ಮಧುಗಿರಿ : 2004 ರಲ್ಲಿ ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದು ದೊಡ್ಡೇರಿ ಹೋಬಳಿಯ ಮತದಾರರು. ಕಷ್ಟ ಕಾಲದಲ್ಲಿ ನಮ್ಮ ನೆರವಿಗೆ ದಾವಿಸಿದವರ ಋಣ ತೀರಿಸಬೇಕಾದ್ದು, ನಮ್ಮ ಕರ್ತವ್ಯ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಭಾನುವಾರ ವಾಲ್ಮೀಕಿ ಭವನ ಉದ್ಘಾಟನೆ ಮತ್ತು ಕ್ಷೇತ್ರದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ಅತೀ ಹೆಚ್ಚು ಮತದಾರರನ್ನು ಹೊಂದಿರುವ ದೊಡ್ಡೇರಿ ಹೋಬಳಿಯಲ್ಲಿ ಕಳೆದ ಚುನಾವಣೆ ಸಮಯದಲ್ಲಿ ಬಹಳಷ್ಟು ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ವಿಧಾನಸಭಾ ಅಧಿವೇಶ ಮುಗಿದ ನಂತರ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಲಾಗುವುದು. ನಮ್ಮ ತಾಲೂಕಿನಲ್ಲಿ ಅತೀ ಹೆಚ್ಚು ವಸತಿ ಶಾಲೆಗಳಿದ್ದು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಂಜೂರಾತಿ ಹಾಗೂ ದೊಡ್ಡೇರಿಯ ಆಸ್ಪತ್ರೆ ಯನ್ನು ಮೇಲ್ದರ್ಜೆಗೆ ಏರಿಸಲಾಗುವುದು. ದೊಡ್ಡೇರಿಯಲ್ಲಿ ನಾಡಕಚೇರಿ ಮತ್ತು ರೈತ ಸಂಪರ್ಕ ಕೇಂದ್ರ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು ಎಂದ ಅವರು ಮುಂದಿನ ದಿನಗಳಲ್ಲಿ ದೊಡ್ಡೇರಿ ಹೋಬಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.
ಈ ಹಿಂದೆ ಯಾರೂ ಸಹ ಗುಡಿಸಲಲ್ಲಿ ವಾಸ ಮಾಡಬಾರದೆಂಬ ಉದ್ದೇಶದಿಂದ ಕ್ಷೇತ್ರದಲ್ಲಿ ಸುಮಾರು 16400 ಮನೆಗಳ ನಿರ್ಮಾಣ ಮಾಡಲಾಗಿತ್ತು. ಮುಂದಿನ ದಿನಗಳಲ್ಲೂ ಕ್ಷೇತ್ರದಲ್ಲಿ ನಿವೇಶನ ರಹಿತರಿಗೆ ನಿವೇಶನ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ಖಾಸಗಿ ಜಮೀನುಗಳನ್ನು ಖರೀದಿಸಿ ನಿವೇಶನ ಹಂಚುವ ಕೆಲಸ ಮಾಡಲಾಗುವುದು ಎಂದರು.
ವಾಲ್ಮೀಕಿ ಭವನ ನಿರ್ಮಾಣ , ಗ್ರಾ.ಪಂ ಸಭಾ ಭವನ ನಿರ್ಮಾಣ ಸಾರ್ವಜನಿಕ ಆಸ್ತಿಗಳು ಹೆಚ್ಚು ಸೃಷ್ಟಿಯಾದರೆ ಮುಂದಿನ ಪೀಳಿಗೆ ಅನೂಕೂಲವಾಗುತ್ತದೆ. ತಾಲೂಕಿನಲ್ಲಿ ಗರಣಿ , ಕವಣದಾಲ ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಮುಂದಿನ ದಿನಗಳಲ್ಲಿ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಮಳೆ ಹೆಚ್ಚಾದರೆ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಲಿವೆ , ರೈತ ಉತ್ಪಾದನೆ ಮಾಡುವಂತಹ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಹಾಲು ಉತ್ಪಾದನೆಯೂ ವಿವಿಧ ಕಾರಣಗಳಿಂದ ಕುಂಠಿತ ವಾಗಿದ್ದು, ಹಾಲು ಉತ್ಪಾದಕ ರೈತರಿಗೆ 5 ರೂಗಳ ಪ್ರೋತ್ಸಾಹ ಧನ ಹೆಚ್ಚು ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದೇನೆ ಹೊರತು ಹಾಲಿನ ಧರ ಹೆಚ್ಚಿಸಬೇಕೆಂದು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳ ಗಳಲ್ಲಿ ಒಂದಾದ 10 ಕೆಜಿ ಅಕ್ಕಿ ವಿತರಣೆ ಮಾಡುವುದು ಶಥ ಸಿದ್ದ. ಸದ್ಯಕ್ಕೆ ಅಕ್ಕಿ ದೊರೆಯದ ಹಿನ್ನೆಲೆಯಲ್ಲಿ 5 ಕೆಜಿ ಅಕ್ಕಿ ನೀಡಿ ಉಳಿದ 5 ಕೆಜಿಗೆ ಪ್ರತಿ ಕೆಜಿಗೆ 34 ರೂ ನಂತೆ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುವುದು ಎಂದರು.
ಇನ್ನೊಂದು ವಾರದಲ್ಲಿ 1 ರಿಂದ 10 ತರಗತಿಯ ಸರ್ಕಾರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಗಳನ್ನು ತಲುಪಿಸುವ ಜವಾಬ್ದಾರಿ ನನ್ನದಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಕೊಠಡಿ , ಅಂಗನವಾಡಿಗಳ ದುರಸ್ಥಿ ಮತ್ತು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಮಾತನಾಡಿ ಕ್ಷೇತ್ರಕ್ಕೆ ಎತ್ತಿನಹೊಳೆಯ ನೀರು ಹರಿದು ಎಲ್ಲಾ ಕೆರೆಗಳು ತುಂಬಿ ಹರಿದರೆ ಮುಂದಿನ ದಿನಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬಂಗಾರದ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಲಿದೆ. ಸಮುದ್ರಕ್ಕೆ ಹರಿಯುವ ನೀರನ್ನು ನೇತ್ರಾವತಿ, ಕುಮಾರಧಾರ ನದಿಗಳಿಂದ ಬರುವ 125 ಟಿ ಎಂ ಸಿ ನೀರನ್ನು ತರಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಮಧುಗಿರಿ , ಕೊರಟಗೆರೆ ಸೇರಿ 1.5 ಟಿಎಂಸಿ ನೀರು ಹರಿಸಲಾಗುವುದು , ಕ್ಷೇತ್ರದ ಜನರಿಗೆ ನೀರು , ವಿದ್ಯುತ್ ನೀಡಿದರೆ ಕ್ಷೇತ್ರ ಸುಭಿಕ್ಷೆಯಾಗಿರುತ್ತದೆ ಎಂದರು.
ನಾನು ಈ ಚುನಾವಣೆಯಲ್ಲಿ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದುಕೊಂಡಿದ್ದೆ, ಆದರೆ ದೇವೇಗೌಡರು ಕ್ಷೇತ್ರಕ್ಕೆ ಬಂದು ಎದೆ ಬಡಿದುಕೊಂಡು ಮೈಕ್ ಎಸೆದು ಕಣ್ಣೀರು ಹಾಕಿ ಹೋದ ನಂತರ ನಾನು 36 ಸಾವಿರ ಮತಗಳ ಅಂತರದಿಂದ ಜಯ ಗಳಿಸಲು ಸಾದ್ಯವಾಯಿತು. ರಾಜಕೀಯದಲ್ಲಿ ಯಾರೂ ಶಾಶ್ವತ ಶತೃಗಳೂ ಅಲ್ಲ, ಮಿತ್ರರೂ ಅಲ್ಲ. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನಮಗೂ ಗೌರವವಿದೆ. ಹಾಸನ ವಿಮಾನ ನಿಲ್ದಾಣಕ್ಕೆ ದೇವೇಗೌಡರ ಹೆಸರಿಡಿ ಎಂದು ನಾನೇ ಸೂಚಿಸಿದ್ದೇನೆ. – ಕೆ.ಎನ್. ರಾಜಣ್ಣ, ಸಹಕಾರ ಸಚಿವ.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರಿಷಿ ಆನಂದ್, ತಾ.ಪಂ.ಇಓ ಲಕ್ಷ್ಮಣ್, ಬಿಇಓ ತಿಮ್ಮರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಣ್ಣ, ಗ್ರಾ.ಪಂ ಅದ್ಯಕ್ಷೆ ನಾಗಮಣಿ ರಂಗಾಸ್ವಾಮಿ , ಉಪಾದ್ಯಕ್ಷ ಹರೀಶ್ , ಸದಸ್ಯರಾದ ವಿಜಯಪ್ರಕಾಶ್ , ಮಂಜುನಾಥ್ , ಡಿ.ಎಲ್.ರಾಮಯ್ಯ , ಮಂಜಮ್ಮ , ಸಿದ್ದಪ್ಪ , ವರದರಾಜು , ರತ್ನಮ್ಮ , ಶ್ರೀಶೈಲ ಕುಮಾರ , ಮಂಗಳಮ್ಮ , ಶ್ರೀ ದೇವಮ್ಮ , ಶಾರದಮ್ಮ , ಮಹಾಲಕ್ಷ್ಮೀ , ಕಲಾವತಿ ವೆಂಕಟಪ್ಪ , ಪಿಡಿಓ ಶಿಲ್ಪಾ , ಮುಖಂಡರಾದ ತುಂಗೋಟಿ ರಾಮಣ್ಣ , ಚಿನ್ನಪ್ಪ , ಲಕ್ಷ್ಮೀನಾರಾಯಣ್ , ದೊಡ್ಡೇರಿ ಶಿವಣ್ಣ , ಕಣೀಮಯ್ಯ , ತಾ.ಪಂ ಮಾಜಿ ಸದಸ್ಯ ಪ್ರಸನ್ನ ಕುಮಾರ್ , ನಾಗರಾಜು , ಮಲ್ಲಿಕಾರ್ಜುನ್ , ಸಿರಿಯಪ್ಪ, ಸತೀಶ್ ಪೂಜಾರ್, ಲಿಂಗರಾಜು,ಡಿ.ಎಲ್. ಮಹಲಿಂಗಯ್ಯ, ಎಂ.ಎಂ. ಮೂರ್ತಿ ಇತರರಿದ್ದರು.