ತುಮಕೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿಯ ಜೊತೆ ಹೊಂದಾಣಿಕೆ ಮಾತು ಸತ್ಯಕ್ಕೆ ದೂರವಾಗಿದೆ : ಸ್ವತಂತ್ರ ಅಭ್ಯರ್ಥಿ ಎಸ್.ಟಿ. ಗೋವಿಂದಯ್ಯ
ತುಮಕೂರು : ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸ್ವಾಭಿಮಾನಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನ್ನ ವಿರುದ್ಧ ಕೆಲವರು ಬಿಜೆಪಿ ಅಭ್ಯರ್ಥಿಯ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇನೆ ಎಂಬ ಅಪಪ್ರಚಾರ ಮಾಡುತ್ತಿದ್ದು,ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಹೆಚ್.ಟಿ. ಗೋವಿಂದಯ್ಯ ತಿಳಿಸಿದರು.
ಗ್ರಾಮಾಂತರ ಕ್ಷೇತ್ರದ ಮಗನಾಗಿ,ಕ್ಷೇತ್ರದ ಘನತೆ,ಗೌರವವನ್ನು ಉಳಿಸುವ ಸಲುವಾಗಿ ಸ್ವಾಭಿಮಾನಿ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದೇನೆ.ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ.ಹಾಲಿ ಮತ್ತು ಮಾಜಿ ಶಾಸಕರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಕ್ಷೇತ್ರದ ಬಗ್ಗೆ ಇರುವ ದಿವ್ಯ ನಿರ್ಲಕ್ಷವನ್ನು ಖಂಡಿಸಿ, ಹಣ, ಹೆಂಡ, ತೊಳ್ಬಲಗಳಿದ್ದರೆ ಚುನಾವಣೆ ಎಂಬಂತಹ ವಾತಾವರಣವನ್ನು ತೆಗೆದು ಹಾಕಿ,ಸಾಮಾನ್ಯ ವ್ಯಕ್ತಿಯೂ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆಲ್ಲಬಹುದು ಎಂಬುದನ್ನು ಕ್ಷೇತ್ರದ ಜನತೆಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ವಾಭಿಮಾನಿ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದೇನೆ.ನನ್ನನ್ನು ಕ್ಷೇತ್ರದ ಜನತೆ ಭವಿಷ್ಯದ ಹಿತದೃಷ್ಟಿಯಿಂದ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಈ ಬಾರಿ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿ.ಜೆ.ಪಿ.,ಜೆಡಿಎಸ್,ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸ್ವಕ್ಷೇತ್ರದವರಲ್ಲ. ಗ್ರಾಮಾಂತರ ಕ್ಷೇತ್ರ ಒಂದು ರೀತಿಯಲ್ಲಿ ಹೊರಗಿನವರ ವಸಾಹತುದಾರರ ತಾಣವಾಗಿದೆ.ಹಾಗಾಗಿಯೇ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕ್ಷೇತ್ರದ ಮನೆ ಮಗನಾಗಿ,ಹೆಬ್ಬೂರು ಗ್ರಾ.ಪ.ಮಾಜಿ ಅಧ್ಯಕ್ಷನಾಗಿ,ಎಪಿಎಂಸಿ ಮಾಜಿ ನಿರ್ದೇಶಕನಾಗಿ ರಾಜಕೀಯ ಅನುಭವ ಹೊಂದಿರುವ ನನಗೆ ಕ್ಷೇತ್ರದ ಜನತೆ ಬೆಂಬಲಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.
ಮಾಜಿ ಶಾಸಕ ಹೆಚ್.ನಿಂಗಪ್ಪ ಅವರ ಪರಿಶ್ರಮದ ಫಲವಾಗಿ ಜಾರಿಗೆ ಬಂದ ಹೆಬ್ಬೂರು ಗೂಳೂರು ಏತ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಮಾಜಿ ಶಾಸಕ ಮತ್ತು ಹಾಲಿ ಶಾಸಕರ ಇಬ್ಬರ ವೈಫಲ್ಯವೂ ಕಾಣುತ್ತಿದೆ. ಹೆಸರಿಗೆ ಮಾತ್ರ ಏತ ನೀರಾವರಿ ಯೋಜನೆ ಎನ್ನುವಂತಾಗಿದೆ. ಹೆಬ್ಬೂರು ಕೆರೆ ಸೇರಿದಂತೆ ಯೋಜನೆಯ ವ್ಯಾಪ್ತಿಗೆ ಬರುವ ಒಂದು ಕೆರೆಯೂ ಸಂಪೂರ್ಣವಾಗಿ ಹೇಮಾವತಿ ನೀರಿನಿಂದ ತುಂಬಿದ ಉದಾಹರಣೆಯಿಲ್ಲ.ಮಳೆ ನೀರಿನಿಂದ ತುಂಬಿದ್ದನ್ನೇ ತಮ್ಮ ಸಾಧನೆ ಎಂದು ಬಿಂಬಿಸಲು ಹೊರಟಿದ್ದಾರೆ.ಹಾಲಿ ಶಾಸಕರು ಕೂಡ ಈ ಬಗ್ಗೆ ನಿರ್ಲಕ್ಷವಹಿಸಿದ ಕಾರಣ ಯೋಜನೆ ಉಪಯೋಗಕ್ಕೆ ಬಾರದಂತಾಗಿದೆ ಎಂದು ಹೇಳಿದರು.
ಕ್ಷೇತ್ರಕ್ಕೆ ಹೇಮಾವತಿ,ಇಲ್ಲವೇ ಎತ್ತಿನ ಹೊಳೆಯಂತಹ ಯೋಜನೆಗಳ ಅಗತ್ಯವಿದೆ. ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಬಹಿರಂಗ ಗುದ್ದಾಟದಿಂದ ಕ್ಷೇತ್ರ ರಣರಂಗವಾಗಿ ಮಾರ್ಪಾಟಾಗಿದೆ.ಇನ್ನಿಲ್ಲದ ಭರವಸೆಗಳ ಮೂಲಕ ಮತದಾರರಿಗೆ ತುಟಿಗೆ ತುಪ್ಪ ಸವರುವ ಕೆಲಸ ಮಾಡುತಿದ್ದಾರೆ. ಹಾಗಾಗಿ ಕ್ಷೇತ್ರದ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೇನೆ.ಕ್ಷೇತ್ರದ ಜನತೆ ನನ್ನನ್ನು ಬೆಂಬಲಿಸಿ, ಆಶೀರ್ವದಿಸಬೇಕೆಂದು ಸ್ವಾಭಿಮಾನಿ ಅಭ್ಯರ್ಥಿ ಎಸ್.ಟಿ. ಗೋವಿಂದಯ್ಯ ಮತದಾರರಲ್ಲಿ ಮನವಿ ಮಾಡಿದ್ದಾರೆ.