ಜಿಲ್ಲೆತುಮಕೂರುರಾಜ್ಯ

ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾದ ಚುನಾವಣೆ ನಡೆಸಲು ಸಾರ್ವಜನಿಕರು ಹಾಗೂ ಮಾಧ್ಯಮಗಳ ಸಹಕಾರ ಅತ್ಯಗತ್ಯ :‌ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್

ತುಮಕೂರು ಜಿಲ್ಲಾ ಪತ್ರಕರ್ತರಿಗೆ ಚುನಾವಣಾ ಅರಿವು ಕಾರ್ಯಾಗಾರ

ತುಮಕೂರು : ಪ್ರಜಾಪ್ರಭುತ್ವದ ಆಶಯ ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾದ ಚುನಾವಣೆ ನಡೆಸುವುದು ಆಗಿರುತ್ತದೆ. ಇದಕ್ಕೆ ಸಾರ್ವಜನಿಕರು ಹಾಗೂ ಮಾಧ್ಯಮಗಳ ಸಹಕಾರ ಅತ್ಯಗತ್ಯ ಎಂದು ಎಂಸಿಎಂಸಿ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆ ಸದಾಚಾರ ಸಂಹಿತೆ ಮಾಧ್ಯಮಗಳಿಗೂ ಸಹ ಅನ್ವಯಿಸಲಿದ್ದು, ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು, ರೇಡಿಯೋ ಸೇರಿದಂತೆ ಮಾಧ್ಯಮಗಳು ಪ್ರಕಟಿಸುವ ಎಲ್ಲಾ ರೀತಿಯ ವರದಿಗಳ ಮೇಲೆ ಮಾಧ್ಯಮ ಪ್ರಾಮಾಣೀಕರಣ ಮತ್ತು ನಿಗಾ ಸಮಿತಿ (ಎಂಸಿಎಂಸಿ) ನಿಗಾ ವಹಿಸಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಸ್ವೀಪ್ ಸಮಿತಿ, ವಾರ್ತಾ ಇಲಾಖೆ, ಕೆಯುಡಬ್ಲೂö್ಯಜೆ ಸಹಯೋಗದಲ್ಲಿಂದು ಏರ್ಪಡಿಸಲಾಗಿದ್ದ “ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಚುನಾವಣಾ ಅರಿವು ಕಾರ್ಯಾಗಾರ”ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ, ಒಂದೇ ಹಂತದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಭಾರತದಂತಹ ದೊಡ್ಡ ದೇಶದಲ್ಲಿ ಚುನಾವಣೆ ನಡೆಯುತ್ತದೆ ಎಂದರೆ ಅದಕ್ಕೆ ಸಾರ್ವಜನಿಕರ ಹಾಗೂ ಮಾಧ್ಯಮಗಳ ಸಹಕಾರವೇ ಕಾರಣ ಎಂದು ಶ್ಲಾಘಿಸಿದರು.
ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಂಸಿಎಂಸಿ ತಂಡ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಯಾವುದೇ ರಾಜಕೀಯ ಪಕ್ಷದವರು ಜಾಹೀರಾತು ನೀಡಬೇಕಾದಲ್ಲಿ ಮೊದಲಿಗೆ ಈ ಸಮಿತಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ಅಭ್ಯರ್ಥಿಯ ಅನುಮೋದನೆಯೊಂದಿಗೆ ಪ್ರಕಟವಾಗುವ ಜಾಹೀರಾತಿನ ಮೊತ್ತವನ್ನು ಸದರಿ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು. ಅಂತೆಯೇ ಪೇಯ್ಡ್ ನ್ಯೂಸ್‌ಗೆ ಆಸ್ಪದ ನೀಡದಂತೆ ಮಾಧ್ಯಮಗಳು ಸಂಯಮ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನಗಳ ಕುರಿತು ಬಹುತೇಕ ಎಲ್ಲರಿಗೂ ಮಾಹಿತಿ ಇರುತ್ತದೆ. ಈ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಜ್ಞಾನದ ವಿನಿಯಮ ಎಂದಷ್ಟೇ ಹೇಳಬಹುದು. ಭಾರತದಂತಹ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಸುವ್ಯವಸ್ಥಿತವಾಗಿ ಚುನಾವಣೆ ನಡೆಯುತ್ತಿರುವುದು ಜಗತ್ತಿನ ಒಂದು ವಿಸ್ಮಯವೇ ಸರಿ ಎಂದರು.
ತುಮಕೂರು ಜಿಲ್ಲೆಯಲ್ಲಿ ಸರಿ ಸುಮಾರು 22ಲಕ್ಷ ಮತದಾರರಿದ್ದು, 6ಸಾವಿರ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಶೇ. 100ರಷ್ಟು ಮತದಾನ ಆಗುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವ ಮಹತ್ತರ ಹೊಣೆಗಾರಿಕೆ ಮಾಧ್ಯಮದವರ ಮೇಲಿದೆ ಎಂದರು.
ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ: ಕೆ. ವಿದ್ಯಾಕುಮಾರಿ ಮಾತನಾಡಿ, ಮತದಾನ ಪ್ರಮಾಣವನ್ನು ಹೆಚ್ಚಿಸಬೇಕು, ನೈತಿಕ ಮತದಾನಕ್ಕೆ ಒತ್ತು ನೀಡಬೇಕು ಹಾಗೂ ಇವಿಎಂ, ವಿವಿಪ್ಯಾಟ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಸ್ವೀಪ್ ಸಮಿತಿಯ ಪ್ರಮುಖ ಕಾರ್ಯವಾಗಿರುತ್ತದೆ ಎಂದರು.
ಸಾರ್ವಜನಿಕರಿಗೆ ಮತದಾನದ ಮಹತ್ವದ ಕುರಿತು ಜಿಲ್ಲೆಯಲ್ಲಿ ವ್ಯಾಪಕ ಅರಿವು ಮೂಡಿಸಲಾಗಿದೆ ಎಂದ ಅವರು, ಸಂವಿಧಾನದ 4ನೇ ಅಂಗವಾದ ಮಾಧ್ಯಮಗಳು ಎಂದಿನಂತೆ ಚುನಾವಣಾ ಸಂದರ್ಭದಲ್ಲಿಯೂ ಮುಖ್ಯ ಪಾತ್ರ ವಹಿಸುತ್ತವೆ ಎಂದರು.
ತುಮಕೂರು ಪಾಲಿಕೆ ಆಯುಕ್ತ ದರ್ಶನ್ ಅವರು ಮಾತನಾಡಿ, ಪ್ರಜಾಪ್ರಭುತ್ವದ 4ನೇ ಸ್ತಂಭವಾದ ಮಾಧ್ಯಮದ ಅವಶ್ಯಕತೆ ಜಿಲ್ಲಾಡಳಿತಕ್ಕೆ ಚುನಾವಣಾ ಸಂದರ್ಭ ಹೆಚ್ಚಿರುತ್ತದೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳೂ ಸಹ ಚುನಾವಣೆಗೆ ಸಂಬಂಧಿಸಿದಂತೆ ಸಲಹೆ, ಸೂಚನೆ ನೀಡುವುದನ್ನು ಸ್ವಾಗತಿಸಲಾಗುವುದು ಎಂದ ಅವರು, ಸಿ-ವಿಜಿಲ್ ಹಾಗೂ ಇತರೆ ಆಪ್‌ಗಳ ಮೂಲಕ ಬರುವಂತಹ ದೂರು ಹಾಗೂ ಕೈಗೊಂಡ ಕ್ರಮಗಳ ಕುರಿತು ವ್ಯಾಪಕ ಪ್ರಚಾರ ಆಗಬೇಕು ಎಂದರು.
ಕೆಯುಡಬ್ಲೂö್ಯಜೆ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಚಿ.ನಿ. ಪುರುಷೋತ್ತಮ್ ಅವರು ಮಾತನಾಡಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಂದರ್ಭ ಸುದ್ದಿ, ಜಾಹೀರಾತು, ಪೇಯ್ಡ್ ನ್ಯೂಸ್ ಕುರಿತಂತೆ ಮಾಹಿತಿ ಪತ್ರಕರ್ತರಿಗೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂದು ಏರ್ಪಡಿಸಲಾಗಿರುವ ಈ ಕಾರ್ಯಾಗಾರ ಪತ್ರಕರ್ತರಿಗೆ ಬಹು ಉಪಯೋಗಿ ಎಂದರು.
ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗ ಪ್ರಮುಖ ಅಂಗವಾಗಿರುತ್ತದೆ. ಈ 4ನೇ ಅಂಗವಾದ ಪತ್ರಕರ್ತರಿಗೆ ಅಂಚೆ ಮತದಾನ ಸೌಲಭ್ಯವನ್ನು ಭಾರತ ಚುನಾವಣಾ ಆಯೋಗ ಒದಗಿಸಿರುವುದು ಸ್ವಾಗತಾರ್ಹ ಎಂದರು.
ಇದೇ ಸಂದರ್ಭ ಚುನಾವಣಾ ರಾಜ್ಯ ಸಂಪನ್ಮೂಲ ವ್ಯಕ್ತಿ ರಿಸ್ವಾನ್ ಭಾಷ ಅವರು ಪತ್ರಕರ್ತರಿಗೆ ಎಸ್‌ಎಸ್‌ಟಿ, ಎಫ್‌ಎಸ್‌ಟಿ, ವಿಎಸ್‌ಟಿ, ವಿವಿಟಿ ತಂಡಗಳ ಬಗ್ಗೆ ಸುಧೀರ್ಘ ಮಾಹಿತಿ ನೀಡಿ ಪೇಯ್ಡ್ ನ್ಯೂಸ್, ಜಾಹೀರಾತು, ಎಂಸಿಎಂಸಿ ತಂಡದ ಕುರಿತು ವಿವರವಾದ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಸ್ವೀಪ್ ನೋಡಲ್ ಅಧಿಕಾರಿ ಶ್ರೀನಿವಾಸ್, ಚುನಾವಣಾ ರಾಯಭಾರಿ ಡಾ: ಲಕ್ಷö್ಮಣ್‌ದಾಸ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಮ್‌,ಉಪಾದ್ಯಕ್ಷ ಎಲ್‌ .ಚಿಕ್ಕೀರಪ್ಪ, ಕಾರ್ಯದರ್ಶಿ ಸತೀಶ್‌,ನಿರ್ದೇಶಕರಾದ ಹೆಚ್.ಎಸ್.ಪರಮೇಶ್‌, ಸಿ.ಜಯಣ್ಣ ಇತರೆ ಅಧಿಕಾರಿಗಳು ಮತ್ತು ಸಂಘಧ ಪದಾಧಿಕಾರಿಗಳು,ನಿರ್ದೇಶಕರು, ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಪತ್ರಕರ್ತರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker