ಜಿಲ್ಲೆತುಮಕೂರುಸುದ್ದಿ

ಜಿಲ್ಲೆ ತೋರಿದ ಪ್ರೀತಿಯನ್ನು ನಾನೆಂದೂ ಮರೆಯುವುದಿಲ್ಲ : ನಿಕಟಪೂರ್ವ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್

ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಬೀಳ್ಕೊಡುಗೆ ಸಮಾರಂಭ

ತುಮಕೂರು : ಕಳೆದ 2 ವರ್ಷಗಳಲ್ಲಿ ಜಿಲ್ಲೆಯ ಜನತೆ ತೋರಿದ ಪ್ರೀತಿಯನ್ನು ನಾನೆಂದೂ ಮರೆಯುವುದಿಲ್ಲವೆಂದು ನಿಕಟಪೂರ್ವ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಭಾವುಕರಾಗಿ ನುಡಿದರು.
ಕೃಷಿ ಇಲಾಖೆ ಆಯುಕ್ತರಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ನಗರದ ಗ್ರಂಥಾಲಯ ಸಭಾಂಗಣದಲ್ಲಿ ಸೋಮವಾರ ಸಂಜೆ ಎಲ್ಲ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಅವರು ಎಲ್ಲರ ಮೆಚ್ಚುಗೆ, ಪ್ರಶಂಸೆ, ಹೊಗಳಿಕೆ ಮಾತುಗಳನ್ನು ಕೇಳಿ ಹೃದಯ ತುಂಬಿ ಬಂದಿದೆ. ನನ್ನ ಆಡಳಿತದ ಬಗ್ಗೆ ಸದಭಿಪ್ರಾಯಗಳನ್ನು ವ್ಯಕ್ತಪಡಿಸಿದ ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದರಲ್ಲದೆ ಜಿಲ್ಲೆಯ ಜನರಷ್ಟು ಒಳ್ಳೆಯ ಜನರನ್ನು ನಾನೆಲ್ಲೂ ನೋಡ್ಲೇ ಇಲ್ಲ. ಉತ್ತಮ ಆಡಳಿತಕ್ಕೆ ಜಿಲ್ಲೆಯ ಜನತೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರವೇ ಕಾರಣ ಎಂದು ತಿಳಿಸಿದರು.
ಕೋವಿಡ್, ಅತೀವೃಷ್ಟಿಯ ಸಂಕಷ್ಟ ಪರಿಸ್ಥಿತಿಯಲ್ಲಿ ಹಾಗೂ ಚುನಾವಣಾ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನನ್ನ ಜೊತೆಯಾಗಿದ್ದರಿಂದ ಪರಿಸ್ಥಿತಿಗಳನ್ನು ನಿಭಾಯಿಸಲು ಕಷ್ಟವಾಗಲಿಲ್ಲ. ಕಾನೂನು ಸುವ್ಯವಸ್ಥೆ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಅಭಿವೃದ್ಧಿ ಹಾದಿಯಲ್ಲಿ 27ನೇ ಸ್ಥಾನದಲ್ಲಿದ್ದ ಜಿಲ್ಲೆಯು ಇವರ ಸಹಕಾರದಿಂದ 3ನೇ ಸ್ಥಾನ ತಲುಪಲು ಸಾಧ್ಯವಾಯಿತು ಎಂದು ತಿಳಿಸಿದರಲ್ಲದೆ ಎಲ್ಲರ ಅಭಿಮಾನ ಹೊಗಳಿಕೆಗಳೆಲ್ಲ ನನ್ನ ತಂದೆ, ತಾಯಿ, ಪತ್ನಿ ರಶ್ಮಿ ಪಾಟೀಲ, ಮಕ್ಕಳು ಹಾಗೂ ಬಂಧುಗಳಿಗೆ ಸಲ್ಲಬೇಕು. ಸನ್ನಡತೆಯಿಂದ ಇಡೀ ಜಗತ್ತನ್ನೇ ಗೆಲ್ಲಬಹುದೆಂದು ನನ್ನೆಲ್ಲ ಹಿರಿಯರು ತೋರಿದ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಮನದಾಳದ ಮಾತುಗಳನ್ನಾಡಿದರು.
ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಬೇಕು. ಅಭಿವೃದ್ಧಿಯಲ್ಲಿ ಜಿಲ್ಲೆಗೆ ದೊರೆತಿರುವ 3ನೇ ಸ್ಥಾನವನ್ನು ಕೆಳಕ್ಕಿಳಿಯದಂತೆ ಕಾಯ್ದುಕೊಳ್ಳಬೇಕು ಎಂದು ಕಿರಿಯ ಅಧಿಕಾರಿಗಳಿಗೆ ಸಲಹೆ ನೀಡಿದರು ಎಂದರಲ್ಲದೆ ನನ್ನ ಅಧಿಕಾರಾವಧಿಯಲ್ಲಿ ಭೂಮಿ ಪೆಂಡೆನ್ಸಿ, ಸ್ಮಶಾನ ಭೂಮಿ ಮಂಜೂರು, ನಿವೇಶನ ಹಂಚಿಕೆ ಸೇರಿದಂತೆ 2008 ರಿಂದ ಬಾಕಿಯಿದ್ದ ಸುಮಾರು 3000 ನ್ಯಾಯಾಲಯ ಪ್ರಕರಣಗಳನ್ನು ಇತ್ಯರ್ಥಪಡಿಸಿದ ತೃಪ್ತಿ ನನಗಾಗಿದೆ. ಜಿಲ್ಲೆ ತೋರಿದ ಪ್ರೀತಿಯನ್ನು ಹೃದಯಲ್ಲಿಟ್ಟುಕೊಂಡು ಮುಂದಿನ ಸೇವೆಯಲ್ಲಿ ಅದನ್ನು ಶಕ್ತಿಯಾಗಿ ಬಳಸಿಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
ಇದಕ್ಕೂ ಮುನ್ನ ಪ್ರಭಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಕೆ. ವಿದ್ಯಾಕುಮಾರಿ ಮಾತನಾಡುತ್ತಾ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದಂತಹ ಭಾವನೆ ಮೂಡುತ್ತಿದೆ. ಕೆಲವೇ ಕೆಲವು ಕಾರ್ಯಕ್ರಮಗಳು ಇಂತಹ ಅನುಭವ ನೀಡುತ್ತವೆ ಎಂದು ಹೇಳಿದರಲ್ಲದೆ ಅಹಂ ಇಲ್ಲದ ಸರಳ ವ್ಯಕ್ತಿತ್ವ ಜಿಲ್ಲಾಧಿಕಾರಿಗಳದ್ದು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಪ್ರತ್ಯೇಕ ಇಲಾಖೆಗಳೆಂದು ಎಂದಿಗೂ ಭಾಸವಾಗದಂತೆ ಸಮನ್ವಯತೆಯಿಂದ ಕೂಡಿ ಸರ್ಕಾರದ ಯೋಜನೆಗಳನ್ನು ಕಾರ್ಯಗತಗೊಳಿಸಿದ ಕೀರ್ತಿ ಜಿಲ್ಲಾಧಿಕಾರಿಗಳಿಗೆ ಸಲ್ಲುತ್ತದೆ. ಅವರ ಯಾವುದೇ ಕೆಲಸವಿರಲಿ ಮಾನವೀಯ ಸ್ಪರ್ಶ ಎದ್ದು ಕಾಣುತ್ತದೆ. ಜನರೊಂದಿಗೆ ಬೆರೆತು ಯಾವುದೇ ಸಮಸ್ಯೆಯಿದ್ದರೂ ಅಂತಃಕರಣದಿಂದ ಬಗೆಹರಿಸುವ ಅವರ ಗುಣವೇ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿಗಳ ಗುಣಗಾನ ಮಾಡಿದರು.

ಕೋವಿಡ್‌ನಂತಹ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತ ನಿರ್ವಹಣೆಗೆ ವೈ.ಎಸ್. ಪಾಟೀಲರು ನಮಗೆಲ್ಲ ಮಾದರಿ. ತುಮಕೂರಿನಂತಹ ದೊಡ್ಡ ಜಿಲ್ಲೆಯಲ್ಲಿ ಆಡಳಿತ ನಡೆಸುವುದು ಸುಲಭದ ಮಾತಲ್ಲ. ಜಿಲ್ಲೆಯ ಹಲವಾರು ಪ್ರಗತಿಗೆ ಕಾರಣರಾಗಿದ್ದಾರೆ. ಕೃಷಿ ಇಲಾಖೆಯಲ್ಲಿ ಅವರ ಸೇವೆ ರಾಜ್ಯದ ರೈತರಿಗೆ ದೊರೆಯಲಿ ಎಂದು ಆಶಿಸಿದರು.
ಜಿಲ್ಲಾಧಿಕಾರಿಗಳೊಂದಿಗಿನ ಒಡನಾಟದ ಬಗ್ಗೆ ಮೆಲುಕು ಹಾಕಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್‌ವಾಡ್ ಕೆಲವು ಕ್ಷಣ ಭಾವುಕರಾದರು. ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ನಾ ಕಂಡ ಅತ್ಯುತ್ತಮ ವ್ಯಕ್ತಿ ನಮ್ಮ ಪಾಟೀಲ್ ಸರ್. ಎಷ್ಟೇ ಒತ್ತಡದ ಪರಿಸ್ಥಿತಿಯಿದ್ದರೂ ಸುಲಭವಾಗಿ ನಿಭಾಯಿಸುತ್ತಾರೆ. ಅವರೊಂದಿಗೆ ಕೆಲಸ ನಿರ್ವಹಿಸಿದ ಅನುಭವಗಳನ್ನು ಹಂಚಿಕೊಂಡರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಮಾತನಾಡಿ ಜಿಲ್ಲಾದಿಕಾರಿಗಳೊಂದಿಗೆ 4 ತಿಂಗಳ ಅವಧಿಯಲ್ಲಿ ನಿರ್ವಹಿಸಿದ ಕೆಲಸ 21 ವರ್ಷದ ತಮ್ಮ ಸೇವೆಗೆ ಸಮ. ಉಳಿದ ಜಿಲ್ಲೆಗಳಿಗಿಂತ ತುಮಕೂರು ಜಿಲ್ಲೆಯಲ್ಲಿ ಜರುಗಿದ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಂದ ವ್ಯಕ್ತವಾದ ಪ್ರಶಂಸೆ ಹಾಗೂ ಯಶಸ್ವೀ ಚುನಾವಣೆಗೆ ಜಿಲ್ಲಾಧಿಕಾರಿಗಳ ಮುಂದಾಲೋಚನೆ ಮತ್ತು ಪೂರ್ವತಯಾರಿಗಳೇ ಕಾರಣ ಎಂದು ಮೆಚ್ಚುಗೆ ಮಾತುಗಳನ್ನಾಡಿದರು.
ಸರ್ಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷ ನರಸಿಂಹರಾಜು ಮಾತನಾಡಿ ಪ್ರತೀ ಸೋಮವಾರ ನಡೆಯುವ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭೂಮಿ ಪೆಂಡೆನ್ಸಿ ವಿಲೇವಾರಿ ಮಾಡಲು ಗುರಿ ನಿಗಧಿಪಡಿಸುತ್ತಿದ್ದರು. ನಿರೀಕ್ಷಿತ ಗುರಿ ಸಾಧಿಸದ ಅಧಿಕಾರಿಗಳಿಂದ ಕೆಲಸ ತೆಗೆಯುವ ಕಲೆ ಅವರಲ್ಲಿದೆ. ಜಿಲ್ಲಾಧಿಕಾರಿಗಳೊಂದಿಗೆ ಕೆಲಸ ನಿರ್ವಹಿಸಿದ ದಿನಗಳು ಅವಿಸ್ಮರಣೀಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರೊಬೇಷನರಿ ತಹಶೀಲ್ದಾರ್ ನಾಗಮಣಿ ಮಾತನಾಡಿ ನ್ಯಾಯಾಲಯ ಪ್ರಕರಣಗಳನ್ನು ಇತ್ಯರ್ಥಪಡಿಸುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಕಲಿಯುವ ಅವಕಾಶ ದೊರೆತ ಕ್ಷಣಗಳ ಬಗ್ಗೆ ಮೆಲುಕು ಹಾಕಿದರು.
ಮಹಾನಗರ ಪಾಲಿಕೆ ಆಯುಕ್ತ ಹೆಚ್.ವಿ. ದರ್ಶನ್ ಮಾತನಾಡಿ ಯಾವುದೇ ಸಭೆಯಿದ್ದರೂ ನಿಗಧಿತ ಸಮಯಕ್ಕೆ ಸರಿಯಾಗಿ ನಡೆಸುತ್ತಿದ್ದ ಜಿಲ್ಲಾಧಿಕಾರಿಗಳ ಸಮಯಪಾಲನೆಯನ್ನು ನಾವೆಲ್ಲರೂ ರೂಢಿಸಿಕೊಳ್ಳುವ ಅಗತ್ಯವಿದೆ. ಸಭೆಯಲ್ಲಿ ಯಾವ ಅಧಿಕಾರಿಯನ್ನು ದೂರುತ್ತಿರಲಿಲ್ಲ. ಬದಲಿಗೆ ಮಾರ್ಗದರ್ಶನ ನೀಡುತ್ತಿದ್ದರು. ಅವರ ತಾಳ್ಮೆಗೆ ಅವರೇ ಸಾಟಿ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಗುಬ್ಬಿ ತಹಶೀಲ್ದಾರ್ ಆರತಿ ಮಾತನಾಡಿ ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದು ಭಾವಿಸಿರುವ ಅವರದು ವಿರಳ ವ್ಯಕ್ತಿತ್ವ. ಮನಸ್ಸು ನಿಷ್ಕಲ್ಮಶವಾಗಿದ್ದರೆ ಮಾತು ಮಲಿನವಾಗಿರುವುದಿಲ್ಲವೆಂದು ಸದಾ ಅಧಿಕಾರಿಗಳಿಗೆ ಮನನ ಮಾಡುತ್ತಿದ್ದರು. ನನ್ನ ವೃತ್ತಿ ಜೀವನದಲ್ಲಿ ಕಂಡ ಅತ್ಯುತ್ತಮ ಜಿಲ್ಲಾಧಿಕಾರಿಗಳು ಇವರು ಎಂದು ಬಣ್ಣಿಸಿದರು.
ನಗರಾಭಿವೃದ್ಧಿ ಕೋಶದ ಅಂಜನಪ್ಪ ಮಾತನಾಡಿದ ನಗು-ನಗುತ್ತಲೇ ನಮ್ಮಿಂದ ಕೆಲಸ ತೆಗೆದುಕೊಂಡಿದ್ದಾರೆ. ನಗರ ಸ್ಥಳೀಯ ಸಂಸ್ಥೆಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ಬೆನ್ನೆಲುಬಾಗಿ ನಿಲ್ಲುವುದಲ್ಲದೆ ಪೌರಕಾರ್ಮಿಕರ ನೇರ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಂಡರು. ಬಡವರಿಗೆ ಅನುಕೂಲ ಮಾಡಿಕೊಡಲು ಆದ್ಯತೆ ನೀಡಬೇಕೆಂದು ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.
ಚುನಾವಣಾ ತರಬೇತಿದಾರ ಡಾ|| ಜಿ.ವಿ. ಗೋಪಾಲ ಮಾತನಾಡಿ ಜಿಲ್ಲಾ ಚುನಾವಣಾಧಿಕಾರಿಗಳಾಗಿದ್ದರೂ ಸಹ ಚುನಾವಣಾ ಸಂದರ್ಭದಲ್ಲಿ ಅಧಿಕಾರಿ/ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯಂತೆ ಕುಳಿತು ಆಲಿಸುವ ದೊಡ್ಡ ಗುಣವನ್ನು ಅವರಲ್ಲಿ ಕಂಡಿದ್ದೇನೆ. ತರಬೇತಿಯನ್ನು ಸುಲಭವಾಗಿ ನೀಡುವ ವಿಧಾನವನ್ನು ಅವರಿಂದ ಪಡೆದಿದ್ದೇನೆ ಎಂದು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಮಾತನಾಡುತ್ತಾ ಜಿಲ್ಲಾಧಿಕಾರಿಗಳ ಕ್ಷಮಾ ಗುಣ, ತಾಯಿ ಹೃದಯ, ಕೆಲಸದಲ್ಲಿ ಶಿಸ್ತು, ಅಧಿಕಾರದೊಂದಿಗೆ ಮಾನವೀಯ ಹಿನ್ನೆಲೆಯುಳ್ಳ ಗುಣಗಳು ನನ್ನ ಮನ ಸೆಳೆದಿವೆ. ನಮ್ಮದೇ ಇಲಾಖೆಗೆ ಆಯುಕ್ತರಾಗಿ ಬಂದಿರುವುದು ನನಗೆ ಸಂತಸ ತಂದಿದೆ. ಇನ್ನಷ್ಟು ಕಾಲ ಅವರ ಅಧೀನದಲ್ಲಿ ಸೇವೆ ಮಾಡುವ ಅವಕಾಶ ನನಗಿದೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ವಿದ್ಯಾರ್ಥಿಗಳು ಧ್ಯಾನ ಮಂತ್ರದ ಮೂಲಕ ಜಿಲ್ಲಾಧಿಕಾರಿಗಳನ್ನು ಬೀಳ್ಕೊಟ್ಟಿದ್ದು ಹಾಗೂ ಜಿಲ್ಲಾಧಿಕಾರಿಗಳ ಬಗ್ಗೆ ಸತೀಶ್ ಅವರ ಕವನ ವಾಚನ ವಿಶೇಷವಾಗಿತ್ತು.
ನಂತರ ನಿಕಟಪೂರ್ವ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹಾಗೂ ರಶ್ಮಿ ಪಾಟೀಲ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳಾದ ರಿಷಿ ಆನಂದ್ ಹಾಗೂ ಕಲ್ಪಶ್ರೀ, ತಹಶೀಲ್ದಾರ್ ಸಿದ್ದೇಶ್, ಕುಣಿಗಲ್ ತಹಶೀಲ್ದಾರ್ ಮಹಾಬಲೇಶ್ವರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ನಿರ್ಮಿತಿ ಕೇಂದ್ರದ ರಾಜಶೇಖರ್, ರೇಷ್ಮೆ ಇಲಾಖೆ ಉಪನಿರ್ದೇಶಕ ವೈ.ಎ. ಬಾಲಕೃಷ್ಣ, ಎಲ್ಲ ತಾಲೂಕು ತಹಶೀಲ್ದಾರರು, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಸುಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಮಂಜುನಾಥ, ಜಿಲ್ಲಾ ಶಸ್ತçಚಿಕಿತ್ಸಕಿ ಡಾ|| ವೀಣಾ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗಂಗಪ್ಪ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಅತೀಕ್, ಸಣ್ಣ ಮಸಿಯಪ್ಪ, ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ದೊಡ್ಮನೆ ಗೋಪಾಲಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker