ಪಾವಗಡ : ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವವರ ಬಗ್ಗೆ ತಾಲೂಕಿನ ಜನತೆಗೆ ಗೊತ್ತಿದೆ, ಶಾಶ್ವತ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದವರನ್ನು ಜನತೆ ಎಂದಿಗೂ ಮರೆಯೋದಿಲ್ಲ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಒಂದರಿಂದ ಐದನೇ ವಾರ್ಡ್ಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಾಗಲಮಡಿಕೆಯ ಪಿನಾಕಿನಿ ನದಿಗೆ ಕಟ್ಟಿರುವ ದೊಡ್ಡ ಬ್ರಿಡ್ಜ್ ಮತ್ತು ಡ್ಯಾಂ, ಕಣಿವೇ ನರಸಿಂಹಸ್ವಾಮಿ ದೇವಸ್ಥಾನದ ಬಳಿಯ ಹಾಸ್ಟಲ್ ನಿರ್ಮಾಣದ ವೇಳೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದವರು ಇಂದು ಕ್ಷೇತ್ರದ ಅಭಿವೃದ್ದಿ ಕುರಿತು ಮಾತನಾಡುತ್ತಿರುವುದು ವಿಪರ್ಯಾಸ ಎಂದು ಮಾಜಿ ಶಾಸಕ ತಿಮ್ಮರಾಯಪ್ಪಗೆ ಟಾಂಗ್ ನೀಡಿದರು.
ಕ್ಷೇತ್ರದಲ್ಲಿ ಕೇವಲ ಚುನಾವಣೆ ಸಮಯದಲ್ಲಿ ಕಾಣಿಸಿಕೊಂಡು ಎಲ್ಲಾ ನಾನೇ ಮಾಡಿದ್ದು, ನಾನು ಮಂತ್ರಿಗಳಿಗೆ, ಸರ್ಕಾರಕ್ಕೆ ಪತ್ರ ಬರೆದ ಕಾರಣ ಯೋಜನೆಗಳು ಅನುಷ್ಠಾನವಾಗಿವೆ ಎಂದು ಹಾಸ್ಯಾಸ್ಪದ ಮಾತುಗಳು ಕ್ಷೇತ್ರ ಜನತೆಗೆ ಹೇಳುವ ಬದಲು ಎರಡು ಬಾರಿ ಶಾಸಕನಾಗಿದ್ದಾಗ ತಾಲೂಕಿಗೆ ಮಾಜಿ ಏನು ಮಾಡಿದ್ದೇನೆ ಎಂದು ಮಾಜಿ ಶಾಸಕರು ಹೇಳಿದರೆ ಸಾಕು, ಜನತೆ ಬುದ್ದಿವಂತರಿದ್ದಾರೆ ಎಂದರು.
ಕ್ಷೇತ್ರದ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸುತ್ತಾ ಬಂದಿರುವ ನನಗೆ ಅಧಿಕಾರದ ಆಸೆಯಿಲ್ಲ, ಜನರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ, ಕೇವಲ ಚುನಾವಣೆ ಸಮಯದಲ್ಲಿ ಕಾಣಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವ ವ್ಯಕ್ತಿಗೆ ಜನತೆ ಬುದ್ದಿ ಕಲಿಸುತ್ತಾರೆ ಎಂದರು.
ಪಟ್ಟಣದ ವ್ಯಾಪ್ತಿಯಲ್ಲಿ 4.56 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಕುಡಿಯುವ ನೀರಿನ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ, ಪ್ರತಿ ವಾರ್ಡ್ಗಳಲ್ಲೂ ಖುದ್ದಾಗಿ ಸಂಚರಿಸಿ ಜನರ ಸಮಸ್ಯೆ ತಿಳಿದು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಲು ತಿಳಿಸುತ್ತಿದ್ದೇನೆ ಎಂದರು.
ಈ ವೇಳೆ ಪುರಸಭೆ ಅದ್ಯಕ್ಷೆ ಧನಲಕ್ಷ್ಮೀ, ಮಾಜಿ ಅಧ್ಯಕ್ಷ ವೇಲುರಾಜು, ರಾಮಾಂಜಿನಪ್ಪ, ಉಮಾದ್ಯಕ್ಷೆ ಶಶಿಕಳಾ ಬಾಲಾಜಿ, ಹೆಚ್.ವಿ.ವೆಂಕಟೇಶ್, ಸದಸ್ಯರಾದ ರಾಜೇಶ್, ರವಿ, ನಾಗಭೂಷಣರೆಡ್ಡಿ, ಮಹಮ್ಮದ್ ಇಮ್ರಾನ್, ಸುದೇಶ್ ಬಾಬು, ವಿಜಯಕುಮಾರ್, ಗೀತಾ, ಮುಖಂಡರಾದ ಪ್ರಮೋದ್ ಕುಮಾರ್, ಶಂಕರರೆಡ್ಡಿ, ಕಿರಣ್, ಅವಿನಾಶ್, ಪಾಪಣ್ಣ, ಹನುಮೇಶ್, ಹರೀಶ್, ಷಾ ಬಾಬು ಸೇರಿದಂತೆ ಇತರರು ಇದ್ದರು.