ಗುಬ್ಬಿ: ಗೂಡ್ಸ್ ಆಟೋ ಮತ್ತು ಮಾರುತಿ ಓಮ್ನಿ ನಡುವೆ ಡಿಕ್ಕಿ ಸಂಭವಿಸಿ ಸಂತೇ ವ್ಯಾಪಾರ ಮಾಡುವ ದಂಪತಿ ಸಾವನ್ನಪ್ಪಿದ ಘಟನೆ ನಡೆದಿದ್ದು, ನೇತ್ರದಾನ ಮಾಡಿದ ಮೃತ ಪತ್ನಿ ಪುಟ್ಟಮ್ಮ ಸಾರ್ಥಕತೆ ಮೆರೆದ ಘಟನೆ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಕೆ.ಹರಿವೆಸಂದ್ರ ಬಳಿ ಕೇಶಿಪ್ ರಸ್ತೆಯಲ್ಲಿ ನಡೆದಿದೆ.
ತಾಲ್ಲೂಕಿನ ಕಲ್ಲೂರು ಗ್ರಾಮದ ಸಂತೆ ವ್ಯಾಪಾರಿ ನಾಗರಾಜು (60) ಹಾಗೂ ಪತ್ನಿ ಪುಟ್ಟಮ್ಮ (55) ಮೃತ ಪಟ್ಟ ದಂಪತಿಗಳು. ಕೆಜಿ ಟೆಂಪಲ್ ಮಂಗಳವಾರ ಸಂತೆಗೆ ವ್ಯಾಪಾರಕ್ಕೆ ಬರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೆ.ಹರಿವೇಸಂದ್ರದ ಬಳಿ ಲಗೇಜ್ ಆಟೋಗೆ ಹಿಂದಿನಿಂದ ಅತಿ ವೇಗವಾಗಿ ಬಂದ ಮಾರುತಿ ಓಮ್ನಿ ಕಾರು ರಭಸವಾಗಿ ಗುದ್ದಿದ ಪರಿಣಾಮ ದಂಪತಿಗಳಿಬ್ಬರು ರಸ್ತೆಗೆ ಬಿದ್ದು, ಆಟೋ ಉರುಳಿ ಪಕ್ಕದ ಗದ್ದೆಯಲ್ಲಿ ಬಿದ್ದಿದೆ. ಪತಿ ನಾಗರಾಜು ಸ್ಥಳದಲ್ಲಿಯೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಪುಟ್ಟಮ್ಮ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ.
ಮೃತ ಪುಟ್ಟಮ್ಮನವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಪುಟ್ಟಮ್ಮನವರ ಸಾವನ್ನು ಸಾರ್ಥಕ ಗೊಳಿಸಿದ್ದಾರೆ.
ಅಪಘಾತ ಸಂಭವಿಸಿದ ನಂತರ ಸ್ಥಳದಿಂದ ಕಾಲ್ಕಿತ್ತ ಓಮ್ನಿ ವಾಹನ ಚಾಲಕ ಕುನ್ನಾಲ ಬಳಿ ನಿಲ್ಲಿಸಿ ನಾಪತ್ತೆಯಾಗಿದ್ದಾನೆ.
ಕಾರಿನಲ್ಲಿದ್ದವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಸಿ.ಎಸ್.ಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರನ್ನು ವಶಕ್ಕೆ ಪಡೆದು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಮೃತರ ವಾರಸುದಾರರಿಗೆ ನೀಡಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.