ತುಮಕೂರು

ಜ.1 ರಿಂದ ಹಾಲು ಉತ್ಪಾದಕರಿಗೆ ಹಾಲಿನ ದರ ಹೆಚ್ಚಳ : ಅಧ್ಯಕ್ಷ ಸಿ.ವಿ. ಮಹಲಿಂಗಯ್ಯ

ತುಮಕೂರು : ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯಾ ಕಾರಣಗಳಿಂದ ಹೈನುರಾಸುಗಳಿಗೆ ಮೇವಿನ ಅಭಾವ ಉಂಟಾಗಿದ್ದು, ಹಾಲು ಶೇಖರಣೆ ನಿರೀಕ್ಷಿತ ಮಟ್ಟಕ್ಕೆ ಹೆಚ್ಚಾಗದ ಕಾರಣ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಿ ಹೆಚ್ಚಿನ ಹಾಲು ಉತ್ಪಾದನೆಗೆ ಅನುಕೂಲವಾಗುವಂತೆ ಜನವರಿ 1ರ ಹೊಸ ವರ್ಷದಿಂದ ಅನ್ವಯವಾಗುವಂತೆ ಪ್ರಸ್ತುತ ನೀಡುತ್ತಿರುವ ಪ್ರತಿ ಲೀಟರ್ ಹಾಲಿನ ದರವನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿ ಲೀಟರ್ ಹಾಲಿಗೆ 33.71 ರೂ. (ಶೇ 4.0 FAT ಮತ್ತು ಶೇ 8.5 SNF)ನಂತೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಹಾಲು ಉತ್ಪಾದಕರಿಗೆ ನೀಡುವ ಪ್ರತಿ ಲೀಟರ್ ಹಾಲಿನ ಪರಿಷ್ಕೃತ ಮೂಲ ಬೆಲೆ (ಶೇ 4.0 FAT ಮತ್ತು ಶೇ 8.5 SNF) 32.78 ರೂ.ನಂತೆ ನಿಗಧಿಪಡಿಸಲು ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ.ವಿ. ಮಹಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಹಾಲು ಉತ್ಪಾದಕರಿಗೆ 2023ನೇ ಹೊಸ ವರ್ಷದ ಮತ್ತು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದ್ದು, ಒಕ್ಕೂಟದಲ್ಲಿಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹಾಜರಿದ್ದ ಕ.ಸ.ಹಾ.ಮ. & ತು.ಹಾ.ಒ ನಿರ್ದೇಶಕ ಎಂ.ಕೆ.ಪ್ರಕಾಶ್, ಒಕ್ಕೂಟದ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್, ಹೆಚ್.ಬಿ.ಶಿವನಂಜಪ್ಪ (ಹಳೇಮನೆ), ಜಿ.ಚಂದ್ರಶೇಖರ್, ಡಿ.ಕೃಷ್ಣಕುಮಾರ್, ಹೆಚ್.ಕೆ.ರೇಣುಕಾಪ್ರಸಾದ್, ಈಶ್ವರಯ್ಯ, ಎಸ್.ಆರ್.ಗೌಡ, ಚನ್ನಮಲ್ಲಪ್ಪ, ನಾಮ ನಿರ್ದೇಶಿತ ನಿರ್ದೇಶಕ ಎಸ್.ವಿಜಯಕುಮಾರ್, ಸಹಕಾರ ಸಂಘಗಳ ಜಂಟಿ ನಿಬಂಧಕರ ಪ್ರತಿನಿಧಿ ಎನ್. ವೆಂಕಟೇಶ್, ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಜಿ.ವಿ.ಜಯಣ್ಣ, ಕಹಾಮ ಪ್ರತಿನಿಧಿ ಹೆಚ್.ಕೆ. ರಾಘವೇಂದ್ರ, ವ್ಯವಸ್ಥಾಪಕ ನಿರ್ದೇಶಕ ಡಾ|| ಬಿ.ಪಿ.ಸುರೇಶ್ ಅವರು ಸರ್ವಾನುಮತದಿಂದ ಈ ತೀರ್ಮಾನವನ್ನು ಕೈಗೊಂಡರು.
ಕಳೆದ ಅಕ್ಟೋಬರ್ 27ರಂದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಅತಿವೃಷ್ಠಿ ಹಾಗೂ ಹೈನುರಾಸುಗಳಿಗೆ ಹಬ್ಬಿರುವ ಚರ್ಮದ ಗಂಟು ರೋಗದಿಂದ ಹೈನುರಾಸು ನಿರ್ವಹಣಾ ವೆಚ್ಚಗಳು ಹೆಚ್ಚಾಗಿದ್ದು, ಹಾಲು ಶೇಖರಣೆ ಕಡಿಮೆಯಾಗಿ ರೈತರ ಆರ್ಥಿಕ ಸ್ಥಿತಿ ಕ್ಷೀಣವಾಗುತ್ತಿರುವುದನ್ನು ಮನಗಂಡ ಒಕ್ಕೂಟದ ಆಡಳಿತ ಮಂಡಳಿಯು ಜಿಲ್ಲೆಯ ಹಾಲು ಉತ್ಪಾದಕರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಒಕ್ಕೂಟವು ಸದಸ್ಯ ಸಂಘಗಳ ಮೂಲಕ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 2.50 ರೂ.ನಂತೆ ವಿಶೇಷ ಪ್ರೋತ್ಸಾಹಧನವನ್ನು ನೀಡಲು ತೀರ್ಮಾನಿಸಿತ್ತು. ಅದರಂತೆ ನವೆಂಬರ್ 1 ರಿಂದ ಅನ್ವಯವಾಗುವಂತೆ ಒಕ್ಕೂಟದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿ ಲೀಟರ್ ಹಾಲಿಗೆ 32.21 ರೂ. (ಶೇ 4.0 FAT ಮತ್ತು ಶೇ 8.5 SNF) ನಂತೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಹಾಲು ಉತ್ಪಾದಕರಿಗೆ ನೀಡುವ ಪ್ರತಿ ಲೀಟರ್ ಹಾಲಿನ ಪರಿಷ್ಕೃತ ಮೂಲ ಬೆಲೆ (ಶೇ 4.0 FAT ಮತ್ತು ಶೇ 8.5 SNF) 31.28 ರೂ.ನಂತೆ ನೀಡಲಾಗಿದೆ.

ಪ್ರಸ್ತುತ ಕಾರ್ಯಚರಣೆಯಲ್ಲಿರುವ 1320 ಹಾಲು ಉತ್ಪಾದಕರ ಸಹಕಾರ ಸಂಘಗಳಿAದ ದಿನವಹಿ 7 ಲಕ್ಷ ಲೀಟರ್ ಹಾಲು ಶೇಖರಣೆ ಮಾಡಲಾಗುತ್ತಿದ್ದು, ಹಾಲು ಉತ್ಪಾದಕರಿಂದ ಸಂಗ್ರಹಿಸುವ ಹಾಲಿನ ಗುಣಮಟ್ಟಕ್ಕೆ ಆದ್ಯತೆ ನೀಡಿ ಉತ್ತಮ ಗುಣಮಟ್ಟದ ಹಾಲನ್ನು ಸಂಗ್ರಹಿಸಿ ಒಕ್ಕೂಟಕ್ಕೆ ನೀಡುವ ಮೂಲಕ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಹಕರಿಸಬೇಕೆಂದು ಮತ್ತು ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳು ರೈತರಿಗೆ ಹೆಚ್ಚಿನ ಹಾಲು ಉತ್ಪಾದನೆಗೆ ಪ್ರೋತ್ಸಾಹಿಸಿ ಒಕ್ಕೂಟಕ್ಕೆ ಉತ್ತಮ ಹಾಲು ಸರಬರಾಜು ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker