ಗುಬ್ಬಿ : ಕಳೆದ ಮೂರು ದಿನದ ಹಿಂದೆ ಸುರಿದ ಭಾರಿ ಮಳೆಗೆ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು ಕಂಬ ಹಾಗೂ ತಂತಿ ತುಂಡಾಗಿದೆ. ಸ್ಥಳಕ್ಕೆ ಬಂದು ನೋಡಿ ಹೋದ ಬೆಸ್ಕಾಂ ಸಿಬ್ಬಂದಿ ಮೂರು ದಿನ ಕಳೆದರೂ ಪರ್ಯಾಯ ವ್ಯವಸ್ಥೆ ಮಾಡದೆ ಇಡೀ ಸುರಿಗೇನಹಳ್ಳಿ ಗ್ರಾಮ ಕಗ್ಗತ್ತಲಲ್ಲಿ ಮುಳುಗಿದ್ದು ದಿನಕಳೆದರೂ ಎಚ್ಚೆತ್ತುಕೊಳ್ಳದ ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.
ಸುಮಾರು 60 ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಪರಿವರ್ತಕ ಸಮೀಪದಲ್ಲೇ ಕಂಬ ಮುರಿದು ಬಿದ್ದು ತಂತಿ ತುಂಡಾಗಿದೆ. ಕೂಡಲೇ ಬೆಸ್ಕಾಂ ಇಲಾಖೆಗೆ ಸ್ಥಳೀಯರು ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಕೆಲಸ ಮಾಡುವ ರೀತಿ ಆಗಮಿಸಿ ಸ್ಥಳ ನೋಡಿ ಕಂಬ ಮುರಿದಿದೆ. ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸುವುದಾಗಿ ಹೇಳಿ ಹೋದವರು ಮೂರು ದಿನ ಕಳೆದರೂ ಇತ್ತ ಕಡೆ ಸುಳಿದಿಲ್ಲ. ಈ ಬಗ್ಗೆ ಸ್ಥಳೀಯರು ಪೋನ್ ಕರೆ ಮಾಡಿದರೂ ಸೂಕ್ತ ಉತ್ತರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುರಿಗೇನಹಳ್ಳಿ ಗ್ರಾಮದ ಗುಡ್ಡದ ರಂಗನಾಥಸ್ವಾಮಿ ದೇವಸ್ಥಾನದತ್ತ ಹೋಗುವ ರಸ್ತೆ ಬದಿಯಲ್ಲೇ ಇರುವ ದೊಡ್ಡ ಮರದ ಕೆಳಗೆ ವಿದ್ಯುತ್ ತಂತಿ ಹಾದು ಹೋಗಿದೆ. ಕಂಬಗಳು ಸಹ ಮರಗಳ ಪಕ್ಕದಲ್ಲೇ ಇವೆ. ಮರದ ಕೊಂಬೆಗಳು ತಂತಿಗೆ ತಗುಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಲೇ ಇದೆ. ಮಳೆ ಗಾಳಿ ಬೀಸಿದರೆ ವಿದ್ಯುತ್ ಕಡಿತ ಕಟ್ಟಿಟ್ಟ ಬುತ್ತಿ. ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ತೊಂದರೆಯಾಗಿದೆ. ಈ ಮೂರು ದಿನದಿಂದ ಕತ್ತಲು ಅವರಿಸಿ ವೃದ್ದೆ ನರಸಮ್ಮ ಎಂಬುವವರು ಚರಂಡಿಯಲ್ಲಿ ಬಿದ್ದು ಕಾಲು ಮೂಳೆ ಮುರಿದುಕೊಂಡಿದ್ದಾರೆ. ಈ ವೃದ್ಧೆಯ ತೊಂದರೆಗೆ ಬೆಸ್ಕಾಂ ನೇರ ಹೊಣೆ ಹೊರಬೇಕು ಎಂದು ಸ್ಥಳೀಯ ಮಂಜುನಾಥ್ ಕಿಡಿಕಾರಿದರು.
ಮೂರು ದಿನಗಳ ಕತ್ತಲು ಅಲ್ಲಿನ ಜನರಲ್ಲಿ ತೀವ್ರ ಭಯ ಹುಟ್ಟಿಸಿದೆ. ಗ್ರಾಮದ ಪಕ್ಕದಲ್ಲೇ ಅರಣ್ಯ ಪ್ರದೇಶವಿದ್ದು ಚಿರತೆ, ಕಾಡುಹಂದಿ, ನರಿಗಳ ಕಾಟ ಸಾಕಷ್ಟಿದೆ. ಗ್ರಾಮಸ್ಥರು ಸಾಕಿದ ಜಾನುವಾರುಗಳ ಮೇಲೆರಗಲು ಚಿರತೆಗಳು ಈ ಭಾಗದಲ್ಲಿ ಕಾದಿವೆ. ಇಂಥಹ ಕಷ್ಟದ ಮಧ್ಯೆ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕರೆಂಟ್ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಕಿಡಿಕಾರಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಕುಮಾರ್, ಮಂಜುನಾಥ್ ಇತರರು ಇದ್ದರು.
ಮರ ಬಿದ್ದು ಕಂಬ ಮುರಿದ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಪೋನ್ ಮೂಲಕ ವಿಷಯ ತಿಳಿಸಿದರೂ ತಕ್ಷಣ ಕಾರ್ಯಪ್ರವೃತ್ತರಾಗದ ಸಿಬ್ಬಂದಿಗಳ ಬಗ್ಗೆ ಗ್ರಾಮಸ್ಥರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹಲವು ಬಾರಿ ಇಂಜಿನಿಯರ್ ಗೆ ಕಾಲ್ ಮಾಡಿದರೂ ರಿಸೀವ್ ಮಾಡಲಿಲ್ಲ. ಚುನಾಯಿತ ಪ್ರತಿನಿಧಿಗಳಾಗಿ ಗ್ರಾಮಸ್ಥರ ಮುಂದೆ ಅಸಹಾಯಕತೆ ತೋರುವ ದುಸ್ಥಿತಿ ನಿರ್ಮಾಣ ಮಾಡಿದರು. ಕೂಡಲೇ ಕಂಬ ಬದಲಿಸಿ ವಿದ್ಯುತ್ ನೀಡದಿದ್ದರೆ ಬೆಸ್ಕಾಂ ಕಚೇರಿ ಮುತ್ತಿಗೆ ಹಾಕುತ್ತೇವೆ.
– ತುಳಸಿದಾಸ್, ಗ್ರಾಪಂ ಸದಸ್ಯ, ಎಸ್. ಕೊಡಗೀಹಳ್ಳಿ, ಗುಬ್ಬಿ ತಾಲ್ಲೂಕು.
ವರದಿ : ದೇವರಾಜು. ಮಡೇನಹಳ್ಳಿ