ತಿಪಟೂರು : ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕರಾದ ಕೆ.ಷಡಾಕ್ಷರಿ ಮಾರ್ಚ್ ತಿಂಗಳ ಮೊದಲ ವಾರ ತಿಪಟೂರಿನಲ್ಲಿ ಪ್ರಜಾ ಧ್ವನಿ ಯಾತ್ರೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ 12,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಪ್ರಜಾಧ್ವನಿ ಯಾತ್ರೆಯು ಈಗಿನ ಬಿಜೆಪಿ ಸರ್ಕಾರದ ಆಡಳಿತದ ವೈಫಲ್ಯಗಳು ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿ ಹೇಳುವ ಮುಖ್ಯವಾದ ಯಾತ್ರೆಯಾಗಿದೆ.
ನಮ್ಮ ಸರ್ಕಾರದ ಅವಧಿಯಲ್ಲಿ ನಾವು ಘೋಷಿಸಿದ್ದ ಪ್ರಣಾಳಿಕೆಯಲ್ಲಿದ್ದ 160 ಕಾರ್ಯಕ್ರಮಗಳನ್ನೂ ಸಹ ಜಾರಿಗೊಳಿಸಿದ್ದು, ಬಿಜೆಪಿಯವರು ಘೋಷಿಸಿದ್ದ ಪ್ರಣಾಳಿಕೆಯಲ್ಲಿದ್ದ 600ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಶೇಕಡಾ ಎರಡರಷ್ಟನ್ನೂ ಸಹ ಅನುಷ್ಠಾನಗೊಳಿಸಿಲ್ಲ.
ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿ ವ್ಯಕ್ತಿಗೆ ಕೊಡುತ್ತಿದ್ದ 7 ಕೆಜಿ ಅಕ್ಕಿಯನ್ನು ಈಗಿನ ಬಿಜೆಪಿ ಸರ್ಕಾರ 5 ಕೆ.ಜಿ.ಗೆ ಇಳಿಸಿದೆ. ನಮ್ಮ ಸರ್ಕಾರ ಬಂದ ನಂತರ ಇದನ್ನು 10 ಕೆ.ಜಿ.ಗೆ ಏರಿಸಲಾಗುವುದು.
ನಮ್ಮ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಬಾಂಡ್ ಯೋಜನೆ ಮಾಡಲಾಗಿದ್ದು, ಇದರಲ್ಲಿರುವ ಗೃಹಲಕ್ಷ್ಮಿ ಬಾಂಡ್ ಯೋಜನೆಯಲ್ಲಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ಸಹ ರೂ.2,000 ಕೊಡಲಾಗುವುದು ಹಾಗೂ ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದಾಗಿ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಹಿ ಮಾಡಿರುವ ಗ್ಯಾರಂಟಿ ಬಾಂಡ್ ತೋರಿಸಿ ಮಾತನಾಡಿದರು.
ನಫೆಡ್ ಕೊಬ್ಬರಿ ಬೆಂಬಲ ಬೆಲೆ ರೂ,11,750 ಇದ್ದರೂ ಸಹ ಮಾರುಕಟ್ಟೆಯಲ್ಲಿ ರೂ.10,000 ಆಸುಪಾಸಿನಲ್ಲಿ ಹರಾಜಾಗುತ್ತಿರವ ಬಗ್ಗೆ ಪ್ರಶ್ನಿಸಿದಾಗ, ಹಿಂದೆ ನಮ್ಮ ರಾಜ್ಯ ಸರ್ಕಾರವು ಪ್ರೋತ್ಸಾಹ ಧನವಾಗಿ ರೂ.2000 ಕೊಟ್ಟಿತ್ತು. ಈಗಿನ ಸರ್ಕಾರವು ಸಹ ಅದೇ ರೀತಿ ಪ್ರೋತ್ಸಾಹ ಧನ ಕೊಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿರುವ ಯೋಜನೆಗಳು ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯಕ್ರಮಗಳಾಗಿದ್ದು ಅದನ್ನು ಮನೆ ಮನೆಗೆ ತಿಳಿಸಿ ಕಡ್ಡಾಯವಾಗಿ ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಡೆನೂರು ಕಾಂತರಾಜು, ನಗರ ಕಾಂಗ್ರೆಸ್ ಅಧ್ಯಕ್ಷರಾದ ಟಿ.ಎನ್. ಪ್ರಕಾಶ್, ಕೆ.ಪಿ.ಸಿ.ಸಿ. ಸದಸ್ಯರಾದ ವಿ.ಯೋಗೇಶ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಗಂಗಾಧರ್, ಕೊಪ್ಪ ಶಾಂತಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗಂಗನಘಟ್ಟ ಶಿವಸ್ವಾಮಿ, ತಾಲ್ಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸೈಫುಲ್ಲಾ ಮತ್ತಿತರರಿದ್ದರು.