ಸ್ಕಾರ್ಪಿಯೋ ಕಾರಿನಲ್ಲಿ ಬೈಕ್ ಗೆ ಗುದ್ದಿ ದುಷ್ಕರ್ಮಿಗಳಿಂದ ಕೊಲೆಗೆ ಯತ್ನ : ಕೂದಲೆಳೆ ಅಂತರದಲ್ಲಿ ಯುವಕ ಪಾರು
ಗುಬ್ಬಿ: ಹಳೆ ವೈಷಮ್ಯದ ಹಿನ್ನಲೆ ದ್ವಿಚಕ್ರ ವಾಹನಕ್ಕೆ ಸ್ಕಾರ್ಪಿಯೋ ಕಾರಿನಿಂದ ಗುದ್ದಿ ಯುವಕನನ್ನು ಹಾಡಹಗಲೇ ದುಷ್ಕರ್ಮಿಗಳ ಗುಂಪೊಂದು ಅಟ್ಟಾಡಿಸಿ ಕೊಲೆಗೆ ಯತ್ನಿಸಿದ ಘಟನೆ ಬೆಳಿಗ್ಗೆ ತಹಶೀಲ್ದಾರ್ ಕ್ವಾಟ್ರಸ್ ಮುಂಭಾಗದ ಎಂ.ಜಿ.ರಸ್ತೆಯಲ್ಲಿ ನಡೆದಿದ್ದು ಗುಬ್ಬಿ ಜನತೆಯನ್ನು ಮತ್ತೊಮ್ಮೆ ಭಯಭೀತರನ್ನಾಗಿ ಮಾಡಿದೆ.
ಕಳೆದೆರಡು ವರ್ಷದ ಹಿಂದೆ ಹತ್ಯೆಗೆ ಒಳಗಾದ ದಲಿತ ಮುಖಂಡ ಜಿ.ಸಿ.ನರಸಿಂಹಮೂರ್ತಿ (ಕುರಿ ಮೂರ್ತಿ) ಅವರ ಎರಡನೇ ಪುತ್ರ ಜಿ.ಎನ್.ಮನೋಜ್(29) ಕೊಲೆ ಸಂಚಿನ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಯುವಕ.
ಪಟ್ಟಣದ ಪಂಚಮುಖಿ ಆಂಜನೇಯ ದೇವಸ್ಥಾನ ಸಮೀಪದಲ್ಲಿ ವಾಸವಿದ್ದ ಮನೆಯಿಂದ ತನ್ನ ಡಿಯೊ ಬೈಕ್ ನಲ್ಲಿ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ಯುವಕನ ಮೇಲೆರಗಿದ ಸ್ಕಾರ್ಪಿಯೋ ಕಾರು ಮೊದಲೇ ಹಳೇ ಕೆಇಬಿ ಕಟ್ಟಡ ಮುಂಭಾಗ ರಸ್ತೆಯಲ್ಲಿ ನಿಂತಿದ್ದು, ಮನೋಜ್ ಬೈಕ್ ಹಿಂಬಾಲಿಸಿ ಬೈಕ್ ಗೆ ಗುದ್ದಿದ್ದು ಅಟ್ಯಾಕ್ ಮಾಡುವ ಸಂಚು ಅರಿತ ಯುವಕ ಮನೋಜ್ ಸ್ಥಳದಿಂದ ಓಡಿ ಮಾರುತಿನಗರ ಬಡಾವಣೆಯ ತನ್ನ ಸಹೋದರನ ಮನೆಯಲ್ಲಿ ಆಶ್ರಯ ಪಡೆದು ಅಪಾಯದಿಂದ ಪಾರಾಗಿದ್ದಾರೆ.
ಬೈಕ್ ಗೆ ಗುದ್ದಿದ ನಂತರ ಓಡಿಹೋದ ಮನೋಜ್ ಯುವಕನ ಬೆನ್ನತ್ತಿದ ಕಾರು ಆಶ್ರಯ ಪಡೆದ ಮನೆಯ ಮುಂದೆ ನಿಂತು ಅಟ್ಯಾಕ್ ಮಾಡುವ ಸಂಚು ಹಾಕಿದ್ದರು ಎನ್ನಲಾಗಿದೆ. ಕೂಡಲೇ ಮನೆಯಲ್ಲಿದ್ದವರು ಕೂಗಾಡಿದ ಕ್ಷಣಾರ್ಧದಲ್ಲಿ ಸ್ಕಾರ್ಪಿಯೋ ಬಂದ ವೇಗದಲ್ಲೇ ವಾಪಸಾಗಿದೆ. ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ ಮನೋಜ್ ಈ ಹಿಂದೆ ನನ್ನ ತಂದೆ ನರಸಿಂಹಮೂರ್ತಿ ಅವರ ಕೊಲೆ ನಡೆದಿತ್ತು. ಈಗ ಕಾರಿನಲ್ಲಿ ಅಟ್ಯಾಕ್ ಮಾಡಿರುವ ರೀತಿ ನನ್ನ ಕೊಲೆ ಸಂಚು ರೂಪಿಸಿರುವ ಸಾಧ್ಯತೆ ಇದೆ. ಕೂಡಲೇ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಪರ ಜಿಲ್ಲಾ ವರಿಷ್ಠಾಧಿಕಾರಿ ಮರಿಯಪ್ಪ, ಸಿಪಿಐ ಗೋಪಿನಾಥ್ ಸ್ಥಳ ಪರಿಶೀಲನೆ ನಡೆಸಿ ವಿಶೇಷ ತನಿಖಾ ತಂಡವೊಂದನ್ನು ರಚಿಸಿ ಕಳೆದ 24 ಗಂಟೆಯ ಸಮಯದಲ್ಲಿ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಗುಬ್ಬಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕು ಗೊಳಿಸಿದ್ದಾರೆ.