ಜಿಲ್ಲೆತುಮಕೂರುಸುದ್ದಿ

ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ನ್ಯೂನ್ಯತೆ ಕಂಡು ಬಂದರೆ ಅಮಾನತ್ತಿಗೆ ಕ್ರಮ : ಆಹಾರ ಆಯೋಗ ಅಧ್ಯಕ್ಷ ಡಾ: ಹೆಚ್. ಕೃಷ್ಣ

ತುಮಕೂರು : ಸಾರ್ವಜನಿಕ ಪದ್ಧತಿಯಡಿ ಪಡಿತರ ವಿತರಣೆ ಮಾಡುವ ನ್ಯಾಯಬೆಲೆ ಅಂಗಡಿಗಳಲ್ಲಿ ನ್ಯೂನ್ಯತೆಗಳು ಕಂಡು ಬಂದರೆ ಕೂಡಲೇ ಅಂತಹ ನ್ಯಾಯಬೆಲೆ ಅಂಗಡಿಗಳ ಅಮಾನತ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ: ಹೆಚ್. ಕೃಷ್ಣ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಆಹಾರ ಆಯೋಗವು ಜಿಲ್ಲಾದ್ಯಂತ ೪ ದಿನಗಳವರೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ನ್ಯಾಯಬೆಲೆ ಅಂಗಡಿ, ಆಹಾರ ಧಾನ್ಯ ಸಗಟು ಮಳಿಗೆ, ಅಂಗನವಾಡಿ ಕೇಂದ್ರ, ಎಂ.ಎಸ್.ಪಿ.ಟಿ.ಸಿ., ಮಧ್ಯಾಹ್ನದ ಉಪಹಾರ ಯೋಜನೆ ಶಾಲೆಗಳು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಹಿAದುಳಿದ ವರ್ಗಗಳ/ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯ, ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದು, ಪರಿಶೀಲನಾ ಸಮಯದಲ್ಲಿ ಯಾವುದೇ ಅಕ್ರಮ, ಅವ್ಯವಹಾರ ಕಂಡು ಬಂದಲ್ಲಿ ಸಂಬAಧಿಸಿದವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಪರಿಶೀಲನಾ ಸಂದರ್ಭದಲ್ಲಿ ಸಾರ್ವಜನಿಕರು ಆಯೋಗಕ್ಕೆ ತಮ್ಮ ಅಹವಾಲುಗಳನ್ನು ಖುದ್ದಾಗಿ ಸಲ್ಲಿಸಿದಲ್ಲಿ ಸ್ಥಳದಲ್ಲಿಯೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ನ್ಯಾಯಬೆಲೆ ಅಂಗಡಿಯಲ್ಲಿ ತೂಕ/ಅಳತೆ ವ್ಯತ್ಯಾಸ, ಆಹಾರ ಧಾನ್ಯ ಸಗಟು ಮಳಿಗೆಗಳು ನ್ಯಾಯಬೆಲೆ ಅಂಗಡಿಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡದಿದ್ದಲ್ಲಿ, ಅಂಗನವಾಡಿ ಮಕ್ಕಳಿಗೆ ನೀಡುವ ಊಟೋಪಚಾರದಲ್ಲಿ ನ್ಯೂನ್ಯತೆ, ಮಧ್ಯಾಹ್ನದ ಉಪಹಾರ ಯೋಜನೆಯಡಿ ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ ದೊರೆಯದಿದ್ದಲ್ಲಿ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಸವಲತ್ತುಗಳನ್ನು ನೀಡದಿದ್ದಲ್ಲಿ ರಾಜ್ಯ ಆಹಾರ ಆಯೋಗ ನೆರವಿಗೆ ಬರಲಿದೆ ಎಂದು ತಿಳಿಸಿದರು.
ಸಾರ್ವಜನಿಕರು/ ಸಂಘ ಸಂಸ್ಥೆಗಳು ನ್ಯೂನ್ಯತೆಗಳು ಕಂಡು ಬಂದಾಗ ದಿನದ ೨೪ ಗಂಟೆಯೂ ಸಹ ಆಯೋಗದ ಕಚೇರಿಗೆ ಲಿಖಿತ ಅರ್ಜಿ ಅಥವಾ ದೂರವಾಣಿ ಸಂಖ್ಯೆ: ೦೮೦-೨೨೨೬೯೯೪೪/ ೨೨೨೬೮೮೪೪ಕ್ಕೆ ಕರೆ ಮಾಡುವ ಮೂಲಕ ದೂರು ಸಲ್ಲಿಸಲು ಅವಕಾಶವಿದೆ. ಸ್ವೀಕೃತ ದೂರುಗಳಿಗೆ ಆಯೋಗದಿಂದ ಸೂಕ್ತ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

‌ವಸತಿ ನಿಲಯ ಹಾಗೂ ಶಾಲೆಗಳಿಗೆ ಪೂರೈಕೆ ಮಾಡುವ ಆಹಾರ ಧಾನ್ಯಗಳು ಕಳಪೆ ಗುಣಮಟ್ಟದ್ದಾಗಿದ್ದು, ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪತ್ರಕರ್ತರೊಬ್ಬರು ಮನವಿ ಮಾಡಿದಾಗ, ಪ್ರತಿಕ್ರಿಯಿಸಿದ ಅಧ್ಯಕ್ಷರು ಸರ್ಕಾರದಿಂದ ಹಂಚಿಕೆಯಾಗುವ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಸತಿ ನಿಲಯ ಹಾಗೂ ಶಾಲೆಗಳಿಗೆ ವಿತರಣೆ ಮಾಡಬೇಕು. ನಿಯಮಾನುಸಾರ ಗುಣಮಟ್ಟದ ಆಹಾರ ಧಾನ್ಯ ಪೂರೈಕೆ ಮಾಡದ ಅಧಿಕಾರಿಗಳನ್ನು ಅಮಾನತ್ತು ಮಾಡಲು ತಕ್ಷಣವೇ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕರ್ತವ್ಯ ನಿರ್ಲಕ್ಷ್ಯತೆ ತೋರುವ, ಜನರಿಗೆ ಸ್ಪಂದಿಸದ ಆಹಾರ ನಿರೀಕ್ಷಕರ ಮೇಲೆ ಕ್ರಮಕೈಗೊಳ್ಳಬೇಕೆಂದು ಮಾಧ್ಯಮ ಪ್ರತಿನಿಧಿಯೊಬ್ಬರ ಮನವಿಗೆ ಸ್ಪಂದಿಸಿದ ಆಯೋಗದ ಅಧ್ಯಕ್ಷರು, ತಿಂಗಳ ಪೂರ್ತಿ ಎಲ್ಲ ದಿನಗಳಂದು ನ್ಯಾಯಬೆಲೆ ಅಂಗಡಿಗಳು ತೆರೆದಿರಬೇಕು. ಪಡಿತರ ವಿತರಣೆಯಲ್ಲಿ ಲೋಪವಾಗದಂತೆ ಹಾಗೂ ಪಡಿತರ ವಿತರಣೆಗಾಗಿ ಗ್ರಾಹಕರಿಂದ ಯಾವುದೇ ರೀತಿಯಲ್ಲಿ ಹಣ ಪಡೆಯದಂತೆ ನಿಗಾವಹಿಸಬೇಕೆಂದು ಆಹಾರ ನಿರೀಕ್ಷಕರಿಗೆ ಸೂಚನೆ ನೀಡಲಾಗುವುದೆಂದರು.
ಜಿಲ್ಲೆಯಲ್ಲಿ ಕೈಗೊಂಡಿರುವ ಆಯೋಗದ ಪ್ರವಾಸದ ಬಗ್ಗೆ ಮಾಹಿತಿ ಕೇಳಿದಾಗ ಈಗಾಗಲೇ ಆಯೋಗಕ್ಕೆ ಬಂದಿರುವ ದೂರುಗಳನ್ವಯ ಜಿಲ್ಲೆಯ ವಿವಿಧ ವಸತಿ ನಿಲಯ, ಶಾಲೆ, ಅಂಗನವಾಡಿ, ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಪರಿಶೀಲನಾ ಸಂದರ್ಭದಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡದ ಹಾಗೂ ಜನರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸದ ಅಧಿಕಾರಿಗಳ ಅಮಾನತ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ರಾಗಿಯೊಂದಿಗೆ ಎಣ್ಣೆ, ಸಕ್ಕರೆ/ಬೆಲ್ಲ, ಬೇಳೆ ವಿತರಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕೆಂದು ಪತ್ರಕರ್ತರು ನೀಡಿದ ಸಲಹೆಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದೆಂದರಲ್ಲದೆ, ಅಕ್ಕಿಯಲ್ಲಿ ಯೂರಿಯಾ ರಸಗೊಬ್ಬರ ಮಿಶ್ರಣ ಹಾಗೂ ಪ್ಲಾಸ್ಟಿಕ್ ಅಕ್ಕಿ ಪೂರೈಕೆ ಸುದ್ದಿಯು ಗಾಳಿ ಸುದ್ದಿಯಾಗಿದ್ದು, ಈ ಕುರಿತು ರಾಜ್ಯದಲ್ಲಿ ಯಾವುದೇ ದೂರುಗಳು ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಆಹಾರ ಆಯೋಗ ಸದಸ್ಯರಾದ ಲಿಂಗರಾಜ್ ಕೋಟೆ, ಸುಮಂತ್ ರಾವ್, ಮಾರುತಿ ಎಂ. ದೊಡ್ಡಲಿಂಗಣ್ಣವರ, ಕೆ.ಎಸ್.ವಿಜಯಲಕ್ಷ್ಮಿ, ಎ.ರೋಹಿಣಿ ಪ್ರಿಯ, ಆಹಾರ ಆಯೋಗದ ಕಾರ್ಯದರ್ಶಿ ಸುಜಾತ ಹೊಸ್ಮನಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಬ್ಬೀರ್ ಅಹಮದ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋನಿಯಾ ವರ್ಣೇಕರ್, ಕೃಷಿ ಜಂಟಿ ನಿರ್ದೇಶಕ ರಮೇಶ್, ಸಮಾಜ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಪಿಂಚಣಿ ಇಲಾಖೆ ಸಹಾಯಕ ನಿರ್ದೇಶಕ ಸವಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್, ತಹಶೀಲ್ದಾರ್ ಎಂ.ಸಿದ್ದೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker