ಜಮೀನು ವಿವಾದ : ದಲಿತ ಮಹಿಳೆಯ ಮೇಲೆ ಸವರ್ಣೀಯರ ಹಲ್ಲೆ : ಕಾನೂನು ಕ್ರಮಕ್ಕೆ ತುಮಕೂರು ಗ್ರಾಮಾಂತರ ಛಲವಾದಿ ಗ್ರಾಮೀಣಾಭಿವೃದ್ದಿ ಸಂಘ ಒತ್ತಾಯ
ತುಮಕೂರು : ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ದಲಿತ ಮಹಿಳೆ ಮತ್ತು ಆಕೆಯ ತಂದೆಯ ಮೇಲೆ ಸವರ್ಣೀಯ ಕುಟುಂಬವೊಂದು ಹಲ್ಲೆ ನಡೆಸಿ,ಗಾಯಗೊಳಿಸಿರುವ ಘಟನೆ ತುಮಕೂರು ತಾಲೂಕು ಕೋರ ಹೋಬಳಿ ಚಿನಿವಾರನಹಳ್ಳಿಯಲ್ಲಿ ನಡೆದಿದೆ.
ಚಿನಿವಾರನಹಳ್ಳಿಯ ರಾಮಕ್ಕ ಎಂಬುವವರಿಗೆ ಆಕೆಯ ತಂದೆ ಹರಿಸಿನ, ಕುಂಕುಮಕ್ಕೆಂದು ಒಂದು ನಿವೇಶನವನ್ನು ನೀಡಿದ್ದು, ಸದರಿ ನಿವೇಶನದಲ್ಲಿ ರಾಮಕ್ಕೆ ಮತ್ತು ಆಕೆಯ ಅಂಗವಿಕಲ ಗಂಡ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸ್ವಲ್ಪ ಭಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸವಾಗಿದ್ದು,ಉಳಿದ ಭಾಗದಲ್ಲಿ ತಂಗಿನ ಸಸಿಗಳನ್ನು ನೆಟ್ಟಿದ್ದರು.ರಾಮಕ್ಕನ ಮನೆಯ ಪಕ್ಕದಲ್ಲಿಯೇ ಇದ್ದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಪುಟ್ಟಹನುಮಯ್ಯ ನವರ ಕುಟುಂಬದ ಜಮೀನಿದ್ದು,ಇಬ್ಬರ ನಡುವೆ ಜಮೀನಿನ ವಿವಾದವಿತ್ತು. ಕಳೆದ ಕೆಲ ದಿನಗಳ ಹಿಂದೆ ಸರ್ವೆ ಮಾಡುವ ಸಂದರ್ಭದಲ್ಲಿ ಪರಸ್ವರ ಒತ್ತುವರಿಯಾಗಿರುವುದು ಕಂಡು ಬಂದಿತ್ತು.ಆದರೆ ಯಾರು ಸಹ ಒತ್ತುವರಿ ತೆರವು ಮಾಡಿರಲಿಲ್ಲ.
ಜುಲೈ 31ರಂದು ಮಧ್ಯಾಹ್ನ 3.30ರ ಸುಮಾರಿಗೆ ರಾಮಕ್ಕ ಅವರ ಮಕ್ಕಳು ಹೊರಗಡೆ ಹೋಗಿರುವ ಸಂದರ್ಭದಲ್ಲಿ ಏಕಾಎಕಿ ಜಗಳಕ್ಕೆ ಬಂದ ಪುಟ್ಟಹನುಮಯ್ಯ,ಆತನ ಪತ್ನಿ ಮಂಜಮ್ಮ,ಮಕ್ಕಳಾದ ವಿನೋಧ ಮತ್ತು ಜೋತಿ ಇವರುಗಳು, ನಮ್ಮ ಜಮೀನನ್ನು ನೀನು ಒತ್ತುವರಿ ಮಾಡಿಕೊಂಡಿದ್ದು, ತೆರವು ಮಾಡು ಎಂದು ಧಮಕಿ ಹಾಕಿದ್ದು,ಇದಕ್ಕೆ ರಾಮಕ್ಕ ನಮ್ಮ ನಿವೇಶನವನ್ನು ಸಹ ಒಂದು ಭಾಗದಲ್ಲಿ ನಿಮ್ಮಿಂದ ಒತ್ತುವರಿಯಾಗಿದೆ ಮೊದಲು ನೀವು ತೆರವು ಮಾಡಿ ಎಂದು ಕೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಸವರ್ಣೀಯ ಕುಟುಂಬದ ನಾಲ್ವರು ಜಾತಿ ನಿಂದನೆ ಮಾಡಿ,ಇಟ್ಟಿಗೆದೊಣ್ಣೆಯಿಂದ ರಾಮಕ್ಕ ಹಾಗೂ ಆಕೆಯ ಮಗಳು ರಮ್ಯಳ ಮೇಲೆ ದಾಳಿ ನಡೆಸಿ,ರಾಮಕ್ಕನ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ.ಈ ವೇಳೆ ಅಲ್ಲಿಗೆ ಆಗಮಿಸಿದ ರಾಮಕ್ಕನ ವಯೋವೃದ್ದ ತಂದೆ ಹಲ್ಲೆ ಮಾಡುತ್ತಿದ್ದವರಿಗೆ ಅಡ್ಡ ನಿಂತು ಮಗಳನ್ನು ಬಿಡಿಸಿಕೊಂಡಿದ್ದು, ತಲೆಗೆ ಆದ ಗಾಯದಿಂದ ರಕ್ತ ಸುರಿಸುತ್ತಿದ್ದ ರಾಮಕ್ಕನನ್ನು ಕಾಲೇಜಿನಿಂದ ಬಂದ ಮಗಳು ಹಾಗೂ ತಮ್ಮ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು,ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೆ ಒಳಗಾಗಿರುವ ದಲಿತ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ,ತಪಿತಸ್ಥರನ್ನು ಬಂಧಿಸಬೇಕೆಂದು ತುಮಕೂರು ಗ್ರಾಮಾಂತರ ಛಲವಾದಿ ಗ್ರಾಮೀಣಾಭಿವೃದ್ದಿ ಸಂಘ ಒತ್ತಾಯಿಸಿದೆ.