೂರು: ನಗರದ ಸಿದ್ದಗಂಗಾ ಮಠಕ್ಕೆ ವಸತಿ ಸಚಿವ ವಿ. ಸೋ ಮಣ್ಣ ಅವರು ಇಂದು ಬೆಳಿಗ್ಗೆ ಭೇಟಿ ನೀಡಿ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಗದ್ದುಗೆ ದರ್ಶನ ಪಡೆದ ಬಳಿಕ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಕೊಠಡಿಗೆ ತೆರಳಿ ಶ್ರೀಗಳಿಗೆ ಫಲತಾಂಬೂಲ ನೀಡಿ ಶಾಲು ಹೊದಿಸಿ ಆಶೀರ್ವಾದ ಪಡೆದರು. ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸಹ ಸಚಿವ ಸೋಮಣ್ಣ ಅವರಿಗೆ ಫಲತಾಂಬೂಲ ನೀಡಿ ಆಶೀರ್ವದಿಸಿದರು.
ನಂತರ ಮಾತನಾಡಿದ ಸಚಿವ ಸೋಮಣ್ಣ ಅವರು, ಕಾರ್ಯನಿಮಿತ್ತ ದಾವಣಗೆರೆಗೆ ತೆರಳುತ್ತಿದ್ದೆ. ಹಾಗಾಗಿ ಶ್ರೀಮಠಕ್ಕೆ ಬಂದು ಹಿರಿಯ ಶ್ರೀಗಳ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದೇನೆ ಎಂದರು.ಈ ಭಾಗದಲ್ಲಿ ನಾನು ಎಷ್ಟು ಬಾರಿ ಸಂಚರಿಸಿದರೂ ಶ್ರೀಮಠಕ್ಕೆ ಬಂದು ಹೋಗುವುದು ರೂಢಿ. ಹಾಗಾಗಿ ನಾನು ಮಠಕ್ಕೆ ಬರುವುದು, ಹೋಗುವುದು ಹೊಸತೇನಲ್ಲ ಎಂದರು. ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮುಖಂಡರಾದ ಹೆಬ್ಬಾಕ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.