ಗುಬ್ಬಿ : ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆಟದ ಮೈದಾನದ ರಂಗ ಮಂದಿರದ ಹಿಂದೆ ಕಾಲೇಜು ಯುವಕರ ಗುಂಪು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಪಡ್ಡೆ ಹುಡುಗರ ಹಾವಳಿ ಇತ್ತೀಚಿಗೆ ಪಟ್ಟಣದಲ್ಲಿ ಹೆಚ್ಚಾಗಿದ್ದು, ಇಂತಹ ಘಟನೆಗಳು ನಡೆಯಲು ಕಾರಣವಾಗಿದ್ದು ಕೆಲವು ಯುವಕರು ಬಸ್ ಸ್ಟ್ಯಾಂಡ್ ಸೇರಿದಂತೆ ಕಾಲೇಜು ಮೈದಾನದ ಒಳಗೆ ಮತ್ತು ಹೊರಗೆ ದ್ವಿಚಕ್ರ ವಾಹನದಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತ ಕಿರಿ ಕಿರಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿವೆ.
ಗುಬ್ಬಿ ಪಟ್ಟಣಕ್ಕೆ ಗ್ರಾಮೀಣ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ನಿತ್ಯ ಶಾಲೆಗಳಿಗೆ ಬರುತ್ತಿದ್ದು ಕೆಲ ಪುಂಡರ ಹಾವಳಿಯ ನಿತ್ಯ ಕಿರಿ ಕಿರಿಗೆ ಹೆಣ್ಣು ಮಕ್ಕಳ ಪ್ರಸ್ತುತ ಸ್ಥಿತಿ ಹೇಳತೀರದಾಗಿದೆ.
ಕಾಲೇಜು ಹುಡುಗರ ಮತ್ತು ಕೆಲ ಪಡ್ಡೆ ಹುಡುಗರ ಹಾವಳಿಯಿಂದ ಇಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು ಬೇರೆ ಬೇರೆ ಆಯಾಮಗಳನ್ನು ಪಡೆಯುವ ಮುನ್ನ ಪೊಲೀಸರು ಎಚ್ಚೆತ್ತು ಪುಂಡರ ಹಾವಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.