ತುಮಕೂರು : ಜಿಲ್ಲಾಧಿಕಾರಿ ಕೆ ಶ್ರೀನಿವಾಸ ಅವರು ಇಂದು ಅನಿರೀಕ್ಷಿತವಾಗಿ ಎಂಜಿ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಕಟ್ಟಡದ ದುರಸ್ತಿ ಬಗ್ಗೆ ಸಮಸ್ಯೆಗಳನ್ನು ಆಲಿಸಿದರು.
ಕಟ್ಟಡ ದುರಸ್ತಿಗೆ ಸಂಬಂಧಿಸಿದಂತೆ ಸೂಕ್ತ ಅಂದಾಜು ಪಟ್ಟಿ ತಯಾರಿಸಿ ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು..
ನಿಲಯದ ವಿದ್ಯಾರ್ಥಿಗಳಿಗೆ ಹಾಸಿಗೆ, ಹೊದಿಕೆ, ಸೋಲಾರ್ ವಾಟರ್ ಹೀಟರ್, ಯುಪಿಎಸ್ ಇತ್ಯಾದಿಗಳನ್ನು ಒದಗಿಸಲು ಕ್ರಮ ವಹಿಸಲು ಸೂಚಿಸಿದರು..
ನಿಲಯ ಪಾಲಕರ ಅಸಮರ್ಥತೆ ಬಗ್ಗೆ ಪರಿಶೀಲಿಸಿ ನಿಲಯ ಪಾಲಕರನ್ನು ಬದಲಿಸುವಂತೆ ಸೂಚಿಸಿದರು.
ಚಪಾತಿ ಮೇಕರ್ ಉಪಯೋಗಿಸದೆ ಇರುವ ಅಧಿಕಾರಿ ಮತ್ತು ನಿಲಯ ಪಾಲಕರ ವೇತನವನ್ನು ಕಟಾಯಿಸಲು ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ತಹಶಿಲ್ದಾರ್ ಸಿದ್ದೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಸೇರಿದಂತೆ ನಿಲಯ ಪಾಲಕರು, ಮತ್ತಿತರರು ಉಪಸ್ಥಿತರಿದ್ದರು.