ಜಿಲ್ಲೆತುಮಕೂರುಸುದ್ದಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೃಂದ ಸಂಘಟನೆಗಳ ಅನಿರ್ದಿಷ್ಟಾವಧಿ ಹೋರಾಟ

ತುಮಕೂರು : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಸದಸ್ಯರು ಹಾಗೂ ಅಧಿಕಾರಿ, ಸಿಬ್ಬಂದಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೋಮವಾರದಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡ, ಹೋರಾಟ ಬೆಂಬಲಿಸಿದರು. ನಿಮ್ಮ ಬೇಡಿಕೆ ನ್ಯಾಯಯುತವಾಗಿವೆ, ಸರ್ಕಾರ ಸ್ಪಂದಿಸಿ ಕೂಡಲೇ ಬೇಡಿಕೆ ಈಡೇರಿಸಬೇಕು. ಈ ಬಗ್ಗೆ ತಾವು ವಿಧಾನ ಸಭೆ ಕಲಾಪದಲ್ಲಿ ನಿಮ್ಮ ಪರ ಧ್ವನಿ ಮಾಡುತ್ತೇನೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಾಷ್ಟç ಧ್ವಜಾರೋಹಣ ಕಾರ್ಯ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ನಾಗರಾಜು ಹೇಳಿದರು.
ರಾಜ್ಯದ ಶೇಕಡ 68ರಿಂದ 70 ಜನರಿಗೆ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯಿತಿಗಳಿಂದ ಶೇಕಡ 70ರಷ್ಟು ಸೇವೆಗಳನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಹಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಎಲ್ಲಾ ಸಿಬ್ಬಂದಿಗಳು ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಮತ್ತು ಇಲಾಖೆಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ರಾಜ್ಯದ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸುವುದು, ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಓಗಳನ್ನು ಬೇರೆ ತಾಲ್ಲೂಕಿಗೆ ವರ್ಗಾವಣೆ ಮಾಡುವ ನಿಯಮ ಕೈ ಬಿಡುವುದು, ಪಿಡಿಓಗಳ ಜೇಷ್ಠತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ ಬಡ್ತಿ ನೀಡಲು ಕ್ರಮ ತೆಗೆದುಕೊಳ್ಳಬೇಕು, ಎಂಜಿಎನ್‌ಆರ್‌ಇಜಿಎ ಯೋಜನೆ ಅನುಷ್ಠಾನಪಡಿಸುವ ಬಗ್ಗೆ ಗುರಿ ನಿಗದಿಯನ್ನು ಕೈ ಬಿಡುವುದು, ಅವಶ್ಯಕತೆ ಇಲ್ಲದ ಕಡೆಗಳಲ್ಲಿ ಗ್ರಾಮ ಪಂಚಾಯಿತಿ ಅಭಿಪ್ರಾಯ ಪಡೆದು ಕೂಸಿನ ಮನೆ ಮುಂದುವರೆಸುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ನಾಗರಾಜು ಒತ್ತಾಯಿಸಿದರು.

ಕುಂದುಕೊರತೆ ಪ್ರಾಧಿಕಾರವನ್ನು ಪೊಲೀಸ್ ಇಲಾಖೆಯ ಮಾದರಿಯಲ್ಲಿ ಸದೃಢಗೊಳಿಸುವುದು ಮತ್ತು ತಜ್ಞರ ಸಮಿತಿ ನೇಮಿಸುವುದು ಹಾಗೂ ಏಕರೂಪದ ಆಡಿಟ್ ಪದ್ದತಿ ಜಾರಿಗೊಳಿಸುವುದು, ಈಗಾಗಲೇ ಹಿಂಪಡೆಯಲಾಗಿರುವ ನರೇಗಾ ಲೋಕಾಯುಕ್ತ ಪ್ರಕರಣಗಳನ್ನು ಶಾಶ್ವತವಾಗಿ ಮುಕ್ತಾಯಗೊಳಿಸಿ ಲೋಕಾಯುಕ್ತಕ್ಕೆ ಮಾಹಿತಿ ನೀಡಬೇಕು. ಪಿಡಿಓಗಳಿಗೆ ಇತರೆ ಇಲಾಖೆಯಲ್ಲಿರುವ ಸಮಾನಾಂತರ ಹುದ್ದೆಗಳಿಗೆ ಶೇಕಡ 25ರಷ್ಟು ಹುದ್ದೆಗಳಿಗೆ ಅನುಮತಿ ನೀಡುವಂತೆ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ದೊಡ್ಡೇರಿ ವಿಜಯಕುಮಾರ್ ಮಾತನಾಡಿ, ಸಂವಿಧಾನದ ನಿಯಮದಂತೆ ಗ್ರಾಮ ಪಂಚಾಯಿತಿಗಳು ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಅಭಿವೃದ್ಧಿ ನಕ್ಷೆ ರಚಿಸಬೇಕು. ಜವಾಬ್ದಾರಿ ನಕ್ಷೆಯಲ್ಲಿರುವಂತೆ ಆಯಾ ಜವಾಬ್ದಾರಿಗೆ ಸಂಬಂಧಿಸಿದ ಅಧಿಕಾರ, ಹಣಕಾಸು, ಮಾನವ ಸಂಪನ್ಮೂಲ ಹಾಗೂ ಜವಾಬ್ದಾರಿ ನಿರ್ವಹಿಸುವ ಸ್ವಾತಂತ್ರವನ್ನು ಪಂಚಾಯಿತಿಗಳಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸುವಂತಾಗಲು ಪಂಚಾಯಿತಿ ಅಧ್ಯಕ್ಷರು ಕಾರ್ಯನಿರ್ವಾಹಕ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುವಂತಾಗಬೇಕು ಹಾಗೂ ಪಿಡಿಓ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಚೇರಿ ನಿರ್ವಹಣಾ ಕೈಪಿಡಿ ರಚಿಸಬೇಕು. ಗ್ರಾ ಪಂ ಸ್ಥಾಯಿ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತಾಗಲು ನಿಯಮ ರೂಪಿಸಬೇಕು ಎಂದರು.

ಗ್ರಾ ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ರಾಜ್ಯ ಶಿಷ್ಟಾಚಾರದ ವ್ಯಾಪ್ತಿಗೆ ತರಬೇಕು. ಗ್ರಾ ಪಂ ವ್ಯಾಪ್ತಿಯಲ್ಲಿ ನಡೆಯುವ ಸರ್ಕರದ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು, ಆಹ್ವಾನ ಪತ್ರಿಕೆ, ಶಿಲಾಫಲಕಗಳಲ್ಲಿ ಅವರ ಹೆಸರು ಮುದ್ರಿಸಬೇಕು, ವಿಧಾನಸೌಧ, ಇತರೆ ಕಚೇರಿಗಳಲ್ಲಿ ಹಾಗೂ ಟೋಲ್‌ಗಳಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿಜಯಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.
ಇದಲ್ಲದೆ ಗ್ರಾ ಪಂನ ಕಾರ್ಯದರ್ಶಿಗಳು, ದ್ವಿತೀಯ ದಜೆ ಲೆಕ್ಕ ಸಹಾಯಕರು, ಕರ ವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್, ನೀರಗಂಟಿ, ಜವಾನರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಒಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಎಸ್‌ಡಿಸಿಗಳ ಸಂಘದ ಅಧ್ಯಕ್ಷ ಶಾಹಿದ್ ಅಫ್ರಿದಿ ಸೇರಿದಂತೆ ಎಲ್ಲಾ ವೃಂದಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಿಬ್ಬಂದಿ ಹೋರಾಟದಲ್ಲಿ ಭಾಗಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker