ತುಮಕೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ನಗರದಲ್ಲಿ 155ನೇ ಗಾಂಧಿ ಜಯಂತಿ ಆಚರಣೆ ಹಾಗೂ ವ್ಯಸನಮುಕ್ತ ಸಾಧಕರ ಸಮಾವೇಶ ನಡೆಯಿತು.
ನಗರದ ಜೈನ ಭವನದಲ್ಲಿ ಸೋಮವಾರ ನಡೆದ ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಕನಹಳ್ಳಿ ಮಠದ ಗಂಗಾಧರ ಸ್ವಾಮೀಜಿ, ಒಳ್ಳೆಯ ಗುಣ, ಮೌಲ್ಯಗಳನ್ನು ನಾವು ಅಳವಡಿಸಿಕೊಂಡಾಗ ನಮ್ಮ ಬದುಕು ಮಾದರಿಯಾಗುತ್ತದೆ, ಸ್ವಾಸ್ಥö್ಯ ಸಮಾಜ ನಿರ್ಮಾಣವೂ ಸಾಧ್ಯವಾಗುತ್ತದೆ. ನಾವೂ ಸಂಸ್ಕಾರವಂತರಾಗಿ ನಮ್ಮ ಮಕ್ಕಳಿಗೂ ಸಂಸ್ಕಾರ ಕಲಿಸಿದರೆ ಸಂಸಾರ, ಸಮಾಜ ಉತ್ತಮವಾಗಿರುತ್ತದೆ ಎಂದು ಹೇಳಿದರು.
ಮಹಾತ್ಮ ಗಾಂಧೀಜಿಯವರ ತತ್ವ, ಆದರ್ಶಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಮಾರ್ಗಸೂಚಿಗಳಾಗಿವೆ. ಅವರ ಆದರ್ಶಗಳ ಪಾಲನೆಯಾದಾಗ ಅವರು ಕಂಡ ರಾಮರಾಜ್ಯದ ಕನಸು ನನಸಾಗಲು ಸಾಧ್ಯ. ಹಲವು ಮಹನೀಯರ ತ್ಯಾಗ, ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರö್ಯ ದೊರಕಿದೆ. ಅದರ ಮಹತ್ವ, ಆಶಯ ಅರಿತು ನಾವು ನಮ್ಮ ಬದುಕು ಕಟ್ಟಿಕೊಳ್ಳುವ ಜೊತೆಗೆ ದೇಶ ಕಟ್ಟುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ತಿಳಿಸಿದರು.
ನಮ್ಮ ಹಿರಿಯರು ಈ ಮಣ್ಣಿನಲ್ಲಿ ಬಹಳಷ್ಟು ಸತ್ವ, ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳನ್ನು ಅನುಸರಿಸಿಕೊಂಡು ಬಾಳಬೇಕು. ಸಮಾಜಕ್ಕೆ, ಸಂಸಾರಕ್ಕೆ ಒಳ್ಳೆಯ ವ್ಯಕ್ತಿಯಾಗಿ ಬಾಳಿದರೆ ಬದುಕು ಸಾರ್ಥಕವಾಗುತ್ತದೆ. ಇಂತಹ ಸುಧಾರಣಾ, ಸಬಲೀಕರಣದ ಹತ್ತಾರು ಯೋಜನೆಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ತಂದಿದೆ, ಅವುಗಳನ್ನು ಬಳಸಿಕೊಂಡು ಮಾದರಿಯಾಗಿ ಬಾಳಬೇಕು ಎಂದು ಸ್ವಾಮೀಜಿ ಹೇಳಿದರು.
ಉಪನ್ಯಾಸಕಿ ಆರತಿ ಪಟ್ರಮೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಗಾಂಧಿಜಿಯವರು ಸತ್ಯ, ಅಹಿಂಸೆ ಮಾರ್ಗವನ್ನು ನೆಚ್ಚಿಕೊಂಡು ಮಾಡಿದ ಸಾಧನೆ ಬಹು ದೊಡ್ಡದು. ಗಾಂಧಿಯವರು ಆಶಯ, ಆದರ್ಶ, ತತ್ವಗಳನ್ನು ಮುಂದಿನ ತಲೆಮಾರಿಗೆ ತಿಳಿಸಿ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದರು.
ನಮ್ಮ ಯುವಜನರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಮೌಲ್ಯಯುತ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಮಕ್ಕಳ ಮನಸಿನಲ್ಲಿ ಕ್ರೌರ್ಯ ತುಂಬಿಕೊಳ್ಳುತ್ತಿದೆ. ಅವರಿಗೆ ಮಾನವೀಯತೆ, ಸಂಸ್ಕಾರ ಕಲಿಸಿ ಅವರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸಿಬೇಕಾಗಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಅಮರನಾಥ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಗಾಂಧಿಜಿಯವರು ಕಂಡ ರಾಮರಾಜ್ಯದ ಕನಸನ್ನು ನನಸು ಮಾಡುವತ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಾಗಿದೆ. ಮಹಿಳಾ ಸಬಲೀಕರಣ, ಮದ್ಯವರ್ಜನ ಶಿಬಿರ, ಸ್ವಯಂ ಉದ್ಯೋಗದ ತರಬೇತಿ, ಸಾಲಸೌಲಭ್ಯ ನೀಡಿ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿಯಾಗಲು ಸಂಸ್ಥೆ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ಕುಡಿಸುವವರು ಸಾಕಷ್ಟು ಜನ ಇರುತ್ತಾರೆ ಕುಡಿತ ಬಿಡಿಸುವವರು ಯಾರು? ಎಂಬ ಪ್ರಶ್ನೆ ಎದುರಾಗುತ್ತದೆ. ಧರ್ಮಸ್ಥಳ ಸಂಸ್ಥೆ ಮದ್ಯವರ್ಜನ ಶಿಬಿರಗಳನ್ನು ಏರ್ಪಡಿಸಿ ಮದ್ಯವ್ಯಸನಿಗಳ ಮನಸು ಪರಿವರ್ತಿಸಿ ಕುಡಿತ ಬಿಡಿಸಿ ನವಜೀವನ ರೂಪಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ನ ಪ್ರಾದೇಶಕಿ ನಿರ್ದೇಶಕ ಎಂ.ಶೀನಪ್ಪ, ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ವೇದಿಕೆಯ ಉಪಾಧ್ಯಕ್ಷ ಗಣೇಶ್‌ಪ್ರಸಾದ್, ಮುಖಂಡ ಲೋಕೇಶ್ ಕಳ್ಳಿಪಾಳ್ಯ, ಜನಜಾಗೃತಿ ವೇದಿಕೆ ಸದಸ್ಯರಾದ ಪ್ರೇಮಾ ಹೆಗಡೆ, ಬಸವರಾಜು, ಶಿವಕುಮಾರ್, ಲಕ್ಕಣ್ಣ, ತೇಜಸ್‌ಕುಮಾರ್, ರವೀಂದ್ರಕುಮಾರ್, ವರಲಕ್ಷಿö್ಮ, ದಯಾನಂದ್ ಮತ್ತಿತರರು ಭಾಗವಹಿಸಿದ್ದರು.
ಮದ್ಯವರ್ಜನ ಶಿಬಿರ ಸೇರಿ ಕುಡಿತ ಮುಕ್ತರಾದವರು ಕುಡಿತ ಬಿಟ್ಟ ನಂತರ ತಮ್ಮ ಬದುಕಿನಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಭದ್ರಮ್ಮ ವೃತ್ತದಿಂದ ಜೈನ ಭವನದವರೆಗೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.