ತುಮಕೂರು : ಸರ್ಕಾರಿ ಕಟ್ಟಡಗಳ ಆವರಣದಲ್ಲಿ ಕಸ ಹಾಕುವವರ ವಿರುದ್ಧ ದಂಡ ಸಹಿತ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಎಂಜಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಹಾಗೂ ಉದ್ದೇಶಿತ ಬಾಬು ಜಗಜೀವನ ರಾಮ್ ಕಟ್ಟಡ ನಿವೇಶನಕ್ಕೆ ಸಂಬಂಧಿಸಿದ ಸ್ಥಳಕ್ಕಿಂದು ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಮಾತನಾಡಿದರು.
ಭೇಟಿ ನೀಡಿ ಸ್ಥಳದ ವಾಸ್ತವ ಸ್ಥಿತಿಯನ್ನು ತಿಳಿದುಕೊಂಡು ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ನಿವೇಶನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹೂಡಿರುವ ಕೇಸಿನ ಸಂಬಂಧ ಅಗತ್ಯ ಕ್ರಮವಹಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಮುಂದೆ ಯಾರೂ ಸಹ ಇಲ್ಲಿ ಕಸವನ್ನು ಸುರಿಯಬಾರದು. ಕಸ ಸುರಿದವರಿಗೆ ದಂಡ ಮತ್ತು ಕ್ರಿಮಿನಲ್ ಕೇಸ್ ದಾಖಸುವಂತೆ ನಿರ್ದೇಶಿಸಿದರು. ಈ ಸ್ಥಳದಲ್ಲಿ ಬಹಳ ವರ್ಷಗಳಿಂದಲೂ ರಾಶಿಯಾಗಿ ಬಿದ್ದಿರುವ ಕಸವನ್ನು ತೆಗೆಸಲು ಅಗತ್ಯ ಕ್ರಮವಹಿಸುವಂತೆ ಹಾಗೂ ಅನುದಾನದ ವಿವರವನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ಭವನ ಕಟ್ಟಡದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಇಲ್ಲದಿರುವ ಕಾರಣ ಹಾಗೂ ಕೆಲವೊಂದು ತುರ್ತು ದುರಸ್ತಿ ಕಾಮಗಾರಿಗಳು ಕೈಗೊಳ್ಳುವ ಸಂಬಂಧ ತುಮಕೂರು ಮಹಾನಗರ ಪಾಲಿಕೆ ಹಾಗೂ ಇನ್ನಿತರ ಇಲಾಖೆಗಳಲ್ಲಿ ಅಗತ್ಯವಿರುವ ಅನುದಾನವನ್ನು ಕ್ರೋಡೀಕರಿಸಿ ಕ್ರಿಯಾ ಯೋಜನೆ ತಯಾರಿಸಬೇಕು. ಕೂಡಲೇ ಅಂಬೇಡ್ಕರ್ ಭವನ ಕಟ್ಟಡದ ದುರಸ್ತಿ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರ ಉಪಯೋಗಕ್ಕಾಗಿ ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದರು
ಸುಮಾರು 10-12 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನ ನವೀಕರಣ ಕಾಮಗಾರಿ ಹಾಗೂ ಮೀಸಲು ಜಾಗದ ತಕರಾರಿನಿಂದ ಬಾಕಿಯಿರುವ ಡಾಕ್ಟರ್ ಬಾಬು ಜಗಜೀವನ ರಾಮ್ ಭವನಕ್ಕೆ ನಿರ್ಮಾಣ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಹಲವಾರು ವರ್ಷಗಳಿಂದ ಡಾ. ಬಾಬು ಜಗಜೀವನ್ ರಾಮ್ ಅವರ ಭವನ ನಿರ್ಮಾಣಕ್ಕೆಂದೇ ನಗರದ ಗುಬ್ಬಿ ವೀರಣ್ಣ ರಂಗ ಮಂದಿರ ಪಕ್ಕದಲ್ಲಿ 1 ಎಕರೆ 13 ಗುಂಟೆ ಪ್ರದೇಶದಲ್ಲಿರುವ ನಿವೇಶನ ಸಮಸ್ಯೆ ಮತ್ತು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನ ಕಟ್ಟಡ ನವೀಕರಣ ಕಾಮಗಾರಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ರಜಾ ದಿನದಲ್ಲೂ ಎಲ್ಲಾ ಅಧಿಕಾರಿಗಳನ್ನು ಕರೆಸಿ, ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿ ಪರಿಹರಿಸುವ ಮತ್ತು ಶೀಘ್ರದಲ್ಲಿ ಎರಡು ಕಾಮಗಾರಿಗಳಿಗೆ ಇರುವ ಅಡೆತಡೆಗಳನ್ನು ಪರಿಹರಿಸಿ ಎಲ್ಲಾ ಸಾರ್ವಜನಿಕರು ಮತ್ತು ದಲಿತ ಜನಾಂಗದವರ ಅನುಕೂಲಕ್ಕಾಗಿ ಪ್ರಾರಂಭಿಸಲು ಕ್ರಮ ವಹಿಸಲಾಗುವುದು ಎಂಬ ಸಂದೇಶವನ್ನು ನೀಡಿರುವುದು ಜಿಲ್ಲೆಯ ಎಲ್ಲಾ ದಲಿತ ವರ್ಗದ ಮುಖಂಡರಿಗೆ ಮತ್ತು ಸಾರ್ವಜನಿಕರಲ್ಲಿ ಭರವಸೆ ಮತ್ತು ಖುಷಿ ನೀಡಿದೆ. ನಿಜಕ್ಕೂ ಎರಡು ಕಾಮಗಾರಿಗಳ ಬಗ್ಗೆ ಮಾನ್ಯ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಅವರು ಬಂದ ದಿನದಿಂದಲೂ ಇಲ್ಲಿಯವರೆಗೆ ಎಲ್ಲ ಆಯಾಮಗಳನ್ನು ತಿಳಿದುಕೊಂಡು ಈ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ವಿಶೇಷ ಗಮನ ಹರಿಸಿರುವುದು ದಲಿತ ವರ್ಗದ ಸಮಾಜಕ್ಕೆ ಮತ್ತು ಎಲ್ಲಾ ದಲಿತ ಮುಖಂಡರಲ್ಲಿ ಆಶಾಕಿರಣ ಮತ್ತು ಆಶಾಭಾವನೆ ಮೂಡಿದೆ.ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ,ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶಿಲ್ದಾರ್ ಸಿದ್ದೇಶ್, ಪಾಲಿಕೆ ಉಪ ಆಯುಕ್ತೆ ಸುಮತಿ, ನಿರ್ಮಿತಿ ಕೇಂದ್ರದ ರಾಜಶೇಖರ್,ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಸ್ಥಳೀಯ ಮುಖಂಡರು ಹಾಜರಿದ್ದರು.