ಕೊರಟಗೆರೆ : ಮಠಗಳು ಸನಾತನ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿದ್ದು ಹಸಿದವರಿಗೆ ಅನ್ನವನ್ನು, ನೆಲೆಯಲ್ಲದವರಿಗೆ ಆಶ್ರಯವನ್ನು, ಬಡಮಕ್ಕಳಿಗೆ ವಿದ್ಯೆಯನ್ನು ನೀಡುತ್ತಾ ಬರುತ್ತಿವೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಗ್ರಾಮದ ನರಸಿಂಹಗಿರಿ ಕ್ಷೇತ್ರದ ಕುಂಚಿಟಿಗ ಸಂಸ್ಥಾನ ಮಠದ ನೂತನ ಸಮುದಾಯ ಭವನದ ದಾಸೋಹ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಕರ್ನಾಟಕ ರಾಜ್ಯವು ಶಿಕ್ಷಣದಲ್ಲಿ ಮಹತ್ತರ ಸಾಧನೆ ಮಾಡಿದೆ ಇದರಲ್ಲಿ ನಮ್ಮ ಸಿದ್ದಗಂಗಾ, ಆದಿಚುಂಚನಗಿರಿ, ಸುತ್ತೂರು ಮಠಗಳಂತಹ ನೂರಾರು ಮಠಗಳ ಕೊಡಿಗೆಯು ಸಾಕಷ್ಟು ಇದೆ, ನಮ್ಮ ಕ್ಷೇತ್ರದ ಎಲೆರಾಂಪುರ ಗ್ರಾಮದ ಕುಂಚಿಟಿಗ ಮಹಾ ಸಂಸ್ಥಾನ ಮಠವು ಕೆಲವೆ ವರ್ಷಗಳಲ್ಲಿ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಮಾಜಿಕವಾಗಿ, ಆದ್ಯಾತ್ಮಿಕವಾಗಿ ಸಾಧನೆ ಮಾಡಿದ್ದು ಇದ್ದಕ್ಕೆ ಈ ಮಠದ ಜವಾಬ್ದಾರಿಯನ್ನು ಹೊತ್ತಂತಹ ಡಾ.ಶ್ರೀಹನುಮಂತಸ್ವಾಮಿಜಿಗಳ ಪರಿಶ್ರಮ, ಸೇವೆ ಕಾರಣವಾಗಿದ್ದು ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಈ ಮಠಕ್ಕೆ ನನಗೆ ಸಾದವಾದಷ್ಟು ಸೇವೆ ಸಲ್ಲಿಸಲು ಬದ್ದ ಎಂದರು.
ನನ್ನ ಕುಟುಂಬ ಪರಿವಾರಕ್ಕೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮಿಜಿಗಳ ನಿರಂತರ ನಂಟು ಸದಾ ಇತ್ತು, ಅದೇ ರೀತಿಯಾಗಿ ಇಂದಿನ ನಿರ್ಮಲಾನಂದ ಸ್ವಾಮಿಗಳ ಅಶೀರ್ವಾದವು ನಮ್ಮ ಮೇಲೆ ಸದಾ ಇದ್ದು ಅವರಲ್ಲಿ ನಂಬಿಕೆಯನ್ನು ಇಟ್ಟಿದ್ದೇವೆ ಇವರುಗಳ ಪೀಠಾದ್ಯಕ್ಷತೆಯಲ್ಲಿ ಆದಿಚುಂಚನಗಿರಿ ಸಂಸ್ಥಾನವು ಲಕ್ಷಾಂತರ ಜನರಿಗೆ, ವಿದ್ಯಾರ್ಥಿಗಳಿಗೆ ಆಶ್ರಯವಾಗಿದೆ ಎಂದರು.
ತಾಲ್ಲೂಕಿನ ನರಸಿಂಹಗಿರಿ ಕ್ಷೇತ್ರದ ಹನುಮಂತನಾಥ ಸ್ವಾಮಿಜಿ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಡಾ.ಜಿ.ಪರಮೇಶ್ವರ ರವರಂತ ಜನಪ್ರತಿನಿಧಿಗಳ ಅತ್ಯಗತ್ಯವಿದೆ. ಕ್ಷೇತ್ತದಲ್ಲಿ ಪ್ರತಿ ಗ್ರಾಮಗಳಲ್ಲಿಯೂ ಒಂದೊಂದು ಅಭಿವೃದ್ದಿ ಕೆಲಸ ಮಾಡಿದ್ದಾರೆ, ಐದು ವರ್ಷಗಳಲ್ಲಿ ಜನರೊಂದಿಗೆ ನಿರಂತರ ಒಡನಾಟಹೊಂದಿರುವ ಕೆಲವೇ ಜನಪ್ರತಿನಿಧಿಗಳಲ್ಲಿ ಡಾ.ಜಿ.ಪರಮೇಶ್ವರ ಒಬ್ಬರಾಗಿದ್ದಾರೆ, ನನಗೆ ಶಿಕ್ಷಣ ಮತ್ತು ಧರ್ಮ ಬೋದನೆ ಮಾಡಿದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ತುಮಕೂರಿಗೆ ಬಂದರೆ ಡಾ.ಜಿ.ಪರಮೇಶ್ವರ ರವರ ತಂದೆ ಗಂಗಾಧರಯ್ಯ ಮತ್ತು ಕೆಂಪಯ್ಯ ನವರ ಮನೆಗೆ ಬೇಟಿ ನೀಡಿ ಕುಶಲ ವಿಚಾರಿಸಿ ಮುಂದೆ ಹೋಗುತ್ತಿದ್ದರು, ಡಾ.ಜಿ.ಪರಮೇಶ್ವರ ಕೂಡ ನಮ್ಮ ನರಸಿಂಹಗಿರಿ ಕ್ಷೇತ್ರದ ಮಠಕ್ಕೆ ಸಭಕ್ತರಾಗಿದ್ದು, ನಾನು ಪತ್ರನೀಡಿ ಕಳುಹಿಸಿದ್ದ ಅನೇಕ ಬಡವಿದ್ಯಾರ್ಥಿಗಳಿಗೆ ಅವರ ಕಾಲೇಜುಗಳಲ್ಲಿ ಶುಲ್ಕ ವಿನಾಯತಿ, ಅವರ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಡವರಿಗೆ ಉಚಿತ ಅಥವಾ ಶುಲ್ಕವಿನಾಯತಿ ಹಾಗೂ ಕೆಲವರಿಗೆ ಕೆಲಸ ಕೂಡ ನೀಡಿದ್ದು ಇದು ಅವರು ಮಠದ ಮೇಲೆ ಇಟ್ಟ ಗೌರವರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೌಶಲ್ಯಭಿವೃದ್ದಿ ನಿಗಮದ ಮಾಜಿ ಅದ್ಯಕ್ಷ ಮುರಳಿಧರ ಹಾಲಪ್ಪ, ಮಾಜಿ ಜಿ.ಪಂ ಸದಸ್ಯ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆ ಶಂಕರ್, ಕೋಡ್ಲಹಳ್ಳಿ ಅಶ್ವಥನಾರಾಯಣ, ಮಹಿಳಾ ಅದ್ಯಕ್ಷೆ ಜಯಮ್ಮ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಕವಿತ, ಮುಖಂಡರುಗಳಾದ ಸಿಗೇಪಾಳ್ಯ ಮಲ್ಲಪ್ಪ, ವೀರಣ್ಣ, ಸ್ವಾಮಿ, ರಾಜಶೇಖರ್, ಚನ್ನಲಿಂಗಪ್ಪ, ಸಿದ್ದಪ್ಪ, ಉಮೇಶ್ ಸೇರಿದಂತೆ ಇತರರು ಹಾಜರಿದ್ದರು.