ಸಿದ್ದಗಂಗಾ ಮಠದ ಗೋಕಟ್ಟೆಗೆ ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ರಕ್ಷಿಸಲು ಹೋದ ತಾಯಿ ಸೇರಿ ನಾಲ್ವರ ಸಾವು
ತುಮಕೂರು : ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋ ಕಟ್ಟೆಗೆ ತನ್ನ ತಾಯಿಯೊಂದಿಗೆ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಮಗ ಈಜಲು ಹೋಗಿ ನೀರು ಕುಡಿದು ಮೃತಪಟ್ಟಿರುವ ಘಟನೆ ಆಗಸ್ಟ್ 13ರಂದು ಸಂಭವಿಸಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ರಕ್ಷಿಸಲು ಹೋದ ತಾಯಿ ಸೇರಿದಂತೆ ಇತರೆ ಮೂವರು ಕೂಡ ನೀರು ಪಾಲಾಗಿದ್ದಾರೆ.
ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗನನ್ನು ನೋಡಲು ತಾಯಿ ಬಂದಿದ್ದರು. ಈ ಸಂದರ್ಭದಲ್ಲಿ ಮಗನ ಬಟ್ಟೆಯನ್ನು ತೊಳೆಯಲು ಮಠದ ಹಿಂಭಾಗದಲ್ಲಿರುವ ಗೋ ಕಟ್ಟೆಗೆ ತಾಯಿ ಮತ್ತು ಮಗ ಹೋಗಿದ್ದಾರೆ.
ಈ ಸಂದರ್ಭದಲ್ಲಿ ತಾಯಿ ಬಟ್ಟೆ ತೊಳೆಯುತ್ತಿದ್ದಾಗ ಮಗ ಗೋಕಟ್ಟೆಯಲ್ಲಿ ಈಜಲು ನೀರಿಗೆ ಹಾರಿದ್ದಾನೆ. ಆದರೆ ಈಜು ಬಾರದೆ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ನೋಡಿದ ತಾಯಿ ನೀರಿಗೆ ಹಾರಿ ಮಗನನ್ನು ರಕ್ಷಿಸಲು ಹೋಗಿ ಆಕೆಯೂ ನೀರು ಪಾಲಾಗಿದ್ದಾರೆ.
ಅಲ್ಲಿಯೇ ಇದ್ದ ಆಕೆಯ ಸಹೋದರ ಕೂಡ ಗೋ ಕಟ್ಟೆಗೆ ತಾಯಿ ಮತ್ತು ಮಗನನ್ನು ರಕ್ಷಿಸಲು ಹೋಗಿದ್ದಾರೆ. ಆದರೆ ಆತನೂ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.
ಇದೇ ವೇಳೆ ಅಲ್ಲಿಯೇ ಇದ್ದ ಮಹಾದೇವ ಎಂಬುವವರು ನೀರಿಗೆ ಬಿದ್ದವರನ್ನು ರಕ್ಷಿಸಲು ಹೋಗಿದ್ದು ಆತನಿಗೂ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ ವಿದ್ಯಾರ್ಥಿಯನ್ನು ರಕ್ಷಿಸಲು ಹೋದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ ವಾಡ್ ಮತ್ತು ಕ್ಯಾತ್ಸಂದ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ.