ತಿಪಟೂರು : ನಗರದ ತೆಂಗಿನಕಾಯಿ ಪ್ಯಾಕ್ಟರಿಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಹಾಗೂ ಸದಸ್ಯರು ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೆಂಗಿನಕಾಯಿ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಮೂಲಸೌಕರ್ಯದ ಕೊರತೆ ಜೊತೆಗೆ ಕೆಲ ಮಕ್ಕಳು ಬಾಲಕಾರ್ಮಿಕರಾಗಿ ಕೆಲಸಮಾಡುತ್ತಿರುವುದು ಮೇಲ್ಮೋಟಕ್ಕೆ ಕಂಡುಬಂದ ಕಾರಣ ಕಾರ್ಮಿಕ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳ ಪರಿಶೀಲನೆಯ ವೇಳೆ ಮಹಿಳೆಯರು ಹಾಗೂ ಮಕ್ಕಳಿಗೆ ಅಗತ್ಯವಾದ ವಾತಾವರಣವನ್ನು ಕಲ್ಪಪಿಸುವುದರಲ್ಲಿ ತೆಂಗಿನಕಾಯಿ ಪ್ಯಾಕ್ಟರಿಯ ಮಾಲೀಕರು ವಿಫಲರಾಗಿದ್ದು, ಈ ಬಗ್ಗೆ ತಪ್ಪಿತಸ್ಥ ಕಾರ್ಖಾನೆಯ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದರು.
ನಂತರ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಿಪಟೂರು ತಾಲೂಕಿನಲ್ಲಿ ತೆಂಗಿನಕಾಯಿ ಫ್ಯಾಕ್ಟರಿಗಳಲ್ಲಿ ಬಾಲ ಕಾರ್ಮಿಕ ಪದ್ಧತಿ, ಜೀವಂತವಾಗಿರುವ ಬಗ್ಗೆ ದೂರುಗಳು ಬಂದಿದ್ದು ಸ್ಥಳ ಪರಿಶೀಲನೆಯ ವೇಳೆ ದೂರಿಗೆ ಸಂಬಂಧಿಸಿದಂತೆ ಸಾಕ್ಷಿಗಳು ದೊರೆತಿವೆ, ಕೂಡಲೇ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಿತಿ ರಚಿಸಿ ಮಹಿಳೆಯರ ರಕ್ಷಣೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಅಥವಾ ಹೊರರಾಜ್ಯದಿಂದ ಕಾರ್ಮಿಕರನ್ನು ಬಲವಂತವಾಗಿ ಕರೆದುತರಲಾಗಿದೆಯೇ ಎಂಬುವುದರ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನ ರಚಿಸಲಾಗುವುದು.
ಪತ್ರಕರ್ತರ ಸಹಕಾರದಿಂದ ತಾಲೂಕಿನ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರನ್ನು ಬಳಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಇಂದು ಕೆಲವು ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ನೇರವಾಗಿ ಬಾಲ ಕಾರ್ಮಿಕರನ್ನು ಬಳಸುತ್ತಿರುವುದು ಕಂಡುಬರದಿದ್ದರೂ ಮಕ್ಕಳನ್ನು ಕೆಲಸಕ್ಕೆ ಬಳಸಿರಬಹುದಾದ ಕುರುಹುಳು ಸಿಕ್ಕಿವೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗನಗೌಡ ತಿಳಿಸಿದರು.
ಶಾಲೆಗೆ ಹೋಗದ ಹಲವಾರು ಮಕ್ಕಳು ಪ್ಯಾಕ್ಟರಿಗಳ ಹತ್ತಿರ ಪತ್ತೆಯಾಗಿದ್ದು ಅವರನ್ನು ಶಾಲೆಗೆ ಸೇರಿಸುವ ಪ್ರಯತ್ನ ಮಾಡಲಾಗುವುದು. ತಾಲೂಕಿನ ತಹಸೀಲ್ದಾರ್, ಕಾರ್ಮಿಕ ಅಧಿಕಾರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಲ್ಲಿ ಮಕ್ಕಳ ಪರಿಸ್ಥಿತಿ ಹೇಗಿದೆ, ಅವರ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯಾಗಿದೆ. ಅವರನ್ನು ಮುಖ್ಯವಾಹಿನಿಗೆ ತರಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುವುದು ಮಕ್ಕಳು ಶಾಲೆಗೆ ಹೋಗಲು ಬೇಕಾಗದ ಕ್ರಮಗಳ ಬಗ್ಗೆ ಡಿಡಿಪಿಐ ಜೊತೆ ಚರ್ಚಿಸಲಾಗಿದೆ. ಮಕ್ಕಳು ಶಾಲೆಗೆ ಹೋಗಲು ಇಷ್ಟಪಡದಿದ್ದರೆ ಅವರನ್ನು ಸಿಡಬ್ಲೂಸಿ ಮುಂದೆ ಹಾಜರುಪಡಿಸಿ ಅವರನ್ನು ಹಾಸ್ಟಲ್‌ಗೆ ಸೇರಿಸಲಾಗುವುದು. ಶಿಕ್ಷಣ ಮಕ್ಕಳ ಹಕ್ಕು. ಅದನ್ನು ಕಿತ್ತುಕೊಳ್ಳಲು ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ ಎಂದರು.
ಭೇಟಿ ಸಮಯದಲ್ಲಿ ಮಕ್ಕಳು ಮಹಿಳೆಯರಿಗೆ ಸುಭದ್ರವಾದ ವಾತಾವರಣ ಆ ಜಾಗದಲ್ಲಿ ಕಂಡುಬರಲಿಲ್ಲ. ಕಾರ್ಮಿಕರಿಗೆ ವಿಮೆ ಮಾಡಿಸಬೇಕು. ಮೂಲಭೂತ ಸೌಕರ್ಯ ಕಲ್ಪಿಸಬೇಕಿದೆ. 20ಜನರ ಮೇಲಿದ್ದರೆ ಪಿಎಫ್ ಸೌಲಭ್ಯ ನೀಡಬೇಕು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವಾಗದ ಹಾಗೆ ನೋಡಿಕೊಳ್ಳಬೇಕಿದೆ. ಅಧಿಕಾರ ಇದೆ ಎಂದು ಕಾರ್ಮಿಕರನ್ನು ಜೀತದಾಳುಗಳ ರೀತಿ ನೋಡಬಾರದು ಎಂದು ತಿಳಿಸಿದರು.
ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ ತಾಲೂಕು ಮಟ್ಟದ ಅಧಿಖಾರಿಗಳ ಸಭೆ ನಡೆಸಿ ಕೆಲವು ಕಾರ್ಖಾನೆಗಳಿಗೆ ಭೇಟಿ ಮಾಡಿದ ಸಮಯದಲ್ಲಿ ಬಾಲಕಾರ್ಮಿಕ ಪದ್ದತಿ ಜೊತೆಗೆ ಮಾನವ ಹಕ್ಕುಗಳ ಉಲ್ಲಂಘನೆ ಆಗಿರುವ ದೃಷ್ಠಿಕೋನದಿಂದಲೂ ನೋಡಬೇಕಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಬಹಳಷ್ಟು ಕಾರ್ಮಿಕರು ಬಿಹಾರ, ಒರಿಸ್ಸಾ ಭಾಗದಿಂದ ಬಂದಿದ್ದಾರೆ. ಅವರು ಸ್ವಯಂಪ್ರೇರಿತವಾಗಿ ಬಂದಿದ್ದಾರಾ, ಒತ್ತಾಯದಿಂದ ಬಂದಿದ್ದಾರಾ ಎಂದು ಪರಿಶೀಲಿಸಬೇಕಾಗಿದೆ. ಮಹಿಳೆಯರ ಸುರಕ್ಷತೆ ನಿಯಮಾವಳಿಗಳನ್ನು ಪಾಲಿಸದಿರುವುದು ಕಂಡುಬಂದಿದೆ. ಈ ಬಗ್ಗೆ ಕೂಡ ತನಿಖೆ ನಡೆಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು.
ಕಾರ್ಮಿಕ ಇಲಾಖೆಯ ವೈಫಲ್ಯ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಕೂಡಲ್ಲೇ ತಿಪಟೂರು ತಾಲ್ಲೋಕಿನಲ್ಲಿ ಇರುವ ಕಾರ್ಖಾನೆಗಳು ಹಾಗೂ ಕೆಲಸ ಮಾಡುತ್ತಿರುವ ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸಿ ಆಯೋಗಕ್ಕೆ ನೀಡಬೇಕು, ಶಾಲಾಬಿಟ್ಟ ಮಕ್ಕಳನ್ನ ಶಾಲೆಗಳಿಗೆ ದಾಖಲಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ತೆಂಗಿನ ಕಾಯಿ ಫ್ಯಾಕ್ಟರಿಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಜೊತೆಗೆ, ಮಾನವ ಹಕ್ಕುಗಳ ಉಲ್ಲಂಘನೆ, ಕಾರ್ಮಿಕರ ಸಂರಕ್ಷಣೆ ಕಾಪಾಡುವಲ್ಲಿ ವಿಫಲವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಅಲ್ಲದೇ ಫ್ಯಾಕ್ಟರಿಗಳಲ್ಲಿ ನೇರವಾಗಿ ಕಾರ್ಮಿಕರಿಗೆ ಹಣ ಸಂದಾಯ ಮಾಡದೇ ಮೇಸ್ತಿçÃಗಳಿಗೆ ಸಂದಾಯವಾಗುತ್ತಿದೆ. ಮಹಿಳೆಯರ ಸಂರಕ್ಷಣೆ ಬಗ್ಗೆ ಹಲವು ಅನುಮಾನಗಳಿವೆ. ಹೊರರಾಜ್ಯದ ಕಾರ್ಮಿಕರುಗಳ ಮಾಹಿತಿಯೇ ಇಲ್ಲ. ಆಧಾರ್ ಕಾರ್ಡ್, ಓಟರ್ ಐಡಿ ಇಲ್ಲದಂತಹ ಹಲವಾರು ಮಂದಿ ಕಾರ್ಮಿಕರು ಫ್ಯಾಕ್ಟರಿಗಳಲ್ಲಿ ಇದ್ದಾರೆ. ಪ್ರಕರವನ್ನು ಮಕ್ಕಳ ಹಕ್ಕುಗಳ ಉಲ್ಲಂಘನೆ ಜೊತೆಗೆ ಮಾನವ ಹಕ್ಕುಗಳ, ಮಹಿಳಾ ಹಕ್ಕುಗಳ ನೆಲೆಯಲ್ಲಿ ನೋಡುವಂತದ್ದಾಗಿದ್ದು ಸಂಬAಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿದ್ದು ತಿಪಟೂರು ತಾಲ್ಲೂಕಿನಲ್ಲಿ ಇರುವ ಎಲ್ಲಾ ತೆಂಗಿನಕಾಯಿ ಫ್ಯಾಕ್ಟರಿಗಳ ಮಾಹಿತಿ ಪಡೆದು ಸ್ಥಳಪರಿಶೀಲನೆಗೆ ತೆರಳುವಂತೆ ಸೂಚಿಸಲಾಗಿದೆ. -ಕೆ.ಟಿ ತಿಪ್ಪೇಸ್ವಾಮಿ ಸದಸ್ಯರು ರಾಜ್ಯ ಮಕ್ಕಳ ರಕ್ಷಣಾ ಆಯೋಗ
ವರದಿ ಪ್ರಕಟಣೆಗೊಂಡ ಹಲವು ದಿನಗಳಾದರೂ ಕ್ಷೇತ್ರಶಿಕ್ಷಣಾಧಿಕಾರಿ, ಕೈಗಾರಿಕೆ ಇಲಾಖೆಯ ಅಧಿಕಾರಿ, ಪೊಲೀಸರು ಕ್ರಮ ತೆಗೆದುಕೊಳ್ಳದಿರುವುದು ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಮುಂದಿನ ತಿಂಗಳ ಒಳಗಾಗಿ ಸಮಗ್ರ ಮಾಹಿತಿ ದೊರೆಯದಿದ್ದರೆ ಕ್ರಮ ಜರುಗಿಸಲಾಗುವುದು. ಅಧಿಕಾರಿಗಳ ನಡೆ ಬೇಸರ ಮೂಡಿಸಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪದಾಧಿಕಾರಿಗಳು ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ.ಸದಸ್ಯರಾದ ಡಾ//ತಿಪ್ಪೆಸ್ವಾಮಿ. ತಹಸೀಲ್ದಾರ್ ಚಂದ್ರಶೇಖರ್. ಇಒ.ಸುದರ್ಶನ್. ಕಾರ್ಮಿಕ ಇಲಾಖೆ ಅಧಿಕಾರಿ ಸುಶೀಲಮ್ಮ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ್. ಗ್ರೇಟ್ 2 ತಹಸೀಲ್ದಾರ್ ಜಗನ್ನಾಥ್, ಸಮಾಜ ಕಲ್ಯಾಣ ಇಲಾಖಾದಿಕಾರಿ ದಿನೇಶ್, ಬಿಆರ್‌ಪಿ ಗಂಗಾಧರ್ ಉಪಸ್ಥಿತರಿದರು.