ತುಮಕೂರು : ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿರುವ ಕೆ.ಶ್ರೀನಿವಾಸ್ ಸೋಮವಾರ ಅಧಿಕಾರ ಸ್ವೀಕರಿಸಿದರು. ಪ್ರಭಾರ ಜಿಲ್ಲಾಧಿಕಾರಿಯು ಆದ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಅಧಿಕಾರ ಹಸ್ತಂತಾರಿಸಿ ಹೂಗುಚ್ಛ ನೀಡಿ ಸ್ವಾಗತಿಸಿದರು.
ಜಿಲ್ಲಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಆಯೋಜಿಸಿದ್ದ ಕುಡಿಯುವ ನೀರಿನ ನಿರ್ವಹಣೆ ಕುರಿತ ಪರಿಶೀಲನಾಸಭೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನದ ನಂತರ ತುರುವೇಕೆರೆಯಲ್ಲಿ ಗ್ರಾಪಂ 2ನೇ ಅವಧಿ ಮೀಸಲು ನಿಗದಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಬೆಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ.ಶ್ರೀನಿವಾಸ್ 2012ರಲ್ಲಿ ಐಎಎಸ್ ಶ್ರೇಣಿ ಅಧಿಕಾರಿಯಾಗಿ ಬಡ್ತಿ ಹೊಂದಿದ್ದರು. 1999ರಲ್ಲಿ ಕೆಎಎಸ್ ಬ್ಯಾಚ್‌ನಲ್ಲಿ ಆಯ್ಕೆಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕರಾಗಿ ಸೇವೆ ಆರಂಭಿಸಿದ ಶ್ರೀನಿವಾಸ್ ಅವರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಯುಕ್ತರಾಗಿಯು ಸೇವೆ ಸಲ್ಲಿಸಿದ್ದರು.
ಸಮರ್ಪಕವಾಗಿ ಕೋವಿಡ್ ನಿರ್ವಹಣೆ : ಬೆಂಗಳೂರು ಗ್ರಾಮಾಂತರದಲ್ಲಿ 2 ಅವಧಿಗೆ ಜಿಲ್ಲಾಧಿಕಾರಿಯಾಗಿದ್ದ ಕೆ.ಶ್ರೀನಿವಾಸ್ ಕರೊನಾ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಸಮರ್ಪಕವಾಗಿ ಕೋವಿಡ್ ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಗ್ರಾಮಾಂತರ ನಂತರ ಬೆಂಗಳೂರು ನಗರದ ಜಿಲ್ಲಾಧಿಕಾರಿಗೆ ಸಮ್ಮಿಶ್ರ ಸರ್ಕಾರ ಪತನದ ಸಂದರ್ಭದಲ್ಲಿ 2 ಬಾರಿ ಸಣ್ಣ ಅವಧಿಗೆ ಸೇವೆ ಸಲ್ಲಿಸಿದ್ದರು.
ಎಂ.ಎಸ್ಸಿ ., ಪದವೀಧರರಾದ ಶ್ರೀನಿವಾಸ್ ಮೂಲತಃ ಮೈಸೂರು ಜಿಲ್ಲೆ ಬನ್ನೂರು ಗ್ರಾಮದವರಾದ ಇವರು ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದ್ದಾರೆ.