ಶಿರಾ : ಮೈಸೂರು ಜಿಲ್ಲೆ ಎಚ್‌ಡಿ ಕೋಟೆ ತಾಲ್ಲೂಕಿನ ಹೊಮ್ಮರಗಹಳ್ಳಿಗೆ ಹೊಲಸೆ ಹೋಗಿದ್ದ, ಹೂಲಿಕುಂಟೆ ಹೋಬಳಿ ದೊಡ್ಡಬಾಣಗೆರೆ ಗ್ರಾಮದ ಕುರಿಗಾಹಿ ಗೀತಮ್ಮ ಅವರ 25 ಕ್ಕೂ ಅಧಿಕ ಕುರಿಗಳು ವಿಷಕಾರೀ ಸೊಪ್ಪು ತಿಂದು ಅಸುನೀಗಿದ್ದ ವಿಷಯ ತಿಳಿದು ಕೂಡಲೇ ಎಚ್ ಡಿ ಕೋಟೆಯ ಶಾಸಕರಾದ ಅನಿಲ್ ಅವರ ಜೊತೆ ಮಾತನಾಡಿ ಪಶುವೈದ್ಯೆರನ್ನು ಹಾಗೂ ಪೋಲಿಸ್ ಸಿಬ್ಬಂದಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲು ಮನವಿ ಮಾಡಲಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಶಾಸಕ ಡಾ. ಸಿ .ಎಂ. ರಾಜೇಶ್ ಗೌಡ ಅವರು ಜೀವನೋಪಾಯಕ್ಕಾಗಿ ಕಾಡುಗೊಲ್ಲ ಸಮುದಾಯದ ನೂರಾರು ಜನ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ನೂರಾರು ಕುರಿಗಳ ಜೊತೆ ಹೊಲಸೆ ಹೋಗುತ್ತಾರೆ, ಇಂತಹ ಸಂದರ್ಭದಲ್ಲಿ ಹಲವು ರೀತಿಯ ಅಹಿತಕರ ಘಟನೆಗಳು ನಡೆಯುತ್ತವೆ, ಅಂತಹ ಸಂದರ್ಭದಲ್ಲಿ ನನ್ನನ್ನು ಸಂಪರ್ಕಿಸಿದ ಪ್ರತಿಯೊಬ್ಬರಿಗೂ ಸೂಕ್ತ ಸಹಾಯ ಮಾಡಲು ನನ್ನ ಶಕ್ತಿ ಮೀರಿ ಪ್ರಯತ್ತಿಸುತ್ತಿದ್ದೇನೆ, ಶಿರಾ ಕ್ಷೇತ್ರದ ಶಾಸಕನಾಗಿ ನನ್ನ ಜನರ ಕಷ್ಟ ಮತ್ತು ನೋವುಗಳಿಗೆ ಸ್ಪಂದಿಸುದು ನನ್ನ ಕರ್ತವ್ಯ ಎಂದರು.
ಮೈಸೂರು ಜಿಲ್ಲೆಯ ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ. ಶಡಕ್ಷರ ಮೂರ್ತಿಅವರ ಜೊತೆ ಮಾತನಾಡಿ ಹೊಮ್ಮರಗಹಳ್ಳಿ ಸ್ಥಳಕ್ಕೆ ಕೂಡಲೇ ಪಶುವೈದ್ಯರನ್ನು ಕಳುಹಿಸಿ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಾವಿಗೀಡಾದ ಕುರಿಗಳಿಗೆ ಸರಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.