ಶಿರಾ : ಶಿರಾ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ನಿವೇಶನ ನೀಡಲು ಆಶ್ರಯ ಸಮಿತಿ ಸಭೆಯಲ್ಲಿ ಅನುಮೋದನೆಯಾಗಿದ್ದು, ಕೆಲವೇ ದಿನಗಳಲ್ಲಿ ನಿವೇಶನ ನೀಡಲಾಗುವುದು ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾತ್ಕಾಲಿಕ ಕಚೇರಿ ಉದ್ಘಾಟಿಸಿ, ಪತ್ರಕರ್ತರ ಸಂಘದ ಸದಸ್ಯರಿಗೆ ಆರೋಗ್ಯ ವಿಮೆ ಬಾಂಡ್ ವಿತರಿಸಿ ಮಾತನಾಡಿದರು. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಮೇಲಿನ ನಂಬಿಕೆ ಜೊತೆಗೆ ಪತ್ರಿಕಾಂಗದ ಕಾರ್ಯದ ಮೇಲೆ ಜನರು ಹೆಚ್ಚಿನ ನಂಬಿಕೆ ಇಟ್ಟಿದ್ದಾರೆ. ಪತ್ರಕರ್ತರು ಸಮಾಜದ ಅಭಿವೃದ್ಧಿಗೆ ಧ್ವನಿಯಾಗಿ ಕೆಲಸ ಮಾಡಬೇಕು. ಕರ್ತವ್ಯ ನಿರ್ವಹಣೆಯಲ್ಲಿ ಎಡರು ತೊಡರುಗಳನ್ನು ಮಾಡಿದಾಗ ಎಚ್ಚರಿಸುವ ಕೆಲಸವನ್ನು ಮಾಡಬೇಕು. ಇಂದಿನ ದಿನಮಾನಗಳಲ್ಲಿ ಪತ್ರಕರ್ತರ ಬದುಕು ಅನಿಶ್ಚಿತ ಅಗಿದೆ. ಬದುಕಿಗೆ ಯಾವುದೇ ಆಸರೆ ಇಲ್ಲದಂತಾಗಿದೆ. ಸಮಾಜದ ಕೈಗನ್ನಡಿಯಂತೆ ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರ ಬದುಕು ಸಂಕಷ್ಟದಲ್ಲಿದೆ ಎಂದ ಅವರು ಶಿರಾ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡಕ್ಕೆ ನಗರಸಭೆಯ ವತಿಯಿಂದ ಸಿಎ ನಿವೇಶನ ನೀಡಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಸದಸ್ಯ ಆರ್.ರಾಮು ಅವರು ಮಾತನಾಡಿ ಪತ್ರಕರ್ತರು ಹಗಲಿರುಳೆನ್ನದೆ ತಮ್ಮ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅವರ ಆರೋಗ್ಯದ ದೃಷ್ಟಿಯಿಂದ ನಗರಸಭೆಯ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಆರೋಗ್ಯ ವಿಮೆ ಮಾಡಿಸಿಕೊಡಲು ನಗರಸಭೆ ಅಧ್ಯಕ್ಷರಾದ ಬಿ.ಅಂಜಿನಪ್ಪ ಹಾಗೂ ಎಲ್ಲಾ ಸದಸ್ಯರು ಅನುಮೋದನೆ ನೀಡಿ ಆರೋಗ್ಯ ವಿಮೆ ಮಾಡಿಸಿಕೊಡಲಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎನ್.ಜಯಪಾಲ್ ಮಾತನಾಡಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಶಿರಾ ತಾಲ್ಲೂಕು ಕಾರ್ಯನಿರತ ಪತ್ರಕರ್ತರಿಗೆ ಬೆಂಬಲವಾಗಿ ನಮ್ಮ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗೆ ಆರೋಗ್ಯ ಕಿಟ್ ಜೊತೆಗೆ ಆಹಾರ ಸಾಮಗ್ರಿಗಳನ್ನು ನೀಡಿದ್ದನ್ನು ಮರೆಯುವಂತಿಲ್ಲ. ಮುಂದೆಯೂ ಪತ್ರಕರ್ತರಿಗೆ ನಿವೇಶನ ನೀಡಿ ಪತ್ರಕರ್ತರ ಸಂಘದ ಕಟ್ಟಡಕ್ಕೂ ನಿವೇಶನ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜು.ಎನ್, ಖಜಾಂಚಿ ಎಸ್.ಕೆ.ಕುಮಾರ್, ಪತ್ರಕರ್ತರಾದ ಹೆಚ್.ಸಿ.ಅನಂತರಾಮು, ಶಿವಕುಮಾರ್, ಮಂಜುನಾಥ್.ಜಿ, ವಿನೋದ್‌ಕುಮಾರ್, ವಿಜಯ್‌ಕುಮಾರ್, ಎಂ.ಎಲ್.ನಾಗರಾಜು, ಸುಫಿಯಾನ್ ಅಹಮದ್, ಬಾಲಕೃಷ್ಣೇಗೌಡ, ನಟರಾಜು.ಟಿ.ಎಲ್, ತಂಗವೇಲು, ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್, ಸ್ಟಾರ್ ಇನ್ಸೂರೆನ್ಸ್ ವ್ಯವಸ್ಥಾಪಕರಾದ ಇಂದುಶೇಖರ್, ಅರ್ಶದ್ ಸೇರಿದಂತೆ ಹಲವರು ಹಾಜರಿದ್ದರು.