ಗುಬ್ಬಿ: ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಅಧ್ಯಕ್ಷೆಯ ಅಧಿಕಾರವನ್ನು ಪತಿ ಸಂಪೂರ್ಣ ದುರ್ಬಳಕೆ ಮಾಡಿಕೊಂಡು ಮಾಜಿ ಶಾಸಕರ ಪುತ್ರರೊಬ್ಬರ ಸೂಚನೆಯಂತೆ ಅಧಿಕಾರಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಖಂಡನೀಯ. ಪ್ರಭಾವಿಗಳ ಕೈಗೊಂಬೆಯಾಗದೆ ಪಿಡಿಓ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರದೆ ಕಾನೂನು ರೀತ್ಯಾ ಕೆಲಸ ಮಾಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
ಮಾವಿನಹಳ್ಳಿ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 52/4 ನಂಬರಿನ ಆರು ಗುಂಟೆ ಜಮೀನಿನಲ್ಲಿ ಕಟ್ಟಡ ಕಟ್ಟಲಿಕ್ಕೆ ಇ ಸ್ವತ್ತು ಮಾಡಿಕೊಡುವಂತೆ ಉಂಗ್ರ ಗ್ರಾಮದ ನಿವಾಸಿ ಅಭಿಷೇಕ ಎಂಬುವವರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದು ಈ ಬಗ್ಗೆ ಮಾಜಿ ಶಾಸಕರ ಪುತ್ರ ತಮ್ಮ ಪ್ರಭಾವ ಬಳಸಿ ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪತಿಯನ್ನು ಕೈ ವಶ ಮಾಡಿಕೊಂಡು ಇ ಸ್ವತ್ತು ಆಗದಂತೆ ಸಲ್ಲದ ಅಡ್ಡಿ ಪಡಿಸಿಕೊಂಡು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಅಭಿವೃದ್ದಿ ಅಧಿಕಾರಿಗಳು ಅಧ್ಯಕ್ಷರ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂತ್ರಸ್ತ ಅಭಿಷೇಕ ಮಾತನಾಡಿ ರಾಜಕೀಯ ಸ್ವಪ್ರತಿಷ್ಠೆ ಮಾಡಿಕೊಂಡು ಗ್ರಾಮ ಪಂಚಾಯಿತಿ ಅಧ್ಯಕ್ಷರು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ನನ್ನ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಪಡಿಸಲು ಅಧಿಕಾರಿಗಳನ್ನೇ ದಾರಿ ತಪ್ಪಿಸುವ ಕೆಲಸ ಮಾಜಿ ಶಾಸಕರ ಪುತ್ರ ತಮ್ಮ ಪ್ರಭಾವ ಬೀರಿ ಕಾನೂನು ರೀತ್ಯಾ ಇರುವ ದಾಖಲೆಗೆ ನ್ಯಾಯಾಲಯದ ತಡೆಯಾಜ್ಞೆ ಇರುವುದಾಗಿ ಎಲ್ಲಾ ಅಧಿಕಾರಿಗಳನ್ನು ದಿಕ್ಕು ತಪ್ಪಿಸಿದ್ದಾರೆ. ಈ ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ ನಿರ್ಮಾಣ ಎಂದು ಆಧಾರವಿಲ್ಲದೆ ಆರೋಪ ಮಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಹ ನನ್ನ ದಾಖಲೆ ಮಾಡದಂತೆ ಮುಂದೂಡುತ್ತಿದ್ದಾರೆ. ಈ ಬಗ್ಗೆ ಕಾನೂನು ಪ್ರಕಾರ ಕೆಲಸ ಮಾಡಬೇಕಾದ ಪಿಡಿಓ ಸಹ ಪ್ರಭಾವಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಖಂಡ ಗೌಸ್ ಮಾತನಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯನ್ನು ದುರುದ್ದೇಶದಿಂದ ರದ್ದು ಮಾಡಿ ಅಭಿಷೇಕ್ ಅವರ ದಾಖಲೆಯಾಗದಂತೆ ಅಧ್ಯಕ್ಷರ ಪತಿ ಕುತಂತ್ರ ಮಾಡುತ್ತಿದ್ದಾರೆ. ಇ ಸ್ವತ್ತು ಮಾಡಿಕೊಡಲು ಅಗತ್ಯ ದಾಖಲೆ ಇದ್ದರೂ ಖಾತೆ ಮಾಡಲು ತಕರಾರು ತೆಗೆದು ಪೊಲೀಸರಿಗೆ ದೂರು ನೀಡುತ್ತಾರೆ. ಬಾರ್ ಅಂಡ್ ರೆಸ್ಟೋರೆಂಟ್ ಮಾಡುತ್ತಾರೆ ಎಂದು ಇವರೇ ಸೃಷ್ಟಿ ಮಾಡಿಕೊಂಡು ತಹಶೀಲ್ದಾರ್ ಹಾಗೂ ತಾಪಂ ಇಓ ಅವರನ್ನು ದಿಕ್ಕು ತಪ್ಪಿಸಿ ಭೂ ಪರಿವರ್ತನೆ ಮಾಡಿಲ್ಲ. ಮತ್ತೇ ಈ ಜಮೀನಿನ ಮೇಲೆ ತಡೆಯಾಜ್ಞೆ ಇದೆ ಎಂದು ಅಧಿಕಾರಿಗಳಿಗೆ ಹೇಳಿ ನಮ್ಮ ಕಟ್ಟಡ ಕೆಲಸಕ್ಕೆ ಅಡ್ಡಿ ಪಡಿಸಿದ್ದು, ನಿಯಮವನ್ನೇ ಗಾಳಿಗೆ ತೂರಿ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಳ್ಳುತ್ತಿದ್ದಾರೆ. ಮಿತಿ ಮೀರಿದ ನಡವಳಿಕೆಗೆ ಬೇಸತ್ತ ಗ್ರಾಮಸ್ಥರು ಅಧ್ಯಕ್ಷೆ ಪತಿ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಲು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಹಾಲಿನ ಡೈರಿ ಮಾಜಿ ಅಧ್ಯಕ್ಷ ಗಂಗಾಧರ್, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್, ಗುತ್ತಿಗೆದಾರ ಶಂಕರ್, ಸತೀಶ್, ತಾಪಂ ಮಾಜಿ ಸದಸ್ಯೆ ಜಯಲಕ್ಷ್ಮಮ್ಮ, ಹಾಲಿನ ಡೈರಿ ಅಧ್ಯಕ್ಷ ಹನುಮಂತರಾಜು ಇತರರು ಇದ್ದರು.