ಕುಣಿಗಲ್ : ಶಾಸಕ ಡಾ ಎಚ್ ಡಿ ರಂಗನಾಥ್ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಕುಂದು ಕೊರತೆಗಳನ್ನು ತಾಳ್ಮೆಯಿಂದ ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲವು ಖಡಕ್ ಸೂಚನೆಗಳನ್ನು ನೀಡಿ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದ್ದಾರೆ.
ತಾಲೂಕಿನ ಯಡಿಯೂರು ಹೋಬಳಿ ನಾಗಸಂದ್ರ ಗ್ರಾಮದಲ್ಲಿ ಶಾಸಕರ ನಡೆ, ಹಳ್ಳಿಗಳ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಶಾಸಕ ಡಾ, ಎಚ್ ಡಿ ರಂಗನಾಥ್ ರವರ ಅಧ್ಯಕ್ಷತೆಯಲ್ಲಿ ಜರುಗಿತು ನಾಗಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರು ಶಾಸಕರ ಸಮ್ಮುಖದಲ್ಲಿ ಕಂದಾಯ ಇಲಾಖೆಯಲ್ಲಿ ಸಮಯಕ್ಕೆ ಸರಿಯಾಗಿ ಯಾವುದೇ ಕೆಲಸಗಳು ಆಗುತ್ತಿಲ್ಲ ಭ್ರಷ್ಟಾಚಾರ ತುಂಬಿತುಳುಕುತ್ತಿದೆ ಕಂದಾಯ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ ಸಣ್ಣ ಪುಟ್ಟ ಕೆಲಸಗಳಿಗೂ ಜನರನ್ನು ಸುಖ ಸುಮ್ಮನೆ ನಾಡಕಚೇರಿ, ತಾಲೂಕು ಕಚೇರಿಗೆ ಅಲೆಸುತ್ತಾರೆ ಹೋದರು ಲಭ್ಯವಾಗುವುದಿಲ್ಲ ದೂರವಾಣಿ ಮೂಲಕ ಮಾತನಾಡಿದರೆ ಅಲ್ಲಿದ್ದೇವೆ ಇಲ್ಲಿದ್ದೇವೆ ಎಂದು ಆರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಾರೆ ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಬೆಲೆ ಜಾಸ್ತಿ ಇರುವುದರಿಂದ ಯಡಿಯೂರ ಹೋಬಳಿಯಲ್ಲಿ ಸರ್ಕಾರಿ ಆಸ್ತಿಗಳ ಹಾಗೂ ಇನ್ನಿತರೆ ಜಮೀನುಗಳ ಬೋಗಸ್ ಖಾತೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ ಹೀಗಾದರೆ ಗ್ರಾಮಗಳಲ್ಲಿ ಜೀವನ ಸಾಗಿಸುತ್ತಿರುವ ಬಡಬಗ್ಗರು ಹೇಗೆ ಜೀವನ ಸಾಗಿಸುವುದು ಎಂದು ಗೊತ್ತಾಗುತ್ತಿಲ್ಲ ವಿಚಾರ ಎಲ್ಲಾ ಗೊತ್ತಿದ್ದರೂ ತಹಸಿಲ್ದಾರ್ ಯಾವ ಕಾನೂನು ಕ್ರಮವನ್ನು ಜರುಗಿಸುತ್ತಿಲ್ಲ ಎಂದು ಕಂದಾಯ ಇಲಾಖೆ ವಿರುದ್ಧ ದೂರಿನ ಸುರಿಮಳೆಗೈದರು.
ನಾಗಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಯಾವುದೇ ಕೆಲಸಗಳು ನಡೆಯದೇ ನೆನೆಗುದಿಗೆ ಬಿದ್ದಿವೆ ದನಗಳ ಕೊಟ್ಟಿಗೆ ನಿರ್ಮಾಣ ಮಾಡಿದ್ದೇವೆ ಆದರೆ ಮೆಟೀರಿಯಲ್ ಹಣ ರೈತರ ಖಾತೆಗೆ ಬರದೇ ರೈತರು ಕಂಗಾಲಾಗಿದ್ದಾರೆ ಎಂದು ಸಾರ್ವಜನಿಕರು ಹತ್ತು ಹಲವಾರು ಬೇಡಿಕೆಗಳನ್ನು ಶಾಸಕರೊಂದಿಗೆ ಹೇಳಿಕೊಂಡಾಗ ಶಾಸಕರು ಸಾರ್ವಜನಿಕರ ದೂರುಗಳನ್ನು ತಾಳ್ಮೆಯಿಂದ ಆಲಿಸಿ ಯಾವುದೇ ಇಲಾಖೆ ಅಧಿಕಾರಿಗಳು ಸಾರ್ವಜನಿಕರನ್ನು ಸುಖ ಸುಮ್ಮನೆ ಸರ್ಕಾರಿ ಕಚೇರಿಗಳಿಗೆ ಅಲೆಸದೆ ವೇಳೆಗೆ ಸರಿಯಾಗಿ ಸಾರ್ವಜನಿಕರ ಕೆಲಸ ಮಾಡುವಂತೆ ಖಡಕ್ ಸೂಚನೆ ನೀಡಿದ ಅವರು ಕಂದಾಯ ಇಲಾಖೆಯಲ್ಲಿ ಬೋಗಸ್ ಖಾತೆಗಳನ್ನು ಮಾಡುವುದು ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ನಿಯಮಾನುಸಾರ ಕಾನೂನು ಕ್ರಮ ಜರುಗಿಸುವುದು ನಿಶ್ಚಿತ ಎಂದ ಅವರು ಜನರಿಗೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗೃಹಜೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ,ಯುವ ನಿಧಿ, ಶಕ್ತಿ ಯೋಜನೆಗಳನ್ನು ನೊಂದಣಿ ಮಾಡುವ ಮೂಲಕ ಜನರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿ ಈ ವಿಚಾರ ತಿಳಿಯದ ಜನಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು, ಕಾರ್ಯಕರ್ತರು ಸರ್ಕಾರದ ಉಚಿತ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಂತೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಪುರುಷೋತ್ತಮ್ ರವರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ವನಮೋತ್ಸವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕರು ಗಿಡಗಳನ್ನು ನೆಟ್ಟಿ ನೀರು ಸಿಂಪಡಿಸಿದರು ಕಾರ್ಯಕ್ರಮ ಮುಗಿದ ನಂತರ ಶಾಸಕರು, ಅಧಿಕಾರಿಗಳು ಮತ್ತು ಕಾರ್ಯಕರ್ತರು ಗ್ರಾಮದ ವ್ಯಕ್ತಿಯೊಬ್ಬರ ಮನೆಯಲ್ಲಿ ಸಸ್ಯಹಾರಿ ಮುದ್ದೆ ಊಟ ಸವಿದು ಅಲ್ಲಿಯೇ ನಿದ್ರೆಗೆ ಜಾರಿದರು. ಒಟ್ಟಾರೆ ಅಧಿಕಾರಿಗಳೊಂದಿಗಿನ ಶಾಸಕರ ಗ್ರಾಮ ವಾಸ್ತವ್ಯ ಯಶಸ್ವಿಯಾಗಿ ಜರುಗಿತು ಹೀಗೆ ಶಾಸಕರು ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಿದರೆ ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮರ್ಪಕವಾಗಿ ತಮ್ಮ ತಮ್ಮ ಇಲಾಖೆಗಳ ಕೆಲಸಗಳನ್ನು ನಿರ್ವಹಿಸುತ್ತಾರೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹಾಬಲೇಶ್ವರ್ ಒಳಗೊಂಡಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಯ್ಯ, ಸದಸ್ಯ ಚಂದ್ರೇಗೌಡ, ಗ್ರಾಮ ಪಂಚಾಯಿತಿ ಪಿಡಿಒ, ಮುಖಂಡರಾದ ಜೆಸಿಬಿ ರಾಜಣ್ಣ,ಬೇಗೂರು ನಾರಾಯಣ್, ರವಿಕುಮಾರ್, ಶಂಕರ್, ಅಬ್ದುಲ್ ಅಮೀದ್, ಮತ್ತಿತರರು ಉಪಸ್ಥಿತರಿದ್ದರು.
ವರದಿ: ರೇಣುಕಾ ಪ್ರಸಾದ್