ತುಮಕೂರು : ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆಯನ್ವಯ ಯಾವುದೇ ಜಾತಿ,ಧರ್ಮ,ಸಮುದಾಯಗಳ ಹೆಸರಿನಲ್ಲಿ ಸಮಾವೇಶ, ಸಮಾರಂಭ ಏರ್ಪಡಿಸಲು ಯಾವುದೇ ಪಕ್ಷ,ಅಭ್ಯರ್ಥಿಗಳಿಗೆ ಅನುಮತಿ ನೀಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಪಕ್ಷದ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಲಾಗುವುದು. ಜಾತ್ರೆ/ ಉತ್ಸವ/ ಇಫ್ತಿಯಾರ್ ಕೂಟ ನಡೆಯುವ ಸಂದರ್ಭದಲ್ಲಿ ಅನುಮತಿ ನೀಡುವಾಗ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಯಮಗಳನ್ನು ಪಾಲಿಸುವ ಬಗ್ಗೆ ಷರತ್ತುಗಳನ್ನು ವಿಧಿಸಲಾಗುವುದು. ಧಾರ್ಮಿಕ ಕಾರ್ಯಗಳಿಗೆ ಸಂಬಂಧಿಸಿದಂತೆ ದೇವಾಲಯ/ ಮಸೀದಿ/ ಚರ್ಚ್ಗಳಲ್ಲಿ ನಿತ್ಯ ಅನ್ನ ದಾಸೋಹ ನಡೆಯುತ್ತಿದ್ದಲ್ಲಿ ದೇವಾಲಯ/ ಮಸೀದಿ/ ಚರ್ಚ್ನ ಮುಖ್ಯಸ್ಥರು ಅನ್ನ ದಾಸೋಹ ನಡೆಸಲು ಅವಕಾಶವಿದೆ. ಆದರೆ ಸಂಭಾವ್ಯ ಚುನಾವಣಾ ಅಭ್ಯರ್ಥಿಗಳು ಜಾತ್ರೆ ಸಂದರ್ಭದಲ್ಲಿ ಆಮಿಷಗಳಿಗೆ ಒಳಗಾಗುವಂತೆ ಮತದಾರರನ್ನು ಸೆಳೆಯಲು ಅನ್ನದಾಸೋಹ, ಸೀರೆ ಸೇರಿದಂತೆ ಇತರೆ ವಸ್ತುಗಳನ್ನು ಹಂಚುವ ಪ್ರಯತ್ನ ಮಾಡುವಂತಿಲ್ಲ ಎಂದು ತಿಳಿಸಿದರಲ್ಲದೆ ಯಾವುದೇ ರಾಜಕೀಯ ಪಕ್ಷದ ಸಭೆ/ ಸಮಾರಂಭವನ್ನು ಶಾಲಾ ಆವರಣದಲ್ಲಿ ನಡೆಸಲು ಮನವಿ ಬಂದಾಗ ಶಾಲಾ ತರಗತಿ ನಡೆಯದಿರುವ ಸಮಯದಲ್ಲಿ ಆಯೋಜಿಸಲು ಅನುಮತಿ ನೀಡಲಾಗುವುದು. ಆದರೆ ಶಾಲಾ ಕೊಠಡಿಗಳಲ್ಲಿ ಪಕ್ಷದ ಕಾರ್ಯಕರ್ತರ ಸಭೆ/ ಸಮಾರಂಭವನ್ನು ನಡೆಸಲು ಅವಕಾಶವಿಲ್ಲವೆಂದು ತಿಳಿಸಿದರು.