ಕರುಳ ಬಳ್ಳಿಗೆ ವಿಷ ಉಣಿಸಿ ತಾನು ವಿಷ ಕುಡಿದ ತಾಯಿ : ಮಗು ಸಾವು, ತಾಯಿಯ ಜೀವನ್ಮರಣ ಹೋರಾಟ.!!
ಗುಬ್ಬಿ :-ಹೆತ್ತ ತಾಯಿಯೊಬ್ಬಳು ಸ್ವಂತ ಕರುಳು ಬಳ್ಳಿಯಾದ ತನ್ನ ಹೆಣ್ಣು ಮಗುವಿಗೆ ವಿಷ ಉಣಿಸಿ ಕೊಂದು ತಾನು ವಿಷ ಕುಡಿದು ಆತ್ಮಹತ್ಯೆಗೆ ಮುಂದಾಗಿ ನಂತರ ಆಸ್ಪತ್ರೆಗೆ ದಾಖಲಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಬಳಿಯ ಬೊಮ್ಮರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಬಳಿಯ ಬೊಮ್ಮರಸನಹಳ್ಳಿಯಲ್ಲಿ ವಾಸವಾಗಿದ್ದ ಮಧುಗಿರಿ ಮೂಲದ ಇಂದ್ರಮ್ಮ ಸ್ವಂತ ಮಗಳಿಗೆ ವಿಷ ಉಣಿಸಿ ಕೊಲೆಗೈದ ಮಹಿಳೆ ಎನ್ನಲಾಗಿದ್ದು ದೀಕ್ಷಿತ ಎಂಬ 6 ವರ್ಷದ ಪುಟ್ಟ ಬಾಲಕಿ ಮೃತ ದುರ್ದೈವಿಯಾಗಿದ್ದು. ಅತ್ತೆ ನರಸಮ್ಮ ಸೊಸೆಯ ಮೇಲೆ ನೀಡಿದ ದೂರಿನ ಮೇರೆಗೆ ಗುಬ್ಬಿ ಠಾಣೆಯಲ್ಲಿ ಕೊಲೆ ಆರೋಪದ ಪ್ರಕರಣ ದಾಖಲಾಗಿದೆ.
ಮೃತ ಮಗುವಿನ ತಾಯಿ ಇಂದ್ರಮ್ಮ ಶ್ರೀರಂಗಯ್ಯ ಎಂಬುವರ ಜೊತೆ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಗಂಡನ ಬಿಟ್ಟು ಗುಬ್ಬಿ ಮೂಲದ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿ ಅವನ ಜೊತೆ ನೆಲೆಸಿದ್ದರು ಎಂದು ಹೇಳಲಾಗುತ್ತಿದ್ದು ಜೊತೆಗೆ ಈ ವಿಷಪ್ರಾಶನದ ಹಿಂದಿನ ಕತೆಯ ಬಗ್ಗೆ ವಿಷ ಕುಡಿದು ಚಿಂತಾಜನಕ ಸ್ಥಿತಿಯಲ್ಲಿರುವ ಮಗುವಿನ ತಾಯಿಯ ಹೇಳಿಕೆಯ ಮೇಲೆ ಪ್ರಕರಣ ಗಂಭೀರತೆ ಪಡೆಯಲಿದ್ದು ಈಗಾಗಲೇ ಎಲ್ಲಾ ಆಯಾಮಗಳಲ್ಲಿಯೂ ಗುಬ್ಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು ಪ್ರಕರಣದ ನೈಜತೆ ತನಿಖೆಯಿಂದ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.