ಗುಬ್ಬಿ : ಬಿಜೆಪಿ ಸಂಘಟನೆಗೆ ಒತ್ತು ನೀಡಿ ಹಲವು ವರ್ಷದಿಂದ ಪಕ್ಷ ಬಲವರ್ಧನೆಗೆ ಶ್ರಮಿಸಿದ ನನಗೆ ಗುಬ್ಬಿ ಕ್ಷೇತ್ರದಿಂದ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿದೆ. ಈ ಮಧ್ಯೆ ವರಿಷ್ಠರು ಅಳೆದು ತೂಗಿ ಯಾರಿಗೆ ಆಯ್ಕೆ ಮಾಡಿದರೂ ಬಿಜೆಪಿ ಗೆಲುವಿಗೆ ಒಗ್ಗಟ್ಟಿನಲ್ಲಿ ಶ್ರಮಿಸುವುದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಜಿ.ಎನ್.ಬೆಟ್ಟಸ್ವಾಮಿ ತಿಳಿಸಿದರು.
ಗುಬ್ಬಿ ಪಟ್ಟಣದಲ್ಲಿ ಪತ್ರಿಕೆ ಜೊತೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಗುಬ್ಬಿ ಅಭ್ಯರ್ಥಿ ಆಯ್ಕೆ ವರಿಷ್ಠರು ನಡೆಸುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಹರಡಿದ ವದಂತಿ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲಬೇಡ. ಅಂತಿಮ ನಿರ್ಣಯ ಮಾಡಿದ ಬಳಿಕ ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಬಂಡಾಯ ಎಂಬ ಮಾತಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಹಿರಿಯ ಮುಖಂಡರಾದ ಸಂಸದ ಜಿ.ಎಸ್.ಬಸವರಾಜು, ಸಚಿವ ಮಾಧುಸ್ವಾಮಿ ಇವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮತಗಳು ಇಂದಿಗೂ ಬಿಜೆಪಿ ಪರ ಹಾಗೆಯೇ ಇವೆ. ಆಕಾಂಕ್ಷಿಯಾದ ನನಗೆ ಟಿಕೆಟ್ ಸಿಗುವ ವಿಚಾರದಲ್ಲಿ ಆಶಾದಾಯಕವಾಗಿದ್ದು, ಸರ್ವೆ ಮಾಡಿರುವ ಪಕ್ಷ ಯಾರಿಗೆ ಘೋಷಣೆ ಮಾಡಿದರೂ ನನ್ನ ಸಂಘಟನೆ ಕೆಲಸ ಮುಂದುವರೆಯಲಿದೆ. ಬಂಡಾಯದ ಮಾತು ನನ್ನಲಿಲ್ಲ. ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ವದಂತಿ ಮೂಲಕ ನಡೆದಿರುವ ಗೊಂದಲದ ಮಾತಿಗೆ ಕಿವಿಗೊಡದೆ ಕಾರ್ಯಕರ್ತರು ಪ್ರಚಾರ ಕಾರ್ಯ ಮುಂದುವರಸಲಿ ಎಂದರು.
ಪಕ್ಷದ ನಿರ್ಧಾರಕ್ಕೆ ನಾವು ಬದ್ದವಾಗಿರುತ್ತೇನೆ. ಈಗಾಗಲೇ 189 ಮಂದಿ ಅರ್ಹ ಅಭ್ಯರ್ಥಿ ಆಯ್ಕೆ ಮಾಡಿದಂತೆ ಜಿಲ್ಲೆಯಲ್ಲಿ ಕೂಡಾ ಸಂಘಟನಾತ್ಮಕ ನಿಲುವು ತಾಳಿದ ಮುಖಂಡರು ಗುಬ್ಬಿ ಕ್ಷೇತ್ರಕ್ಕೂ ಉತ್ತಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.