ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಗೆಲುವಿಗೆ ನಗರ ವೀರಶೈವ ಸಮಾಜ ಸಂಪೂರ್ಣ ಬೆಂಬಲ ಘೋಷಣೆ : ಭಾವುಕರಾದ ಸ್ವಾಭಿಮಾನಿ ಶಿವಣ್ಣ
ತುಮಕೂರು : ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವರೂ ಆದ ಎಸ್.ಶಿವಣ್ಣ ಅವರಿಗೆ ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿರುವಂತೆಯೇ ವೀರಶೈವ ಲಿಂಗಾಯಿತ ಸಮುದಾಯವೂ ಸಹ ಶಿವಣ್ಣ ಅವರ ಬೆಂಬಲಕ್ಕೆ ನಿಂತಿದ್ದು ಸಾಕ್ಷಿಯಾಯಿತು.
ನಗರದ ಶಿರಾ ರಸ್ತೆಯಲ್ಲಿರುವ ಸ್ನೇಹ ಸಂಗಮ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಶನಿವಾರ ನಗರ ವೀರಶೈವ ಸಮಾಜದ ಎಲ್ಲಾ ಮುಖಂಡರು ಹಾಗೂ ಹಿತೈಷಿಗಳು ಸಭೆ ಸೇರಿ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿ, ಒಗ್ಗಟ್ಟಿನಿಂದ ಶಿವಣ್ಣ ಅವರ ಗೆಲುವಿಗೆ ಶ್ರಮಿಸಲು ತೀರ್ಮಾನಿಸಿದರು.
ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಸಾವಿರಾರು ವೀರಶೈವ ಸಮಾಜದ ಮುಖಂಡರನ್ನುದ್ದೇಶಿಸಿ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ, ಇದು ನನ್ನ ಜೀವಮಾನದ ಕೊನೆಯ ಚುನಾವಣೆ, ಸ್ವಾಭಿಮಾನದ ಸಂಕೇತವಾಗಿ ಈ ಭಾರಿಯ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸಿದ್ದು, ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲರೂ ಅತ್ಯಂತ ವ್ಯಾಪಕವಾಗಿ ಬೆಂಬಲಿಸುತ್ತಿರುವುದು ನನಗೆ ಸಂತಸ ತಂದಿದೆ. ಜೊತೆಗೆ ನಮ್ಮ ವೀರಶೈವ ಲಿಂಗಾಯಿತ ಸಮಾಜ ನನ್ನ ಬೆನ್ನಿಗೆ ನಿಂತು ಗೆಲುವಿಗೆ ಸಹಕರಿಸುತ್ತಿರುವುದು ನನಗೆ ತುಂಬಾ ಸಂತೋಷಕರವಾಗಿದೆ ಎಂದು ಭಾವುಕರಾಗಿ ನುಡಿದರು.
ನನಗೆ ಜಾತಿ, ಬೇಧ ಭಾವವಿಲ್ಲ, ಎಲ್ಲಾ ಸಮಾಜದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ ಅವರ ಕಷ್ಟಸುಖಗಳಿಗೆ ಸ್ಪಂಧಿಸಿ ಕೆಲಸ ಮಾಡಿರುವ ನನಗೆ ಈ ಭಾರಿ ಪ್ರತಿಯೊಂದು ಸಮಾಜವೂ ಸಹ ನನ್ನ ಹಿಂದೆ ಕೆಲಸ ಮಾಡಿ ನನ್ನ ಗೆಲುವಿಗೆ ಸಹಕರಿಸುತ್ತಿದ್ದಾರೆ. ಅವರಿಗೆ ಆಭಾರಿಯಾಗಿರುತ್ತೇನೆ. ತುಮಕೂರಿನ ಸರ್ವತೋಮುಖ ಅಭಿವೃದ್ಧಿಗೆ ಪಕ್ಷೇತರ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಮಾತನಾಡಿದ ವೀರಶೈವ ಸಮಾಜ ಸೇವಾ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿ ಟಿ.ಎಸ್.ಶಿವಪ್ರಕಾಶ್ ಮಾತನಾಡಿ, ಸೊಗಡು ಶಿವಣ್ಣ ಅವರು ನಿರ್ಧಿಷ್ಟ ಸಮಾಜಕ್ಕಷ್ಟೇ ಅಲ್ಲ, ಸರ್ವಜನಾಂಗದ ನಾಯಕರು ಎಲ್ಲಾ ಸಮಾಜಕ್ಕೂ ನಿಷ್ಕಲ್ಮಶವಾಗಿ ಸೇವೆ ಸಲ್ಲಿಸುತ್ತಿರುವವರು. ಈ ಚುನಾವಣೆಯಲ್ಲಿ ಅವರನ್ನು ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಇದು ಶಿವಣ್ಣ ಅವರ ಕೊನೆಯ ಚುನಾವಣೆಯಾದ್ದರಿಂದ ವೀರಶೈವ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಅವರನ್ನು ಗೆಲ್ಲಿಸಿಕೊಳ್ಳಬೇಕೆಂದು ಸಭೆಯಲ್ಲಿ ತೀರ್ಮಾನಿಸಿದರು.
ಸೊಗಡು ಶಿವಣ್ಣ ಅವರ ಅಭಿವೃದ್ಧಿ ಕಾಮಗಾರಿಗಳು ಅಪಾರ, ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ನಗರದ ಯುವಕರು ಪ್ರತಿ ಬೂತ್ ಮಟ್ಟದಲ್ಲಿ ಶಿವಣ್ಣ ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸಿಕೊಂಡು ಬರಬೇಕೆಂದು ಕರೆ ನೀಡಿದರು.
ವೀರಶೈವ ಸಮಾಜದ ಮತ್ತೋರ್ವ ಮುಖಂಡರಾದ ಆಶಾ ಪ್ರಸನ್ನ ಕುಮಾರ್ ಮಾತನಾಡಿ, ವೀರಶೈವ ಸಮುದಾಯಕ್ಕೆ ಒಗ್ಗಟ್ಟಿನ ಕೊರತೆ ಇದೆ, ಭ್ರಷ್ಟರಲ್ಲಿ ನಡುಕ ಹುಟ್ಟಿಸಿ ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಬೆಂಬಲಕ್ಕೆ ವೀರಶೈವ ಸಮಾಜ ಮುಕ್ತವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಸಮಾಜದ ಹಲವಾರು ಮುಖಂಡರು ಹಾಗೂ ಹಿತೈಶಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಶಿವಣ್ಣ ಅವರ ಗೆಲ್ಲಿಸಿಕೊಂಡು ಬರಲು ಒಕ್ಕೊರಲ ತೀರ್ಮಾನ ತೆಗೆದುಕೊಂಡರು. ಸಭೆಯಲ್ಲಿ ಮುಖಂಡರಾದ ಕೆ.ಜೆ. ರುದ್ರಪ್ಪ, ಮೋಹನ್ ಕುಮಾರ್ ಪಟೇಲ್, ಬಿ.ಎಸ್.ಮಂಜುನಾಥ್, ಸುಜಾತ ಚಂದ್ರಶೇಖರ್, ಹೆಬ್ಬಾಕ ಮಲ್ಲಿಕಾರ್ಜುನ್, ಶೀಲ ಸೋಮಶೇಖರ್, ಜೆ.ಕೆ.ಅನಿಲ್ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ವೀರಶೈವ ಲಿಂಗಾಯಿತ ಸಮಾಜದ ಮುಖಂಡರು ಹಾಗೂ ಶಿವಣ್ಣ ಅವರ ಹಿತೈಶಿಗಳು ಭಾಗವಹಿಸಿದ್ದರು.