ಜಿಲ್ಲೆತುಮಕೂರುಸುದ್ದಿ

ವಿಧಾನಸಭಾ ಚುನಾವಣೆ ಘೋಷಣೆ : ಮಾದರಿ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್

ತುಮಕೂರು : ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ದಿನಾಂಕವನ್ನು ಘೋಷಿಸಿದ್ದು, ತಕ್ಷಣದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣಾ ಆಯೋಗ ಹೊರಡಿಸಿರುವ ವೇಳಾಪಟ್ಟಿಯನ್ವಯ ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುವುದು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕಡೆಯ ದಿನವಾಗಿದ್ದು, ಏಪ್ರಿಲ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳಲು ಏಪ್ರಿಲ್ 24ರವರೆಗೂ ಅವಕಾಶವಿದ್ದು, ಮೇ 10ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ನಂತರ ಮೇ 13ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮೇ 15ರಂದು ಮಾದರಿ ನೀತಿ ಸಂಹಿತೆ ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರಲ್ಲದೆ, ಮಾದರಿ ನೀತಿ ಸಂಹಿತೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಜಿಲ್ಲೆಯಲ್ಲಿರುವ 2683 ಮತಗಟ್ಟೆಗಳಲ್ಲಿ 11 ವಿವಿಟಿ (Vedio Viewing Team), 26 ವಿಎಸ್‌ಟಿ, 52 ಎಫ್‌ಎಸ್‌ಟಿ(ಫ್ಲೈಯಿಂಗ್ ಸ್ಕಾ÷್ವಡ್ ತಂಡ), 156 ಎಫ್‌ಎಸ್‌ಟಿ ಸದಸ್ಯರು, 46 ಎಸ್‌ಎಸ್‌ಟಿ((Vedio Viewing Team) ತಂಡ, 138 ಎಸ್‌ಎಸ್‌ಟಿ ಸದಸ್ಯರು, 15 ಎಟಿ, 11 ಎಇಒ (Assistant Expenditure Observer), 232 ಎಸ್‌ಓ ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಾದರಿ ನೀತಿ ಸಂಹಿತೆ ಜಾರಿಗಾಗಿ ಅಂತರರಾಜ್ಯ ಗಡಿಯಲ್ಲಿ 12, ಅಂತರ ಜಿಲ್ಲೆಯ ಗಡಿಯಲ್ಲಿ 17 ಹಾಗೂ ಜಿಲ್ಲೆಯೊಳಗೆ 16 ಸೇರಿದಂತೆ ಒಟ್ಟು 45 ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಗಡಿ ಭಾಗದಲ್ಲಿ 7 ಚೆಕ್‌ಪೋಸ್ಟ್ಗಳು ಕಾರ್ಯ ನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆ ಜಾರಿಯೊಂದಿಗೆ ಸ್ವೀಪ್ ಚಟುವಟಿಕೆ, ಕಾನೂನು ಸುವ್ಯವಸ್ಥೆ, ಸಾರಿಗೆ ನಿರ್ವಹಣೆ, ಮತದಾರರ ಪಟ್ಟಿ ಸೇರಿದಂತೆ ಇತರೆ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಲು 19 ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 1111221 ಪುರುಷರು, 1116077 ಮಹಿಳೆಯರು ಹಾಗೂ 104 ತೃತೀಯ ಲಿಂಗಿಗಳು ಸೇರಿದಂತೆ 2227402 ಮತದಾರರಿದ್ದು, ಈ ಪೈಕಿ 42737 ಪ್ರಥಮ ಬಾರಿಗೆ ಮತದಾನ ಮಾಡಲಿರುವ ಯುವ ಮತದಾರರಿದ್ದಾರೆ. ಜಿಲ್ಲೆಯಲ್ಲಿರುವ 2683 ಮತಗಟ್ಟೆಗಳಲ್ಲಿ 507 ಸೂಕ್ಷö್ಮ ಮತ್ತು ಅತಿ ಸೂಕ್ಷö್ಮ ಮತಗಟ್ಟೆಗಳು, 55 ಮಹಿಳಾ ಮತಗಟ್ಟೆ, 11 ವಿಕಲಚೇತನ ಮತಗಟ್ಟೆ ಹಾಗೂ 22 ಯುವ ಅಧಿಕಾರಿಗಳ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು. ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷವಾಗಿ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಮಹಿಳಾ ಅಧಿಕಾರಿ/ಸಿಬ್ಬಂದಿಗಳನ್ನೊಳಗೊಂಡಂತೆ 55 ಮತಗಟ್ಟೆ, ತಲಾ 1ರಂತೆ ಒಟ್ಟು 11 ವಿಕಲಚೇತನ ಮತಗಟ್ಟೆ, ಯುವ ಮತದಾರರಿಗಾಗಿ ತಲಾ 2ರಂತೆ ಒಟ್ಟು 22 ಯುವ ಅಧಿಕಾರಿಗಳ ಮತಗಟ್ಟೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಸಿ-ವಿಜಿಲ್ ಆಪ್ ಮೂಲಕ ಹಾಗೂ ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಎಲೆಕ್ಷನ್ ಎಕ್ಸ್ಪೆಂಡೀಚರ್ ಮಾನಿಟರಿಂಗ್ ಆಪ್ ಮೂಲಕ ದೂರು ನೀಡಬಹುದಾಗಿದೆ. ಅಲ್ಲದೆ, ಚುನಾವಣಾ ದೂರುಗಳಿಗಾಗಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ.
ಸಾರ್ವಜನಿಕರು ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ ಮೂಲಕ ದೂರು ನೀಡಬಹುದಾಗಿದ್ದು, ವಿಧಾನಸಭಾ ಕ್ಷೇತ್ರವಾರು ಕಂಟ್ರೋಲ್ ರೂಂ ಸಂಖ್ಯೆ ಇಂತಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 08133-26742; ತಿಪಟೂರು 08134-251039; ತುರುವೇಕೆರೆ 08139-287325, ಕುಣಿಗಲ್ 08132-220121; ತುಮಕೂರು ನಗರ 0816-2272200; ತುಮಕೂರು ಗ್ರಾಮಾಂತರ 0816-2006574; ಕೊರಟಗೆರೆ 08138-232153; ಗುಬ್ಬಿ 08131-222234; ಶಿರಾ 08135-295617, ಪಾವಗಡ 08136-200577; ಮಧುಗಿರಿ 08137-200500 ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 0816-1950ಯನ್ನು ಸಂಪರ್ಕಿಸಿ ದೂರು ನೀಡಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2023ರ ವಿಧಾನಸಭಾ ಚುನಾವಣೆಗಾಗಿ 11 ಕ್ಷೇತ್ರಗಳ 2683 ಮತಗಟ್ಟೆಗಳಲ್ಲಿ 3219 ಸಿಯು, 3219 ಬಿಯು ಹಾಗೂ 3489 ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುವುದು. ಚುನಾವಣಾ ಕರ್ತವ್ಯ ನಿರ್ವಹಣೆಗಾಗಿ 2954 ಪಿಆರ್‌ಓ, 2954 ಎಪಿಆರ್‌ಓ, 5908 ಪಿ.ಓ., 507 ಮೈಕ್ರೋ ಅಬ್ಸರ್ವರ್ ಸೇರಿದಂತೆ 12323 ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿರುವ ವಿಕಲಚೇತನರು ಹಾಗೂ 80+ ವಯಸ್ಸಿನ ಮತದಾರರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು. ಇದೇ ಪ್ರಥಮ ಬಾರಿ ಈ ಅವಕಾಶ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿರುವ 29720 ವಿಕಲ ಚೇತನ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ 55827 ಮತದಾರರು ಸೇರಿ 85547 ಗೈರು ಮತದಾರರು (Absentive voters) ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ 85547 ಗೈರು ಮತದಾರರಿಗೆ ಅನುಕೂಲವಾಗುವಂತೆ ನಮೂನೆ 12ಡಿ ಮೂಲಕ ಅರ್ಜಿ ಸಲ್ಲಿಸಿ ಅಂಚೆ ಮತಪತ್ರಗಳನ್ನು ಪಡೆದು ಮತದಾನ ಮಾಡಬಹುದಾಗಿದೆ. ವಿಕಲಚೇತನರು ಹಾಗೂ 80+ ಮತದಾರರ ಮನೆಗಳಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ತೆರಳಿ ನಮೂನೆ 12ಡಿಯನ್ನು ಹಂಚಿಕೆ ಮಾಡಲಿದ್ದು, ಸದರಿ ಮತದಾರರು ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡಲು ಇಚ್ಛಿಸಿದಲ್ಲಿ ನಮೂನೆ 12ಡಿ ಮೂಲಕ ಅರ್ಜಿ ಸಲ್ಲಿಸಿದ ನಂತರ ಅಂಚೆ ಮತಪತ್ರವನ್ನು ಹಂಚಿಕೆ ಮಾಡಲಾಗುವುದು. ಮತ ಚಲಾಯಿಸುವ ದಿನದಂದು ಬಿಎಲ್‌ಒ, ಸೆಕ್ಟರ್ ಅಧಿಕಾರಿ, ಮತಗಟ್ಟೆ ಅಧಿಕಾರಿ, ಮೈಕ್ರೋ ಅಬ್ಸರ್ವರ್, ವಿಡಿಯೋ ಗ್ರಾಫರ್‌ಗಳು ವಿಕಲಚೇತನರು ಹಾಗೂ 80+ ಮತದಾರರ ಮನೆಗಳಿಗೆ ತೆರಳಿ ಅವರಿಂದ ಮತಪತ್ರಗಳನ್ನು ಸಂಗ್ರಹಿಸಲಿದ್ದಾರೆ. ಅಂಚೆ ಮತ ಪತ್ರಗಳ ಮೂಲಕ ಮತದಾನ ಮಾಡುವ ಗೈರು ಹಾಜರಿ ಮತದಾರರು ಮತದಾನ ದಿನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾದ್ಯಂತ 24 ಗಂಟೆಯೊಳಗಾಗಿ ಜಾಹೀರಾತು, ಜಾಲತಾಣ, ರಾಷ್ಟಿçÃಯ ಹೆದ್ದಾರಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಪ್ರಚುರಪಡಿಸಿರುವ ರಾಜಕೀಯ ಮುಖಂಡರು, ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳ ಭಾವಚಿತ್ರವಿದ್ದಲ್ಲಿ ಕೂಡಲೇ ತೆರವು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಬಂಟಿಂಗ್ಸ್ ಬ್ಯಾನರ್, ಭಿತ್ತಿಪತ್ರ, ಫ್ಲೆಕ್ಸ್ಗಳನ್ನು ಕೂಡಲೇ ತೆರವು ಮಾಡಬೇಕೆಂದು ಆಯಾ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಚುನಾವಣಾ ಕರಪತ್ರಗಳನ್ನು ಮುದ್ರಿಸುವ ಮುದ್ರಕರು ಮುದ್ರಣ ಮಾಡುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಚುನಾವಣಾ ಕರಪತ್ರದಲ್ಲಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು ಹಾಗೂ ಮುದ್ರಣ ಮಾಡಿದ ಪ್ರಮಾಣದ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಯಾವುದೇ ವ್ಯಕ್ತಿಯು ಮುದ್ರಕ ಹಾಗೂ ಪ್ರಕಾಶಕರ ಹೆಸರು, ವಿಳಾಸಗಳನ್ನು ಹೊಂದಿರದ ಚುನಾವಣಾ ಕರಪತ್ರ ಅಥವಾ ಪೋಸ್ಟರ್ ಅನ್ನು ಪೂರ್ವಾನುಮತಿ ಪಡೆಯದೆ ಮುದ್ರಿಸಬಾರದು. ಯಾವುದೇ ಸಭೆ, ಸಮಾರಂಭ ಇತರೆ ರಾಜಕೀಯ ಕಾರ್ಯಕ್ರಮಗಳನ್ನು ಏರ್ಪಡಿಸುವ ಮುನ್ನ ಕಡ್ಡಾಯವಾಗಿ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಎಲ್ಲಾ ಪ್ರಿಂಟಿAಗ್ ಪ್ರೆಸ್, ಕೇಬಲ್ ಟಿವಿ ಆಪರೇಟರ್‌ಗಳು ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ನಿರ್ಧಿಷ್ಟ ವ್ಯಕ್ತಿ/ಪಕ್ಷ/ಧರ್ಮ/ಮತ/ಪಂಥಗಳ ಬಗ್ಗೆ ಅವಹೇಳನಕಾರಿಯಾಗಿ ಹೀಯ್ಯಾಳಿಸಿ ಪ್ರಚುರಪಡಿಸಿದವರ ಹಾಗೂ ಪ್ರಚೋದನೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕಿನಲ್ಲಿ ಪ್ರತಿದಿನ ಹಣಕಾಸು ವ್ಯವಹಾರಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರ ಕಂಡು ಬಂದಲ್ಲಿ ಜಿಲ್ಲಾ ಚುನಾವಣಾಧಿಕಾರಿ/ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕೆಂದು ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಏಪ್ರಿಲ್ 20ರವರೆಗೂ ಅವಕಾಶವಿರುತ್ತದೆ. ಆದರೆ ಹೆಸರು ನೋಂದಣಿ ಪ್ರಕ್ರಿಯೆಗೆ 10 ದಿನಗಳ ಕಾಲಾವಕಾಶ ಅಗತ್ಯವಿರುವುದರಿಂದ ಏಪ್ರಿಲ್ 24ಕ್ಕಿಂತ 10 ದಿನಗಳ ಮುಂಚೆ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ತಿಳಿಸಿದರು.
ಮತದಾನದ ನಂತರ ಮೇ 13ರಂದು ನಡೆಯಲಿರುವ ಮತ ಎಣಿಕೆ ಕಾರ್ಯವನ್ನು ಪ್ರತಿಬಾರಿಯಂತೆ ನಗರದ ಸರ್ಕಾರಿ ಪಾಲಿಟೆಕ್ನಿಕ್, ವಿಜ್ಞಾನ ಕಾಲೇಜು, ವಿಶ್ವವಿದ್ಯಾನಿಲಯದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಚುನಾವಣಾ ಅಕ್ರಮಗಳಿಗೆ ಸಂಬAಧಿಸಿದAತೆ ಮಾರ್ಚ್ 16 ರಿಂದ 29ರವರೆಗೂ 1,20,49,690 ರೂ. ನಗದು, 1,99,207.43 ರೂ. ಮೌಲ್ಯದ 17,726.42 ಲೀಟರ್ ಮದ್ಯ, 12,27,550 ರೂ. ಮೌಲ್ಯದ 29.36 ಕೆ.ಜಿ. ಡ್ರಗ್ಸ್/ಮಾದಕ ವಸ್ತು, 49,73,540 ರೂ. ಮೌಲ್ಯದ 14500 ಕೆ.ಜಿ. ಫ್ರೀಬೀಸ್/ ಇತರೆ ವಸ್ತು ಸೇರಿದಂತೆ 1,84,49,938 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್‌ವಾಡ್, ಜಿಲ್ಲಾ ಪಂಚಾಯತ್ ಸಿಇಓ ಡಾ: ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಪಾಲಿಕೆ ಆಯುಕ್ತ ಹೆಚ್.ವಿ. ದರ್ಶನ್ ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker