ಶಿರಾ : ಶಾಸಕನಾಗಿ ಆಯ್ಕೆಯಾದ ಎರಡುವರೆ ವರ್ಷಗಳಲ್ಲಿ ಶಿರಾ ತಾಲ್ಲೂಕಿನಲ್ಲಿ ತಾಲ್ಲೂಕು ಆಡಳಿತದಿಂದ, ಸಾಗುವಳಿ ಚೀಟಿ, ಪಿಂಚಣಿ ಆದೇಶ ಪ್ರಮಾಣ ಪತ್ರಗಳನ್ನು ಫಲಾನುಭವಿಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ನಗರದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಬಗರ್ ಹುಕುಂ ಸಾಗುವಳಿ ಚೀಟಿ ಹಾಗೂ ಮಾಶಾಸನ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಗುವಳಿಚೀಟಿ ವಿತರಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳು ರೈತರಿಗೆ ತಲುಪಬೇಕಾದರೆ. ಜಮೀನು ಅವರ ಹೆಸರಿಗೆ ಇರಬೇಕು. ಆದ್ದರಿಂದ ರೈತರು ಕೇವಲ ಅನುಭವನದಲ್ಲಿದ್ದು, ಸಾಗುವಳಿ ಚೀಟಿ ಸಿಗದೆ ಖಾತೆ ಆಗದಿದ್ದರೆ ಸರಕಾರದ ಸೌಲಭ್ಯಗಳು ದೊರಕುವುದಿಲ್ಲ. ಈ ನಿಟ್ಟಿನಲ್ಲಿ ಕಳೆದ ಎರಡುವರೆ ವರ್ಷಗಳಲ್ಲಿ ಕಂದಾಯ ಇಲಾಖೆಯಿಂದ ಕ್ರಿಯಾಶೀಲವಾಗಿ ಕೆಲಸ ಮಾಡಿ ಅತಿ ಹೆಚ್ಚು ಸಾಗುವಳಿ ಚೀಟಿಗಳನ್ನು ವಿತರಿಸಲಾಗಿದೆ ಎಂದರು.
195 ಬಗರ್ ಹುಕುಂ ಸಾಗುವಳಿ ಚೀಟಿ, 1991-92 ರಲ್ಲಿ ಸಾಗುವಳಿ ಚೀಟಿ ವಿತರಿಸಿ ಇದುವರೆಗೂ ಖಾತೆ ಆಗದಂತಹ ಫಲಾನುಬವಿಗಳಿಗೆ ಸುಮಾರು 268 ಫಲಾನುಭವಿಗಳಿಗೆ ಖಾತೆ ಮಾಡಿಕೊಡಲಾಗಿದೆ. ಕಿಮ್ಮತ್ತು ಪಾವತಿಸಲು ಅಧಿಕೃತ ನೋಟಿಸ್ ಜಾರಿ ಮಾಡಿರುವುದು 136 ಫಲಾನುಭವಿಗಳು ಇವರೆಲ್ಲರಿಗೂ ಕಂದಾಯ ಇಲಾಖೆಯಿಂದ ಸಾಗುವಳಿ ಚೀಟಿ ನೀಡಲಾಗುವುದು ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ ನಿವೇಶನ ರಹಿತ ಫಲಾನುಭವಿಗಳಿಗೆ 205 ನಿವೇಶನ ಪತ್ರಗಳನ್ನು ವಿವಿಧ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ ಎಂದರು.
1500 ಮನೆ ಮಂಜೂರು: ಶಿರಾ ತಾಲ್ಲೂಕಿಗೆ 1500 ಹೆಚ್ಚುವರಿ ಮನೆಗಳನ್ನು ವಸತಿ ಸಚಿವ ಸೋಮಣ್ಣ ಅವರು ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಸಂಬಂಧಪಟ್ಟ ಇಲಾಖೆಗೆ ರವಾನೆಯಾಗಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸಭೆಗಳನ್ನು ಮಾಡಿ ಯಾರು ವಸತಿ ರಹಿತರಿರುತ್ತಾರೆ ಅಂತಹ ಫಲಾನುಭವಿಗಳಿಗೆ ನಿವೇಶನ ಹಾಗೂ ವಸತಿ ನೀಡಬೇಕು. ಪಕ್ಷಾತೀತವಾಗಿ ಸೌಹಾರ್ದಯುತವಾಗಿ ಫಲಾನುಭವಿಗಳ ಆರ್ಥಿಕ ಸ್ಥಿತಿಯನ್ನು ಅರಿತು ಅವರಿಗೆ ಆದ್ಯತೆ ಮೇರೆಗೆ ನೀಡಬೇಕು ಎಂದರು.
ಸಣ್ಣ ನೀರಾವರಿ ಹಾಗೂ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಮಾತನಾಡಿ ಸಾಗುವಳಿ ಚೀಟಿ ವಿತರಣೆ ಅರ್ಹತೆ ಇದ್ದರೆ ಖಂಡಿತ ಕೊಡುತ್ತೇವೆ. ಬಿಜೆಪಿ ಸರಕಾರ ಬಂದ ಮೇಲೆ ಸಾಗುವಳಿ ಕಮಿಟಿ ಮಾಡಿದ್ದೇವೆ. ರೈತರು ಜಮೀನು ಪಡೆಯಲು ನಿರಂತರವಾಗಿ ಅನುಭವದಲ್ಲಿರಬೇಕು. 2005ನೇ ಇಸವಿಯಿಂದ ಇಲ್ಲಿಯವರೆಗೆ ಯಾರು ಉಳುಮೆ ಮಾಡುತ್ತಿರುವವರಿಗೆ ಸಾಗುವಳಿ ಜಮೀನು ನೀಡಲು ಸಾಧ್ಯವಿದೆ. ಇಲ್ಲದಿದ್ದರೆ ಕಾನೂನು ಮೀರಿ ಯಾವುದನ್ನು ನೀಡಲಾಗುವುದಿಲ್ಲ. ಯಾವ ಮಂತ್ರಿ, ಶಾಸಕರೂ ಕಾನೂನಿಗೆ ಮೀರಿದವರಲ್ಲ. ಶಿರಾ ತಹಶೀಲ್ದಾರ್ ಮಮತ ಅವರು ಕ್ರಿಯಾಶೀಲವಾಗಿ ಕೆಲಸ ಮಾಡಿ ಕಡತ ವಿಲೇವಾರಿ ಮಾಡಿದ್ದಾರೆ. 20 ವರ್ಷಗಳಿಂದ ಬಾಕಿ ಇದ್ದ ಕಡತಗಳನ್ನು ವಿಲೇವಾರಿ ಮಾಡಿದ್ದಾರೆ. ಅವರಿಗೆ ರೈತರೂ ಸಹ ಸಹಕರಿಸಬೇಕು. ಸ್ಥಳೀಯವಾಗಿ ಉಳುಮೆ ಮಾಡುವವರಿಗೆ ಅಲ್ಲಿನವರೇ ರಕ್ಷಣೆ ಕೊಡಬೇಕು. ಬಿಜೆಪಿ ಸರಕಾರ ಜನರಿಗೆ ಸರಕಾರಿ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ. ಇದನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಮತ.ಎಂ, ಗ್ರೇಡ್-2 ತಹಶೀಲ್ದಾರ್ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನಂತರಾಜು, ಕಸಬಾ ಕಂದಾಯ ನಿರೀಕ್ಷಕ ಮಂಜುನಾಥ್ ಸೇರಿದಂತೆ ಹಲವರು ಹಾಜದ್ದರು.