ತುಮಕೂರು : ಜಿಲ್ಲೆಯಲ್ಲಿ ಮೇ 10ರಂದು ಜರುಗಿದ ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮೇ 13ರಂದು ಮತ ಎಣಿಕಾ ಕಾರ್ಯ ನಡೆಸಲು ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಬೆಳಿಗ್ಗೆ 8 ರಿಂದ ಎಣಿಕಾ ಕಾರ್ಯ:-
ಜಿಲ್ಲೆಯ ಮಧುಗಿರಿ, ಪಾವಗಡ, ಕೊರಟಗೆರೆ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕಾ ಕಾರ್ಯವನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು; ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ ಕ್ಷೇತ್ರಗಳ ಮತ ಎಣಿಕೆಯನ್ನು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ಹಾಗೂ ಕುಣಿಗಲ್, ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ಮೇ 13ರ ಬೆಳಿಗ್ಗೆ 8 ಗಂಟೆಯಿಂದ ನಡೆಸಲಾಗುವುದು.
651 ಅಧಿಕಾರಿ/ಸಿಬ್ಬಂದಿಗಳ ನಿಯೋಜನೆ :-
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಂಬಂಧಿಸಿದಂತೆ ಪ್ರತಿ ಕ್ಷೇತ್ರಕ್ಕೆ 14 ಇವಿಎಂ ಟೇಬಲ್‌ನಂತೆ ಒಟ್ಟು 154 ಟೇಬಲ್, ಇಟಿಪಿಬಿಎಸ್ ಎಣಿಕೆಗಾಗಿ ತಲಾ 1ರಂತೆ ಒಟ್ಟು 11 ಟೇಬಲ್, ಅಂಚೆ ಮತಪತ್ರ ಎಣಿಕೆಗಾಗಿ ಒಟ್ಟು 30 ಟೇಬಲ್ ಸೇರಿದಂತೆ 195 ಟೇಬಲ್‌ಗಳಲ್ಲಿ ಮತ ಎಣಿಕಾ ಕಾರ್ಯವನ್ನು ನಡೆಸಲಾಗುವುದು. ಇದಕ್ಕಾಗಿ ಒಟ್ಟು 651 ಅಧಿಕಾರಿ/ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸಲಾಗಿದ್ದು, ಎಣಿಕಾ ಕಾರ್ಯಕ್ಕೆ ನಿಯೋಜಿಸಿದವರಿಗೆ ಈಗಾಗಲೇ ತರಬೇತಿ ನೀಡಲಾಗಿದೆ.
ಬಿಗಿ ಭದ್ರತೆಯಲ್ಲಿ ಮತ ಎಣಿಕೆ :-
ಸುಗಮವಾಗಿ ಮತ ಎಣಿಕೆ ನಡೆಸುವ ನಿಟ್ಟಿನಲ್ಲಿ ಮತ ಎಣಿಕಾ ಕೇಂದ್ರಕ್ಕೆ ಬಿಗಿ ಭದ್ರತೆಯನ್ನು ಒದಗಿಸಲು 5 ಮಂದಿ ಡಿವೈ.ಎಸ್‌ಪಿ, 17 ಮಂದಿ ಪೊಲೀಸ್ ಇನ್ಸ್ಪೆಕ್ಟರ್, 33 ಮಂದಿ ಸಬ್ ಇನ್ಸ್ಪೆಕ್ಟರ್, 55 ಮಂದಿ ಸಹಾಯಕ ಸಬ್‌ಇನ್ಸ್ಪೆಕ್ಟರ್, 285 ಮಂದಿ ಪೊಲೀಸ್ ಸಿಬ್ಬಂದಿ, 18 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಶಸ್ತç ಸಜ್ಜಿತ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಅಧಿಕೃತ ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಪ್ರವೇಶ :-
ಮತ ಎಣಿಕಾ ಕಾರ್ಯಕ್ಕೆ ಉಮೇದುವಾರರು ತಮ್ಮ ಎಣಿಕಾ ಏಜೆಂಟರುಗಳನ್ನು ನೇಮಕ ಮಾಡಲು ಅವಕಾಶವಿದ್ದು, ನೇಮಕ ಮಾಡುವ ಅಧಿಕೃತ ಏಜೆಂಟರುಗಳು ಕಡ್ಡಾಯವಾಗಿ ಸಂಬಂಧಿಸಿದ ಚುನಾವಣಾಧಿಕಾರಿಗಳಿಂದ ಗುರುತಿನ ಚೀಟಿ ಪಡೆದುಕೊಳ್ಳತಕ್ಕದ್ದು. ಮತ ಎಣಿಕಾ ಕೇಂದ್ರಗಳಿಗೆ ಅಧಿಕೃತ ಗುರುತಿನ ಚೀಟಿ ಹೊಂದಿರುವ ಮತ ಎಣಿಕೆ ಸಿಬ್ಬಂದಿ, ಉಮೇದುವಾರರ ಚುನಾವಣಾ ಏಜೆಂಟ್ ಹಾಗೂ ಮತ ಎಣಿಕಾ ಏಜೆಂಟರುಗಳನ್ನು ಹೊರತುಪಡಿಸಿ ಅನ್ಯರಿಗೆ ಪ್ರವೇಶವಿರುವುದಿಲ್ಲ. ಎಣಿಕಾ ಕೇಂದ್ರದೊಳಗೆ ಮೊಬೈಲ್, ಆಯುಧ, ಬೆಂಕಿಪೊಟ್ಟಣ, ಸಿಗರೇಟು, ಬೀಡಾ ಹಾಗೂ ಎಲೆಕ್ಟಾçನಿಕ್ ಉಪಕರಣಗಳನ್ನು ಒಯ್ಯಲು ಅವಕಾಶವಿಲ್ಲ.
ಮತ ಎಣಿಕೆ ಕಾರ್ಯವನ್ನು ವೀಕ್ಷಿಸಲು ವೀಕ್ಷಕರ ನೇಮಕ :-
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವನ್ನು ವೀಕ್ಷಿಸಲು ವಿಧಾನಸಭಾ ಕ್ಷೇತ್ರವಾರು ತಲಾ ಒಬ್ಬರಂತೆ 11 ವೀಕ್ಷಕರನ್ನು ನೇಮಿಸಲಾಗಿದ್ದು, ಅವರ ವೀಕ್ಷಣೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಡಾ: ಸಿ.ಎನ್. ಮಹೇಶ್ವರನ್(ಮೊ.ಸಂ: 7373003211), ತಿಪಟೂರು-ದಯಾನಂದ್ ಪ್ರಸಾದ್(9711825726), ತುರುವೇಕೆರೆ- ಕುಮಾರ್ ಪ್ರಶಾಂತ್ (9454501790), ಕುಣಿಗಲ್-ವೀರೇಂದರ್ ಸಿಂಗ್ ಸೆಹ್ರಾವತ್(9050006227), ತುಮಕೂರು ನಗರ-ಪಂಕಜ್ ಕುಮಾರ್(9136330551), ತುಮಕೂರು ಗ್ರಾಮಾಂತರ- ಕುಮಾರ್ ರಾಜೀವ್ ರಂಜನ್(9419080222), ಕೊರಟಗೆರೆ- ಜಿ.ಮಹೇಶ್ವರರಾವ್(9440214412), ಗುಬ್ಬಿ-ಸಂಜೀವ್ ಸಿಂಗ್(7376787656), ಶಿರಾ-ನೈಕ್ಯಗೋಹೇನ್(7300286047), ಪಾವಗಡ-ಮಾಧವ್ ನಾಮ್‌ದಿಯೋಕುಸೇಕರ್(9833796292), ಮಧುಗಿರಿ ಕ್ಷೇತ್ರಕ್ಕೆ ಭರತ್ ಬಸ್ತೇವಾಡ್(9082670035) ಅವರನ್ನು ನೇಮಿಸಲಾಗಿದೆ.
1 ಗಂಟೆ ಮೊದಲು ಹಾಜರಿರತಕ್ಕದ್ದು :-
ಮತ ಎಣಿಕಾ ಕಾರ್ಯವು ಮೇ 13ರ ಬೆಳಿಗ್ಗೆ ಪ್ರಾರಂಭವಾಗಲಿದ್ದು, ಉಮೇದುವಾರರು ಮತ್ತು ಮತ ಎಣಿಕಾ ಏಜೆಂಟರುಗಳು ಮತ ಎಣಿಕಾ ಕಾರ್ಯ ಪ್ರಾರಂಭವಾಗುವ ಕನಿಷ್ಟ 1 ಗಂಟೆ ಮೊದಲು ಎಣಿಕಾ ಕೇಂದ್ರದಲ್ಲಿ ಹಾಜರಿರಬೇಕು.
ನಿಷೇಧಾಜ್ಞೆ ಜಾರಿ :-
ಮತ ಎಣಿಕಾ ಕಾರ್ಯವನ್ನು ಶಾಂತಿ ಸುವ್ಯವಸ್ಥೆಯಿಂದ ನಡೆಸುವ ಹಿನ್ನೆಲೆಯಲ್ಲಿ ಎಣಿಕಾ ಕೇಂದ್ರದ ಸುತ್ತಮುತ್ತ ಮೇ 12ರ ಮಧ್ಯರಾತ್ರಿ 12 ಗಂಟೆಯಿAದ ಮೇ 13ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಈ ಅವಧಿಯಲ್ಲಿ ಮದ್ಯ ಮಾರಾಟವನ್ನು ಸಹ ನಿಷೇಧಿಸಲಾಗಿದೆ.
ಮೊದಲು ಅಂಚೆ ಮತ ಪತ್ರಗಳ ಎಣಿಕೆ :-
ಭಾರತ ಚುನಾವಣಾ ಆಯೋಗದ ನಿಯಮದಂತೆ ಅಂಚೆ ಮತಪತ್ರಗಳ ಎಣಿಕೆಯನ್ನು ಮೊದಲು ಪ್ರಾರಂಭಿಸಿ ನಂತರ ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕೆಯನ್ನು ನಡೆಸಲಾಗುವುದು. ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಮತ ಎಣಿಕೆ ನಡೆಸುವ ದೃಷ್ಟಿಯಿಂದ ಎಣಿಕೆ ಕೇಂದ್ರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕೇಂದ್ರೀಯ ರಕ್ಷಣಾ ಪಡೆ ಹಾಗೂ ರಾಜ್ಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.