ಗುಬ್ಬಿ :- ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿರುವ ಅಂಕಳಕೊಪ್ಪ ಗ್ರಾಮದ ಸುಮಾರು 65 ಕುಟುಂಬಗಳನ್ನು ಏಕಾಏಕಿ ಒಕ್ಕಲೆಬ್ಬಿಸಲು ಮುಂದಾಗಿ ಗುಂಡು ತೋಪು ನೆಪದಲ್ಲಿ ಮುಗ್ಧ ಜನರ ಬದುಕಿನಲ್ಲಿ ಆಟವಾಡಲು ಮುಂದಾದರೆ ಉಪವಾಸ ಸತ್ಯಾಗ್ರಹದ ಜೊತೆಗೆ ಉಗ್ರ ಹೋರಾಟಕ್ಕೆ ಮುಂದಾಗಲಾಗುವುದು ಎಂದು ಮಾಜಿ ಶಾಸಕ ಮಸಾಲ ಜಯರಾಮ್ ತಾಲೂಕು ಆಡಳಿತದ ವಿರುದ್ಧ ಎಚ್ಚರಿಕೆ ನೀಡಿದರು.
ತಾಲೂಕಿನ ಸಿ.ಎಸ್ ಪುರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮಾಜಿ ಶಾಸಕರ ಸ್ವಗ್ರಾಮ ಅಂಕಳಕೊಪ್ಪ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೂರಾರು ವರ್ಷಗಳಿಂದ ಮನೆ ಕಟ್ಟಿಕೊಂಡು ಬದುಕು ನಡೆಸುತ್ತಿರುವ 500 ಕ್ಕೂ ಹೆಚ್ಚು ಮಂದಿ ಬಡವರನ್ನು ತಾಲೂಕು ಆಡಳಿತ ಒಕ್ಕಲೆಬ್ಬಿಸಿ ಅನ್ಯಾಯ ಮಾಡಲು ಮುಂದಾಗಿರುವುದು ಸರಿಯಲ್ಲ ಈಗಾಗಲೇ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಮಂದಿಗೆ ಈ ಜಾಗ ಗುಂಡು ತೋಪು ಕೂಡಲೇ ಜಾಗ ಖಾಲಿ ಮಾಡಿ ಎಂದು ಹೇಳಿದರೆ ನಾವು ಸುಮ್ಮನೆ ಕೂರಲ್ಲ ಎಂದು ಎಚ್ಚರಿಸಿದರು.
ಹಲವಾರು ವರ್ಷಗಳಿಂದ ನಮ್ಮ ಊರಿನ ಗ್ರಾಮಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ವಾಸವಿರುವ 65 ಮನೆಗಳಿಗೆ ಈ ಖಾತೆ ಮಾಡಿಕೊಟ್ಟು ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರಿಂದ ತೆರಿಗೆ ಕಟ್ಟಿಸಿಕೊಂಡಿದ್ದು ಹಕ್ಕುಪತ್ರಗಳು ಕೂಡ ಎಲ್ಲರ ಬಳಿ ಲಭ್ಯವಿದ್ದು ಜೊತೆಗೆ ಅವರಿಗೆ ಸರ್ಕಾರದ ವತಿಯಿಂದ ಮನೆಗಳನ್ನು ಮಂಜೂರಾಗಿದ್ದು ಆದರೆ ಸುಮಾರು 150 ವರ್ಷಗಳಿಂದ ಇಲ್ಲದ ಗುಂಡು ತೋಪಿನ ಕಾನೂನು ಈಗ ಹೇಗೆ ಬಂತು ಯಾರ ಚಿತಾವಣೆಯಿಂದ ಹೀಗೆ ನಡೆದುಕೊಳ್ಳುತ್ತಿದ್ದೀರಾ ಎಂಬುದು ತಿಳಿದಿಲ್ಲ ಎಂದರು.
ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿ ಈಗ ಜಾಗ ಖಾಲಿ ಮಾಡಿ ಎಂದರೆ ಎಲ್ಲಿಗೆ ಹೋಗೋದು ಈ ಕೂಡಲೇ ಇಂತಹ ಬಡವರನ್ನು ದಂಗೆ ಎಬ್ಬಿಸುವ ಕ್ರಮದ ಹಿಂದೆ ಸರಿದು ಬಡವರ ಪರ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ನಿಲ್ಲಬೇಕಿದೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಡಿಸಿ ಕಚೇರಿ ಮುಂದೆ ಹೋರಾಟ ಶತಸಿದ್ಧ ಎಂದು ತಿಳಿಸಿದರು.
ವಾಸಕ್ಕೆ ಯೋಗ್ಯವಿಲ್ಲದ ಮೇಲೆ ಆ ಜಾಗಕ್ಕೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿದ್ದು ಯಾರು.? ತಾಲೂಕಿನಾದ್ಯಂತ ಮೀಸಲು ಅರಣ್ಯ ಪ್ರದೇಶಗಳಲ್ಲಿ ಮಂಜೂರು ಮಾಡಲಾಗದ ಅದೆಷ್ಟೋ ಜಾಗವನ್ನು ರೈತರಿಗೆ ಮಂಜೂರು ಮಾಡಿಕೊಡಲಾಗಿರುವ ಎಷ್ಟೊ ನಿರ್ದೇಶನಗಳು ನಮ್ಮ ಮುಂದಿವೆ ಈಗಿರುವಾಗ ಬಡವರು ನೂರಾರು ವರ್ಷಗಳಿಂದ ಮನೆಗಳನ್ನು ಕಟ್ಟಿಕೊಂಡು ಬದುಕುತ್ತಿರುವ ಎರಡು ಎಕರೆ ಗುಂಡು ತೋಪು ಜಾಗವನ್ನು ಜೊತೆಗೆ ಊರಿನಲ್ಲಿ ಅಭಿವೃದ್ಧಿ ಹೊಂದಿರುವ ಪ್ರದೇಶವನ್ನು ಬಡವರಿಗೆ ನೀಡಲು ಮುಂದಾಗದೆ ಜಾಗ ಖಾಲಿ ಮಾಡಿ ಎಂಬುದು ಎಷ್ಟರಮಟ್ಟಿಗೆ ಸರಿ. ಇದನ್ನು ಮೀರಿ ಮನೆ ಒಡೆಯಲು ಮುಂದಾದರೆ ಇಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ಮೂಲ ಕಾರಣ ತಾಲೋಕು ಆಡಳಿತವಾಗಲಿದೆ ಎಂದು ತಿಳಿಸಿದರು.