ಶಿರಾ : ರಾಜ್ಯದ ಬಿಜೆಪಿ ಸರಕಾರ ಒಳಮೀಸಲಾತಿಯ ವರ್ಗೀಕರಣದ ಮೂಲಕ ಮಾದಿಗ ಸಮುದಾಯದವರಿಗೆ ಶೇ. 6, ಆದಿದ್ರಾವಿಡ ಶೇ. 5.5, ಲಂಬಾಣಿ, ಭೋವಿ, ಕೊರಚ, ಕೊರಮ ನಾಲ್ಕು ಸಮುದಾಯಗಳಿಗೆ ಶೇ. 4.5 ಮತ್ತು ಅಲೆಮಾರಿ ಸಮುದಾಯಗಳಿಗೆ ಶೇ. 1 ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡುವ ಮೂಲಕ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಶಿರಾ ತಾಲ್ಲೂಕು ಲಂಬಾಣಿ ಶ್ರೇಯೋಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷರಾದ ಕೆ.ಶೇಷಾ ನಾಯಕ್ ಆರೋಪಿಸಿದರು.
ಅವರು ನಗರದಲ್ಲಿ ಮಿಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು. ಒಳ ಮೀಸಲಾತಿಯೆ ಅಸಂವಿಧಾನಿಕವಾಗಿದ್ದು, ನಾಲ್ಕು ಗುಂಪುಗಳನ್ನಾಗಿ ಮಾಡಿ ಬಂಜಾರ, ಕೊರಚಾ, ಕೊರಮ, ಬೋವಿ ಸಮುದಾಯಗಳಿಗೆ ಶೇಕಡ 4.5% ಮೀಸಲಾತಿ ಹಂಚಿಕೆ ಮಾಡಿರುವುದು ಕೂಡ ಅವೈಜ್ಞಾನಿಕ. ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ ಮತ್ತು ಜನಸಂಖ್ಯೆಯನ್ನ ಪರಿಗಣಿಸದೆ ಮಾಡಿರುವ ಶೇಕಡಾ 4.5 ರಸ್ಟು ಪ್ರಮಾಣದ ಮೀಸಲಾತಿ ಹಂಚಿಕೆಯನ್ನ ನಮ್ಮ ಸಮುದಾಯಗಳು ಧಿಕ್ಕರಿಸುತ್ತದೆ. ಕಾನೂನು ಸಚಿವರಾದ ಜಿಸಿ ಮಾಧುಸ್ವಾಮಿಯವರ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇರುವ ಸೋದರ ಸಮುದಾಯಗಳ ಕುರಿತು ವಸ್ತುನಿಷ್ಠ ಅಧ್ಯಯನ ಮಾಡಿರುವುದಿಲ್ಲ ಅನಗತ್ಯವಾಗಿ ಸದರಿ ಸಮುದಾಯವು ಸ್ಪೃಶ್ಯರು, ಅಸ್ಪೃಶ್ಯರು, ಎಡಗೈ, ಬಲಗೈ ಎಂದು ಅಸಂವಿಧಾನಿಕ ವಾಸ್ತವಿಕ ಅಂಶಗಳ ಮುಖಾಂತರ ಪರಿಶಿಷ್ಟ ಸಹೋದರ ಸಮುದಾಯಗಳ ನಡುವಿನ ಐಕ್ಯತೆಯನ್ನ ಚಿದ್ರಗೊಳಿಸುವ ಉಪಸಮಿತಿಯ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಪ್ರತಿಭಟನೆಯ ನಂತರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಶಿರಾ ತಾಲೂಕು ಲಂಬಾಣಿ ಶ್ರೇಯೋಭಿವೃದ್ಧಿ ಸಂಘದ ಪದಾಧಿಕಾರಿಗಳಾದ ನಾರಾಯಣ ನಾಯಕ್, ಕೆ ಜಿ ಚಂದ್ರನಾಯಕ್, ಕೆ ಎಸ್ ಬಾಬು ನಾಯಕ್, ಸತೀಶ್, ಮಾನ್ಯನಾಯಕ್, ಎಲ್.ಟಿ.ಶ್ರೀನಿವಾಸ್ ನಾಯಕ್, ಮೀಟ್ಯಾನಾಯಕ್, ಆನಂದ್ ಕುಮಾರ್, ವೆಂಕಟ ನಾಯಕ್, ಪ್ರವೀಣ್ ನಾಯಕ್, ಲಾಲಿಯ ನಾಯಕ್, ಮೂರ್ತಿ ನಾಯಕ್, ರಾಮ ನಾಯಕ್, ಮಾಜಿ ತಾ.ಪಂ. ಸದಸ್ಯೆ ಕೆ ಆರ್ ಮಂಜುಳಾಬಾಯಿ, ರಾಜಮ್ಮ ಬಾಯಿ ಸೇರಿದಂತೆ ಹಲವರು ಭಾಗವಹಿಸಿದ್ದರು.