ತುಮಕೂರು : ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಪಂಚಾಯತ್ ಮತ್ತು ಬೂತ್ ಮಟ್ಟದ ಅಧ್ಯಕ್ಷರು,ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಕೆಂಪಣ್ಣ,ಕಳೆದ ಮೂರು ಚುನಾವಣೆಗಳಿಗೆ ಹೊಲಿಕೆ ಮಾಡಿದರೆ ಕಾಂಗ್ರೆಸ್ ಪಕ್ಷ ಕುಸಿಯುತ್ತಿರುವುದು ಸ್ಪಷ್ಟವಾಗಿರುವ ಹಿನ್ನೇಲೆಯಲ್ಲಿ,ಅತಿ ಹೆಚ್ಚು ದಲಿತ,ಹಿಂದುಳಿದ ಮತದಾರರನ್ನು ಹೊಂದಿರುವ ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಈ ಬಾರಿ ಹಿಂದುಳಿದ ವರ್ಗದ ಅಭ್ಯರ್ಥಿಯೊಬ್ಬರನ್ನು ಕಣಕ್ಕೆ ಇಳಿಸುವ ಚಿಂತನೆಯಲ್ಲಿ ಕಾಂಗ್ರೆಸ್ ಪಕ್ಷವಿದ್ದು,ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು,ಮುಖಂಡರ ಸಭೆಯನ್ನು ಆಯೋಜಿಸಿದ್ದು,ಹಿಂದುಳಿದ ವರ್ಗದ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ನಿವೃತ್ತ ಎಇಇ ಜಿ.ಹೆಚ್.ಷಣ್ಮುಖಪ್ಪ, ಸೂರ್ಯಮುಕುಂದರಾಜ್,ಶ್ರೀನಿವಾಸ್,ಆರ್.ನಾರಾಯಣ್,ಹೆಚ್.ನಿಂಗಪ್ಪ, ನರಸಿಂಹರಾಜು ಅವರುಗಳು ಪ್ರಬಲ ಆಕಾಂಕ್ಷಿಗಳಿದ್ದು, ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಜಿ.ಹೆಚ್.ಷಣ್ಮುಖಪ್ಪ ಅವರು ಅಭ್ಯರ್ಥಿಯಾಗುವ ಎಲ್ಲಾ ನಿರೀಕ್ಷೆಗಳಿದ್ದು, ನಾವೆಲ್ಲರೂ ಅವರ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಡಿಸಿಸಿ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ ಮಾತನಾಡಿ, ತುಮಕೂರು ಗ್ರಾಮಾಂತರದಲ್ಲಿ ಎಸ್ಸಿ, ಎಸ್ಟಿ, ಓಬಿಸಿಯ ಸುಮಾರು 1.50ಲಕ್ಷ ಮತದಾರರಿದ್ದಾರೆ.ಇವರುಗಳನ್ನು ಕೇಂದ್ರೀಕರಿಸಿದರೆ ಗೆಲುವು ಸಾಧ್ಯ.ಬಡವರು, ದಲಿತರು, ಹಿಂದುಳಿದ ವರ್ಗದವರಿಗೆ ಅನ್ನ, ಆಶ್ರಯ, ಶಿಕ್ಷಣ ನೀಡಿದಂತಹ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಿದರೆ ಹಾಲಿ ಮತ್ತು ಮಾಜಿ ಶಾಸಕರಿಗೆ ಸಡ್ಡು ಹೊಡೆಯಬಹುದಾಗಿದೆ ಎಂದರು.
ಬಯಲು ಸೀಮೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎ.ದೇವರಾಜು ಮಾತನಾಡಿ,ಗ್ರಾಮಾಂತರದಲ್ಲಿ ಸ್ಥಳೀಯರಿಗೆ ಟಿಕೇಟ್ ನೀಡದ ಪರಿಣಾಮ ಕಾರ್ಯಕರ್ತರ ಸಂಖ್ಯೆ ಕುಸಿಯುತ್ತಿದೆ.ಸಮರ್ಥ ನಾಯಕನ ಅಗತ್ಯವಿದೆ.ಹಾಗಾಗಿ ಕೆ.ಪಿ.ಸಿ.ಸಿ. ಜಿ.ಹೆಚ್.ಷಣ್ಮುಖಪ್ಪ ಅವರಿಗೆ ಟಿಕೇಟ್ ನೀಡಿದರೆ ಪಕ್ಷದಿಂದ ದೂರ ಸರಿದಿರುವ ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲರೂ ಕೆಲಸ ಮಾಡಬೇಕಿದೆ.ಸಂಭಾವ್ಯ ಅಭ್ಯರ್ಥಿಯಾಗಿರುವ ಷಣ್ಮುಖಪ್ಪ ಇಂದಿನಿಂದಲೇ ಕ್ಷೇತ್ರದಲ್ಲಿ ಪ್ರಚಾರ ಅರಂಭಿಸಲಿ,ಇದರ ಜೊತೆಗೆ ಜಿಲ್ಲೆಯ ಎಲ್ಲಾ ನಾಯಕರು ಒಗ್ಗೂಡಿ ಸಮಾವೇಶ ನಡೆಸಿ, ಪಕ್ಷದ ಅಭ್ಯರ್ಥಿಗೆ ಬಲ ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.
ತುಮಕೂರು ಗ್ರಾಮಾಂತರದಲ್ಲಿ ನಾಯಕತ್ವದ ಕೊರತೆ ಇರುವುದು ನಿಜ.ಇಂದಿನ ಸಭೆಯಲ್ಲಿ ಸಹಜವಾಗಿಯೇ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.ಆದರೂ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ.ಅವರ ಕಷ್ಟಗಳಿಗೆ ಪಕ್ಷದ ಮುಖಂಡರು ಸ್ಪಂದಿಸಬೇಕಿದೆ.ಐದು ಜನ ಆಕಾಂಕ್ಷಿಗಳ ನಡುವೆ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಜಿ.ಹೆಚ್.ಷಣ್ಮುಖಪ್ಪ ಅವರಿಗೆ ಟಿಕೇಟ್ ದೊರೆಯುವ ಎಲ್ಲಾ ಸಾಧ್ಯತೆಗಳಿದ್ದು, ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಒಂದು ಗಟ್ಟಿಯಾದ ದ್ವನಿ ಹೊರಬೇಕಾಗಿದೆ. ಈ ನಿಟ್ಟಿನಲ್ಲಿ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ ಎಂದರು.
ನಿವೃತ್ತ ಎಇಇ ಹಾಗೂ ಗ್ರಾಮಾಂತರ ಟಿಕೇಟ್ ಆಕಾಂಕ್ಷಿ ಜಿ.ಹೆಚ್.ಷಣ್ಮುಖಪ್ಪ ಮಾತನಾಡಿ,ಅತ್ಯಂತ ತಳ ಸಮುದಾಯದಿಂದ ಬಂದು ಶಿಕ್ಷಣ ಪಡೆದು ಇಂಜಿನಿಯರ್ ಆಗಿ ಸರಕಾರಿ ಹುದ್ದೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ 32 ವರ್ಷಗಳ ಕಾಲ ಕೆಲಸ ಮಾಡಿ,ನಿವೃತ್ತಿ ನಂತರ ರಾಜಕೀಯ ಪ್ರವೇಶ ಮಾಡಿದ್ದೇನೆ.ಸಾಮಾಜಿಕ ನ್ಯಾಯಕ್ಕೆ ಹೆಸರಾಗಿರುವ ಕಾಂಗ್ರೆಸ್ ಪಕ್ಷ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ನನಗೆ ಟಿಕೇಟ್ ನೀಡಲಿದೆ ಎಂಬ ನಂಬಿಕೆ ನನಗಿದೆ.ಕಾಯಾ,ವಾಚಾ,ಮನಸ್ಸ ಕಾರ್ಯಕರ್ತರ ಜೊತೆಗಿದ್ದು ಕೆಲಸ ಮಾಡುತ್ತೇನೆ.ಕ್ಷೇತ್ರದಲ್ಲಿನ ಹಾಲಿ,ಮಾಜಿಗಳ ದುರಾಡಳಿತಕ್ಕೆ ಬೇಸತ್ತು ಒಳ್ಳೆಯ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಅಲ್ಲದೆ ಇಬ್ಬರು ಅಭ್ಯರ್ಥಿಗಳು ಪ್ರಬಲ ಕೋಮಿಗೆ ಸೇರಿದ್ದು,ದಲಿತರು, ಓಬಿಸಿಗಳು ನನ್ನ ಕೈ ಹಿಡಿಯಲಿದ್ದಾರೆ ಎಂಬ ಭರವಸೆ ಇದೆ. ಇತರೆ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.
ಸಭೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಮಂಡಿಸಿದ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಕೆ.ಜಿ.ವೆಂಕಟೇಶ್, ಗ್ರಾಮಾಂತರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರು,ಕಾಂಗ್ರೆಸ್ ಕಾರ್ಯಕರ್ತರು ಜೋಕರ್‌ಗಳ ರೀತಿ ನೋಡುತ್ತಾರೆ.ಕಾಂಗ್ರೆಸ ಮತದಾರರಿದ್ದರೂ ಅವರನ್ನು ಸಂಘಟಿಸುವಂತಹ ನಾಯಕತ್ವದ ಕೊರತೆ ಇದೆ.ಚುನಾವಣೆಗೆ ಅಭ್ಯರ್ಥಿಯಾಗುವವರು ನಂತರ ಕಾಣೋಲ್ಲ. ಹಾಗಾಗಿ ಕಾರ್ಯಕರ್ತರ ಜೊತೆ ಸದಾ ಇರುವ ಸ್ಥಳೀಯರಿಗೆ ದೊರೆತರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಕ್ಷೇತ್ರದ ಹಲವಾರು ಕಾರ್ಯಕರ್ತರು ತಮ್ಮ ಅಭಿಪ್ರಾಯ ಮಂಡಿಸಿದಲ್ಲದೆ,ಕ್ಷೇತ್ರವನ್ನು ಕಾಂಗ್ರೆಸ್ ಮುಖಂಡರು ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಮುಖಂಡರಾದ ಸೂರ್ಯ ಮುಕುಂದರಾಜ್,ಎಸ್ಟಿ ಘಟಕದ ನರಸಿಂಹಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಮೂರ್ತಿ,ಎಸ್ಸಿ ಘಟಕದ ಲಿಂಗರಾಜು,ಓಬಿಸಿ ಘಟಕದ ಪುಟ್ಟರಾಜು,ಕಾರ್ಮಿಕ ಘಟಕದ ಸೈಯದ್ ದಾದಾಪೀರ್, ಸಂಜೀತಕುಮಾರ್,ಕೈದಾಳ ರಮೇಶ್, ಓ.ಸಿ.ಕೃಷ್ಣಪ್ಪ,ಗೂಳರಿವೆ ನಾಗರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.