ತುಮಕೂರು : ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಜನವರಿ 29ರಂದು ತುಮಕೂರು ಜಿಲ್ಲೆಗೆ ಆಗಮಿಸಿ, ಸರ್ಕಾರದ ವಿವಿಧ ಜನಪರ ಕಲ್ಯಾಣ ಯೋಜನೆಗಳಡಿ 700 ಕೋಟಿ ರೂ.ವೆಚ್ಚದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದಾರೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ನಂತರ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡುತ್ತಾ, ಇದೊಂದು ಐತಿಹಾಸಿಕ ಕಾರ್ಯಕ್ರಮ ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಸರ್ಕಾರದಿಂದ ಅನುಮೋದನೆಗೊಂಡ 100 ಕೋಟಿ ಮೊತ್ತದ ವಿವಿಧ ಸವಲತ್ತುಗಳನ್ನು ವಿವಿಧ ಇಲಾಖೆಯ 50,000 ಫಲಾನುಭವಿಗಳಿಗೆ ಮುಖ್ಯಮಂತ್ರಿಗಳೇ ಸ್ಥಳದಲ್ಲಿಯೇ ನೇರವಾಗಿ ಸೌಲಭ್ಯ ವಿತರಣೆ ಮಾಡಲಿದ್ದಾರೆ ಎಂದರು.
ನಮ್ಮ ಸರ್ಕಾರ ಬಂದಾಗಿನಿಂದ ಕಳೆದ 7 ತಿಂಗಳಲ್ಲಿ ಅನುಷ್ಟಾನಗೊಂಡಿರುವ ವಿವಿಧ ಜನಪರ ಯೋಜನೆಗಳು ಸೇರಿದಂತೆ ಎತ್ತಿನಹೊಳೆ ಯೋಜನೆ ಮತ್ತು ದಾವಣಗೆರೆ-ರಾಯದುರ್ಗ ರೈಲು ಮಾರ್ಗ ಅನುಷ್ಟಾನ, ತುಮಕೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಮತ್ತು ತುಮಕೂರು ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣ ಉದ್ಘಾಟನೆ ಸೇರಿದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಪ್ರತಿ ನಿಮಿಷಕ್ಕೊಂದು ವಿಮಾನ ಸಂಚರಿಸುತ್ತಿದ್ದು, ಪ್ರತಿ ದಿನವೂ ಒಂದು ಕೋಟಿಗೂ ಹೆಚ್ಚು ಜನರು ವಿಮಾನಯಾನ ಸೇವೆ ಬಳಸುತ್ತಿದ್ದು, ಸಂಚಾರ ದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಪರ್ಯಾಯ ಅಂತರರಾಷ್ಟಿçÃಯ ವಿಮಾನ ನಿಲ್ದಾಣ ಅಗತ್ಯವಿದ್ದು, ಇದಕ್ಕಾಗಿ ತುಮಕೂರು ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಬೇಕು. ಇದಕ್ಕಾಗಿ ಅಗತ್ಯ ಇರುವ 8000 ಎಕರೆ ಜಾಗವನ್ನು ತುಮಕೂರು, ಶಿರಾ ಸೇರಿದಂತೆ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಗುರುತಿಸಲಾಗಿದ್ದು, ಯೋಜನೆಯ ಅನುಷ್ಠಾನಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಶಕ್ತಿ ಯೋಜನೆಯಿಂದ ಜನರು ಹೆಚ್ಚಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿದ್ದು, ಹೆಚ್ಚುವರಿ ಬಸ್‌ಗಳ ಅಗತ್ಯತೆ ಹಿನ್ನೆಲೆಯಲ್ಲಿ ಸರ್ಕಾರವು ಐದು ಸಾವಿರಕ್ಕಿಂತ ಹೆಚ್ಚುವರಿ ಬಸ್ಸುಗಳನ್ನು ಖರೀದಿಸುತ್ತಿದ್ದು, ಜಿಲ್ಲೆಗೂ ಬಸ್ಸುಗಳನ್ನು ಹೆಚ್ಚುವರಿಯಾಗಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಯವರ ಮುಂದೆ ಬೇಡಿಕೆ ಇಡಲಾಗುತ್ತದೆ ಎಂದು ತಿಳಿಸಿದರು.
ಸಮರ್ಪಕ ಬರ ನಿರ್ವಹಣೆಗಾಗಿ ಸರ್ಕಾರವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆಯನ್ನು ನೀಡಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಕುಡಿಯುವ ನೀರು, ಜಾನುವಾರುಗಳ ಮೇವು, ಮೊದಲಾದ ಬರ ಪರಿಹಾರ ನಿರ್ವಹಣೆಗಾಗಿ ಈ ಅನುದಾನವನ್ನು ಬಳಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 30 ಕೋಟಿ ಹಣವಿದ್ದು, ತುರ್ತು ಸಂದರ್ಭದಲ್ಲಿ ಬರ ನಿರ್ವಹಣೆಗಾಗಿ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಕೈಗೊಂಡ ಸಹಕಾರಿ ಬ್ಯಾಂಕುಗಳಲ್ಲಿನ ಬಡ್ಡಿ ಮನ್ನಾ ಆದೇಶದ ಕುರಿತು ಜನರಿಗೆ ತಿಳಿಸಬೇಕು. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಬೇಕು ಮತ್ತು ಅಸಹಾಯಕ ಸಮುದಾಯಗಳಿಗೆ ಅಗತ್ಯ ಸವಲತ್ತುಗಳನ್ನು ವಿತರಣೆ ಮಾಡಿ, ಅನೇಕ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿಗಳ ಜಿಲ್ಲಾ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ 1000 ನಿವೇಶನಗಳು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ಉದ್ಘಾಟನೆ ಮತ್ತು ಮಧುಗಿರಿ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡುವ ಬೇಡಿಕೆಯನ್ನು ಇಡಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕುಣಿಗಲ್ ಶಾಸಕ ಡಾ: ಹೆಚ್.ಡಿ.ರಂಗನಾಥ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.
ನಂತರ ಸಚಿವರುಗಳು ಮುಖ್ಯಮಂತ್ರಿಗಳ ಕಾರ್ಯಕ್ರಮ ನಡೆಯುವ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.