ರಾಜರಾಜೇಶ್ವರಿಗೆ ನಿತ್ಯದ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್
ತುಮಕೂರು : ದಸರಾ ಉತ್ಸವ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ರಾಜರಾಜೇಶ್ವರಿ(ಕೂಷ್ಮಾಂಡ) ರೂಪದಲ್ಲಿದ್ದ ಚಾಮುಂಡೇಶ್ವರಿ ದೇವಿಗೆ ಇಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಿತ್ಯದ ಪೂಜೆ ಸಲ್ಲಿಸಿದರು.
ಶರನ್ನವರಾತ್ರಿ ಪ್ರಯುಕ್ತ ಜರುಗಿದ ಶ್ರೀ ಕನಕದುರ್ಗಾ ಹೋಮದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ: ಕೆ. ನಾಗಣ್ಣ, ಮತ್ತಿತರರು ಪಾಲ್ಗೊಂಡು ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು.
ನವದುರ್ಗೆಯ ಅವತಾರಗಳಲ್ಲಿ ನಾಲ್ಕನೆಯದು ರಾಜರಾಜೇಶ್ವರಿ(ಕೂಷ್ಮಾಂಡ) ಅವತಾರ. ಕೂಷ್ಮಾಂಡ ದೇವಿಯು ತನ್ನ ದೈವಿಕವಾದ ನಗುವಿನೊಂದಿಗೆ ಜಗತ್ತನ್ನು ಸೃಷ್ಟಿಸಿದ ಕೀರ್ತಿಗೆ ಪಾತ್ರಳಾಗಿದ್ದಾಳೆ. ವಿಶ್ವವೇ ಇಲ್ಲದಿರುವಾಗ ಸುತ್ತಲೂ ಗಾಢಾಂಧಕಾರ ಕವಿದಿತ್ತು. ದೇವಿಯು ಆ ಸಮಯದಲ್ಲಿ ನಕ್ಕಿದ್ದರಿಂದ ಎಲ್ಲೆಡೆ ಬೆಳಕು ಕಂಡು ಬಂದಿತು. ಈ ಬಗೆಯಲ್ಲಿ ದೇವಿಯು ಭೂಮಿಯನ್ನು ಸೃಷ್ಟಿಸಿದ್ದಾಳೆ ಎಂಬುದು ಅನಾದಿಕಾಲದ ನಂಬಿಕೆ. ಕೂಷ್ಮಾಂಡ ದೇವಿಯ ರೂಪ ಬಹಳ ವಿಭಿನ್ನವಾಗಿದ್ದು, ಅಷ್ಟ ಭುಜವುಳ್ಳವಳಾಗಿದ್ದಾಳೆ. ಅವಳ ಏಳೂ ಕೈಗಳು ಕಮಂಡಲ, ಬಿಲ್ಲು, ಬಾಣ, ಕಮಲದ ಹೂ, ಮಕರಂದದಿAದ ತುಂಬಿದ ಮಡಿಕೆ, ಚಕ್ರ, ಗಧೆಗಳನ್ನು ಹಿಡಿದಿವೆ. ಎಂಟನೇ ಕೈ ಜಪಮಾಲೆಯನ್ನು ಹಿಡಿದುಕೊಂಡು ಸಿಂಹದ ಮೇಲೆ ಕುಳಿತಿದ್ದಾಳೆ. ಈ ದೇವಿಯನ್ನು ಪೂಜಿಸುವುದರಿಂದ ಸಕಲ ಸಂಪತ್ತು, ಸಮೃದ್ಧಿ ಹೆಚ್ಚಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.
ಈ ಸಂದರ್ಭದಲ್ಲಿ ಮುಜರಾಯಿ ತಹಸೀಲ್ದಾರ್ ಸವಿತಾ, ದೇವರಾಯನದುರ್ಗ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್, ಮತ್ತಿತರರು ಉಪಸ್ಥಿತರಿದ್ದರು.