ಗುಬ್ಬಿ : ಕಾಂಗ್ರೆಸ್ ಸಂಸ್ಕೃತಿ ಬಿಂಬಿಸಿದ ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಏಕವಚನ ಪ್ರಯೋಗ ಮಾಡಿ ವಿರೋಧ ಪಕ್ಷದ ಮುಖಂಡ ದಿಲೀಪ್ ಅವರನ್ನು ನಿಂದಿಸಿದ್ದಲ್ಲದೆ ಮೈನಿಂಗ್ ಕಳ್ಳ ಎಂಬ ಆರೋಪ ಮಾಡಿದ್ದರು. ಆದರೆ ವಾಸ್ತವದಲ್ಲಿ ಮೈನಿಂಗ್ ಕಳ್ಳತನ ಮಾಡಿ 20 ಕೋಟಿ ದಂಡ ಕಟ್ಟಿದವರು ಯಾರು ಎಂಬುದು ವೆಂಕಟೇಶ್ ಅವರಿಗೆ ತಿಳಿದಿಲ್ಲ ಎಂದು ಕೆಎಂಎಫ್ ಮಾಜಿ ನಿರ್ದೇಶಕ ಚಂದ್ರಶೇಖರ್ ಕುಟುಕಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಅಕ್ರಮ ಮೈನಿಂಗ್ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರು ಒಬ್ಬರ ಮೇಲೆ ಆರೋಪ ಹಾಗೂ ನಿಂದನೆ ಮಾಡುವಾಗ ನಾಲಿಗೆ ಬಿಗಿ ಹಿಡಿದಿರಬೇಕು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗೌರವ ತರುವ ರೀತಿ ನಡೆದುಕೊಳ್ಳದೇ ಎಲ್ಲರ ಮೇಲೂ ಏಕವಚನ ಪ್ರಯೋಗ ಮಾಡುವ ಮೊದಲು ತಾವು ಎಲ್ಲಿದ್ದೀರಿ ಹೇಗಿದ್ದೀರಿ ಎಂಬುದು ಮರೆಯಬಾರದು ಎಂದು ಛೇಡಿಸಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಮಾತನಾಡಿ ಮಾಧ್ಯಮ ಸುದ್ದಿಗೋಷ್ಠಿ ಮಾಡಿದ ಕಾಂಗ್ರೆಸ್ ಅಧ್ಯಕ್ಷರಿಂದ ಒಳ್ಳೆಯ ಸುದ್ದಿ ನಿರೀಕ್ಷೆ ಮಾಡಿದ್ದೆ ಆದರೆ ಹೇಮಾವತಿ ಹೋರಾಟದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಎಲ್ಲಾ ಮುಖಂಡರ ಬಗ್ಗೆ ಏಕವಚನ ಪ್ರಯೋಗ ಮಾಡಿ ನಿಂದಿಸಿ ವಿಷಯಾಂತರ ಮಾಡಿ ಹೋರಾಟ ದಿಕ್ಕು ತಪ್ಪಿಸುವ ಹುನ್ನಾರ ಮಾಡಲಾಗಿದೆ. ಯಾವುದೇ ರಾಜಕೀಯ ಲಾಭವಿಲ್ಲದೆ ರೈತಪರ ಹೋರಾಟ ಮಾಡುತ್ತಿದ್ದೇವೆ. ಇದರ ತೀವ್ರತೆಗೆ ದಂಗಾಗಿ ಈ ರೀತಿಯ ಹತಾಶೆ ನುಡಿಗಳು ಬಂದಿವೆ ಎಂದರು.
ಜೆಡಿಎಸ್ ಮುಖಂಡ ಜಿ.ಡಿ.ಸುರೇಶ್ ಗೌಡ ಮಾತನಾಡಿ ಬಕೇಟ್ ಹಿಡಿಯುವ ಕೆಲಸ ಮಾಡುವ ಕಾಂಗ್ರೆಸ್ ಕೆಲ ಮುಖಂಡರು ಶಾಸಕರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ಮೇಲ್ನೋಟಕ್ಕೆ ವಿರೋಧವಿದೆ ಎಂದು ಹೇಳಿಕೆ ನೀಡಿ ಒಳಗೆ ಕಾಮಗಾರಿಗೆ ಸಾಥ್ ನೀಡುತ್ತಿರುವ ಶಾಸಕರು ಸಿಎಂ ಹಾಗೂ ಡಿಸಿಎಂ ಜೊತೆ ಚರ್ಚಿಸಿದ ಪತ್ರ ವ್ಯವಹಾರ ಜನರ ಮುಂದೆ ಪ್ರದರ್ಶಿಸಬೇಕು ಎಂದರು.
ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯತೀಶ್ ಮಾತನಾಡಿ ಬಿಜೆಪಿಯಲ್ಲಿ ರಾಜಕೀಯ ಚೆಡ್ಡಿ ಹಾಕಿದ ವೆಂಕಟೇಶ್ ಈಗ ಕಾಂಗ್ರೆಸ್ ಅಧ್ಯಕ್ಷರಾಗಿ ಗೌರವಯುತ ನಡವಳಿಕೆ ಮರೆತಿದ್ದಾರೆ. ಶಾಸಕ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಿದ ದಿಲೀಪ್ ಹಾಗೂ ನಾಗರಾಜು ಅವರನ್ನು ಯಾರೆಂದು ಗೊತ್ತಿಲ್ಲ ಎನ್ನುವ ಉಂಬತನ ಒಳ್ಳೆಯದಲ್ಲ. ಯಾವ ಚುನಾವಣೆಯಲ್ಲಿ ಸ್ಪರ್ಧಿಸದ ವೆಂಕಟೇಶ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಚುನಾಯಿತ ಪ್ರತಿನಿಧಿ ಎಂದು ತಿಳಿದಿದ್ದಾರೆ ಎಂದು ಛೇಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಗರನಹಳ್ಳಿ ವಿಜಯ್ ಕುಮಾರ್ ಸೇರಿದಂತೆ ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ಜಿ.ಎನ್ಅಣ್ಣಪ್ಪಸ್ವಾಮಿ, ಬಿಜೆಪಿ ರೈತಮೋರ್ಚಾ ಸಿದ್ದರಾಮಯ್ಯ, ವೀರಶೈವ ಮಹಾಸಭಾ ಅಧ್ಯಕ್ಷ. ಮಂಜುನಾಥ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗಣ್ಣ, ಮುಖಂಡರಾದ ರಾಜಣ್ಣ, ಡಿ.ರಘು, ಮಡೇನಹಳ್ಳಿ ಲೋಕೇಶ್, ಹೊಸಹಳ್ಳಿ ರೇಣುಕಾ ಪ್ರಸಾದ್, ಹೊನ್ನಪ್ಪ ಇತರರು ಇದ್ದರು.