ಗುಬ್ಬಿ: ನಿರಂತರ ಸುರಿದ ಬಾರಿ ಮಳೆಗೆ ಕುಸಿದ ಮನೆ ಗೋಡೆಗೆ ಸಿಲುಕಿ ಮಹಿಳೆಯೊಬ್ಬರು ಮೃತ ಪಟ್ಟ ಧಾರುಣ ಘಟನೆ ಬುಧವಾರ ಬೆಳಿಗ್ಗೆ ತಾಲ್ಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದ್ದು ಈ ಹಿನ್ನೆಲೆಯಲ್ಲಿ ಮೃತಪಟ್ಟ ಮಹಿಳೆಯ ಹಳೆಯ ಪ್ರಕರಣವನ್ನು ಒಮ್ಮೆ ಮತ್ತೆ ತಿರುಗಿ ನೋಡುವಂತೆ ಮಾಡಿದೆ.
ತೋಟದ ಮನೆಯಲ್ಲಿ ವಾಸವಾಗಿದ್ದ ನಿವಾಸಿ ಸಹನಾ(27) ಮೃತಪಟ್ಟ ದುರ್ದೈವಿ. ಬೆಳಿಗ್ಗೆ ಸ್ನಾನಕ್ಕೆ ಹಳೇ ಮನೆಗೆ ತೆರಳಿದ ಸಹನಾ ಗೋಡೆ ಕುಸಿದು ಮಣ್ಣಿನಡಿ ಸಿಲುಕಿದ್ದು ಅದನ್ನು ಗಮನಿಸಿದ ಪೋಷಕರು ಪ್ರಜ್ಞೆ ತಪ್ಪಿರುವ ಸಾಧ್ಯತೆ ಇದೆ ಎಂದು ಕೂಡಲೇ ಗ್ರಾಮಸ್ಥರ ಜೊತೆ ಸೇರಿ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಳೆಯ ಘಟನೆ ಮೆಲುಕು:- ಕಳೆದ ಐದು ತಿಂಗಳ ಹಿಂದೆ ಸಹನ ಅವರು ಸ್ವಗ್ರಾಮದ ರಜತ್ ಎಂಬಾತ ನನ್ನನ್ನು ಪ್ರೀತಿಸಿ ಮದುವೆಯಾಗಿದ್ದು ನಂತರ ಮನೆಯ ಪೋಷಕರೊಂದಿಗೆ ಸೇರಿ ಸಂಸಾರ ನಡೆಸಲು ನನ್ನ ಜೊತೆಗೆ ಬರದೇ ನನಗೆ ಮೋಸ ಮಾಡಲು ಮುಂದಾಗಿದ್ದಾರೆ ಎಂದು ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಅದರಂತೆ ಎಫ್ಐಆರ್ ದಾಖಲು ಮಾಡಿ ರಜತ್ ನನ್ನು ಜೈಲಿಗೆ ಕಳಿಸಿದ್ದು ತದನಂತರ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದು ಕೋರ್ಟ್ ನಲ್ಲಿ ಈ ಸಂಬಂಧ ಪ್ರಕರಣ ನಡೆಯುತ್ತಿರುವ ಸಂದರ್ಭದಲ್ಲಿ ಸಹನ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೋಷಕರು ತಿಳಿಸಿದ್ದು ಈ ನಡುವೆ ಮನೆಯ ಗೋಡೆ ಕುಸಿದು ಸಾವನ್ನಪ್ಪಿರುವ ಘಟನೆ ಹಳೆ ಪ್ರಕರಣವನ್ನು ಒಮ್ಮೆ ಮೆಲುಕು ಹಾಕುವಂತೆ ಮಾಡಿದೆ.