ಶಿರಾ : ಶಿರಾ ವಿಧಾನಸಭಾ ಕೇತ್ರಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೆಂಬಲಿತ ಅಭ್ಯರ್ಥಿಯಾಗಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಟೈರ್ ರಂಗನಾಥ್ ಅವರು ಸ್ಪರ್ಧಿಸಲಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಘೋಷಿಸಿದರು.
ಅವರು ನಗರದ ಮಂಜುಶ್ರೀ ಕಂಫರ್ಟ್ಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಭಾರತಕ್ಕೆ ಸ್ವಾತಂತ್ರö್ಯ ಬಂದು 75 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಸಂವಿಧಾನ ಬದ್ಧವಾಗಿ ಸರ್ವರಿಗೂ ಸಮಪಾಲು, ತತ್ವದ ಮೇಲೆ, ಸ್ವಾತಂತ್ರö್ಯ, ಸಹೋದರತ್ವ ಆಶಯಗಳನ್ನು ಜಾರಿ ಮಾಡುವ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಅಸಮಾನತೆ ಮತ್ತು ಸಮಾನತೆಯ ಸಂಘರ್ಷದಲ್ಲಿ ಬಂಡವಾಳ ಶಾಹಿ, ಅಧಿಕಾರಶಾಹಿ, ಪುರೋಹಿತಶಾಹಿ ಪ್ರಭುತ್ವಕ್ಕೆ ಶರಣಾಗಿವೆ. ಸಂವಿದಾನದ ಮೂಲಭೂತ ಹಕ್ಕುಗಳು ಸೌಲಭ್ಯಗಳನ್ನು ಪ್ರತಿಯೊಬ್ಬ ಪ್ರಜೆಗೂ ತಲುಪಿಸುವ ಜವಾಬ್ದಾರಿಯನ್ನು ಮರೆತು, ಸ್ವಹಿತಾಸಕ್ತಿಗೆ ಮುಂದಾಗಿವೆ. ಆದ್ದರಿಂದ ಸ್ವಾಭಿಮಾನಕ್ಕಾಗಿ ಒಂದು ಓಟು-ಒಂದು ನೋಟು ನೀಡಿ ಎಂಬ ಘೋಷಣೆಯೊಂದಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿರಾ ತಾಲ್ಲೂಕಿನ ವತಿಯಿಂದ ಟೈರ್ ರಂಗನಾಥ್ ಅವರನ್ನು ಚುನಾವಣಾ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಟೈರ್ ರಂಗನಾಥ್ ಅವರು ಮಾತನಾಡಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತದಾರರನ್ನು ಕೇವಲ ಓಟ್‌ಬ್ಯಾಂಕ್ ಮಾಡಿಕೊಂಡಿವೆ. ಆದರೆ ಅಭಿವೃದ್ಧಿ ಮಾಡಿಲ್ಲ. ದಲಿತ ಸಂಘರ್ಷ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಮನುವಾದಿ ಪಕ್ಷಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಶಿರಾ ತಾಲ್ಲೂಕಿನಲ್ಲಿ ಎಷ್ಟೋ ಜನಕ್ಕೆ ಭೂಮಿ, ನಿವೇಶನ ಇಲ್ಲ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿಲ್ಲ. ಕೇವಲ ರಸ್ತೆ, ಚರಂಡಿಗಳನ್ನು ಮಾಡುವ ಮೂಲಕ ಕಮಿಷನ್ ಇಷ್ಟೆ ಜನರ ಸಮಸ್ಯೆ ಎಂದು ತಿಳಿದಿದ್ದಾರೆ. ನೂರಾರು ಎಕರೆ ಜಮೀನುಗಳ ಖಾತೆ ಆಗಿಲ್ಲ, ದುರಸ್ತು ಆಗಿಲ್ಲ. ಭೂಮಿ ಹಂಚಿಕೆ ಆಗಿಲ್ಲ. ನಗರ ಪ್ರದೇಶಗಳಲ್ಲಿ ಅಕ್ರಮ ಸಕ್ರಮದಲ್ಲಿ ನಿವೇಶನ ನೀಡಿಲ್ಲ. ತಾಲ್ಲೂಕಿನ ಎಲ್ಲಾ ದಲಿತ ಕಾಲೋನಿಗಳು ಖಾಸಗಿ ಮಲೀಕತ್ವದಲ್ಲಿವೆ. ಅಲ್ಪಸಂಖ್ಯಾತ ಸಮುದಾಯಗಳಿಗೆ ಹೆಚ್ಚು ನೋವಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಕರ್ಯ ಇಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ದೀನದಲಿತರ ಅಭಿವೃದ್ಧಿಗೆ ಶ್ರಮಿಸಲು ಈ ಬಾರಿ ವಿಧಾನಸಭೆಗೆ ಸ್ಪರ್ಧಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜನಾರ್ಧನ್ ಚಿಂತಾಮಣಿ, ಶಿವಾಜಿನಗರ ತಿಪ್ಪೇಸ್ವಾಮಿಕ ಕರಿರಾಮನಹಳ್ಳಿ ಭೂತರಾಜು, ಮಾಗೋಡು ಯೋಗಾನಂದ್, ಗೋಪಾಲ್, ದಿನೇಶ್, ಮಂಜುನಾಥ್, ಕೆ.ರಾಜು, ಸೋಮಶೇಖರ್, ಕಾರ್ತಿಕ್, ಶ್ರೀರಂಗಪ್ಪ, ಶಾಂತರಾಜು, ತಿಪ್ಪೇಶ್.ಕೆ.ಕೆ, ನಿತಿನ್ ತಿಪ್ಪೇಶ್, ಪ್ರಿಯಾ ಸೇರಿದಂತೆ ಹಲವರು ಹಾಜರಿದ್ದರು.