ತುಮಕೂರು : ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಕಲಾ ಕಾಲೇಜುಗಳಲ್ಲಿ ಮೇ 13ರಂದು ಮತ ಎಣಿಕಾ ಕಾರ್ಯ ನಡೆಯಲಿದ್ದು,ಚುನಾವಣೆಯಲ್ಲಿ ಜಯಗಳಿಸಿದ ಆಭ್ಯರ್ಥಿಗಳು ವಿಜಯೋತ್ಸವ ಆಚರಿಸಲು ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುವ ಸಾಧ್ಯತೆ ಇದೆ.
ಪರಾಭವಗೊಂಡ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಜಯಗಳಿಸಿದ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಗಲಾಟೆ ಆಗುವ ಸಾಧ್ಯತೆಗಳು ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜಿಲ್ಲಾದ್ಯಂತ ಮೇ 12 ಸಂಜೆ 6 ಗಂಟೆಯಿಂದ ಮೇ 13ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೈ.ಎಸ್. ಪಾಟೀಲ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆಯ ಅವಧಿಯಲ್ಲಿ ಐದು ಜನರ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲಿ, ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಸೂಕ್ತ ಪ್ರಾಧಿಕಾರದಿಂದ ಅನುಮತಿ ಪಡೆದು ಮೆರವಣಿಗೆ ನಡೆಸತಕ್ಕದ್ದು. ಶಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಇಟ್ಟಿಗೆ, ಚಾಕು, ಕೋಲು, ಬಂದೂಕು ಅಥವಾ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ
ವಸ್ತುಗಳನ್ನು ಒಯ್ಯುವುದು/ ಶೇಖರಿಸುವಂತಿಲ್ಲ.
ಯಾವುದೇ ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲು ಮತ್ತು ಕ್ಷಿಪಣಿಗಳನ್ನು ಎಸೆಯುವ ಸಾಧನ/ ಉಪಕರಣಗಳನ್ನು ಒಯ್ಯುವುದು/ ಶೇಖರಿಸುವಂತಿಲ್ಲ
ಅಣಕು ಶವ ಪ್ರದರ್ಶನ ಅಥವಾ ಆಕೃತಿ ಪ್ರತಿಮೆಗಳ ಪ್ರದರ್ಶನ ಮಾಡುವುದು, ಪಟಾಕಿ ಸಿಡಿಸಿ ಸಂಭ್ರಮಿಸುವಂತಿಲ್ಲ. ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವಂತಿಲ್ಲ.
ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಭಂಗವುಂಟು ಮಾಡುವ ಸುಳ್ಳು ವದಂತಿಗಳನ್ನು ಹಬ್ಬಿಸುವಂತಿಲ್ಲ.
ಸಾರ್ವಜನಿಕ ಪ್ರಾಣ ಮತ್ತು ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗುವ ರೀತಿಯಲ್ಲಿ ವರ್ತಿಸುವಂತಿಲ್ಲ. ಯಾವುದೇ ವ್ಯಕ್ತಿ ನಿಷೇಧಿಸಿರುವ ಮಾರಕಾಸ್ತ್ರ ಸ್ಫೋಟಕ ವಸ್ತು, ಬಂದೂಕು ಹೊಂದಿದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವಿರುತ್ತದೆ
ಮತ್ತು ಅಂತಹ ವ್ಯಕ್ತಿಯ ಬಳಿಯಿರುವ ಮಾರಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.ನಿಷೇಧಾಜ್ಞೆ ಯನ್ನು ಸದುದ್ದೇಶ ಕಾರ್ಯಗಳಾದ ಶವ ಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆಗೆ ಅನ್ವಯಿಸುವುದಿಲ್ಲ. ನಿಷೇಧಾಜ್ಞೆಯನ್ನು ಉಲ್ಲಂಘಿಸುವವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸೂಚನೆ ನೀಡಿದ್ದಾರೆ.