ಶ್ರೀ ಲಲಿತಾ ಹೋಮ : ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ರಿಂದ ಪುಣ್ಯಾಹುತಿ
ತುಮಕೂರು : ದಸರಾ ಉತ್ಸವ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಸ್ಕಂದಮಾತಾ ದೇವಿ(ಕರಗ) ರೂಪದಲ್ಲಿದ್ದ ಚಾಮುಂಡೇಶ್ವರಿ ದೇವಿಯ ಪೂಜೆಗಾಗಿ ಜರುಗಿದ ಶ್ರೀ ಲಲಿತಾ ಹೋಮದಲ್ಲಿ ಇಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಪಾಲ್ಗೊಂಡು ಪುಣ್ಯಾಹುತಿ ಅರ್ಪಿಸಿದರು.
ನವರಾತ್ರಿ ಪ್ರಯುಕ್ತ ಸಚಿವರು ಹಾಗೂ ಅವರ ಪತ್ನಿ ಕನ್ನಿಕಾ ಪರಮೇಶ್ವರ ದಂಪತಿಗಳು ಚಾಮುಂಡೇಶ್ವರಿ ದೇವಿಗೆ ಕುಂಕುಮಾರ್ಚನೆ, ಪುಷ್ಪಾರ್ಚನೆ ಪೂಜಾ ಸೇವೆ ಸಲ್ಲಿಸಿದರು. ಚಾಮುಂಡೇಶ್ವರಿ ದೇವಿಯ ಪೂಜಾ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕ ಗೌರಿಶಂಕರ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ತಹಶೀಲ್ದಾರ್ ರಾಜೇಶ್ವರಿ, ಮುಜರಾಯಿ ತಹಸೀಲ್ದಾರ್ ಸವಿತಾ, ಮತ್ತಿತರರು ಪಾಲ್ಗೊಂಡು ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿವಿಧ ಮಹಿಳಾ ಮಂಡಳಿಯ ಮಹಿಳಾ ಸದಸ್ಯರು ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸಿದರು.
ನವರಾತ್ರಿಯ ಶುಕ್ಲ ಪಕ್ಷದ ಪಂಚಮಿಯಂದು ದುರ್ಗೆಯ ಐದನೇ ಅವತಾರವಾಗಿರುವ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ ಅಥವಾ ಮುರುಗನ್. ಕಾರ್ತಿಕೇಯನ ತಾಯಿಯೇ ಸ್ಕಂದ ಮಾತೆ. ಕಾರ್ತಿಕೇಯನನ್ನು ತನ್ನ ತೊಡೆಯ ಮೇಲೆ ಕೂರಿಸಿರುವ ರೂಪದಲ್ಲಿ ಈ ದೇವಿಯು ಕಾಣಿಸಿಕೊಳ್ಳುತ್ತಾಳೆ. ಸ್ಕಂದಮಾತಾ ದೇವಿಯು ಸೂರ್ಯ ಮಂಡಲದ ದೇವಿ ಆದಕಾರಣ ಪೂಜೆಯಿಂದ ವಿಶೇಷವಾದಂತಹ ತೇಜಸ್ಸು ಮತ್ತು ಕಾಂತಿ ಲಭಿಸಿ ಪ್ರತಿಯೊಬ್ಬರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿ ಪರಸ್ಪರ ಅಪನಂಬಿಕೆ ಇದ್ದಲ್ಲಿ ಅದು ಸಹ ದೂರವಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.