ಮಕ್ಕಳು ಕ್ರೀಡಾಪಟುಗಳಾಗಿ ಬೆಳೆಯಲು ಪೋಷಕರು ಪ್ರೋತ್ಸಾಹ ನೀಡಿ : ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು
ರಾಷ್ಟ್ರಮಟ್ಟದ ಮುಕ್ತ ಆಹ್ವಾನಿತ ಶೂಟಿಂಗ್ ಚಾಂಪಿಯನ್ ಶಿಫ್ ಕ್ರೀಡಾಕೂಟ
ತುಮಕೂರು : ಮನುಷ್ಯನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆ ಪೂರಕವಾಗಿದ್ದು,ಪೋಷಕರು ಮಕ್ಕಳನ್ನು ಕ್ರೀಡಾಪಟುಗಳಾಗಿ ಬೆಳೆಯಲು ಪ್ರೋತ್ಸಾಹ ನೀಡಬೇಕೆಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಆಭಿಪ್ರಾಯಪಟ್ಟಿದ್ದಾರೆ.
ನಗರದ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ವಿವೇಕಾನಂದ ಸ್ಟೋರ್ಟ್ ಅಂಡ್ ಕಲ್ಚರಲ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ರೈಫಲ್ ಶೂಟಿಂಗ್ ಅಕಾಡೆಮಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದಮುಕ್ತ ಆಹ್ವಾನಿತ ಶೂಟಿಂಗ್ ಚಾಂಪಿಯನ್ ಶಿಫ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಮನುಷ್ಯನ ಸಮಗ್ರ ಬೆಳವಣಿಗೆಯಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಕ್ರೀಡೆ ಯಾವುದೇ ಇರಲಿ ಭಾಗವಹಿಸುವುದು ಮುಖ್ಯ. 2008ರ ಒಲಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಪಟುಗಳು 35 ಮೆಡಲ್‌ಗಳನ್ನು ತಂದರು, ಅದರಲ್ಲಿ ಚಿನ್ನದ ಪದಕ ಸೇರಿದಂತೆ ನಾಲ್ಕು ಪದಕಗಳು ಶೂಟಿಂಗ್‌ನಿಂದ ಬಂದವು.ಹಾಗಾಗಿ ಶೂಟಿಂಗ್ ಕ್ರೀಡೆಗೆ ಹೆಚ್ಚಿನ ಅವಕಾಶಗಳಿವೆ.ಶೂಟಿಂಗ್ ಕ್ರೀಡೆಯಿಂದ ಮೆದುಳು ಚುರುಕಾಗುವುದರ ಜೊತೆಗೆ, ನಿಗಧಿತ ಗುರಿ ತಲುಪಲು ನಮ್ಮನ್ನು ಪ್ರೇರೆಪಿಸುತ್ತದೆ.ತುಮಕೂರು ಜಿಲ್ಲೆಯ ಯುವಜನರು ಆರಂಭವಾಗಿರುವ ಶೂಟಿಂಗ್ ಅಕಾಡೆಮಿಯೊಂದಿಗೆ ಸೇರಿ,ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆಲ್ಲುವಂತಾಗಬೇಕು ಎಂದು ಪ್ರೊ.ಎ.ವೆಂಕಟೇಶ್ವರಲು ಸಲಹೆ ನೀಡಿದರು.
ಎನ್.ಸಿ.ಸಿ. ಕರ್ನಲ್ ಮನೋಜ್ ಗುಪ್ತ ಮಾತನಾಡಿ, ತುಮಕೂರಿನಲ್ಲಿ ಕ್ರೀಡೆಗೆ ಹೆಚ್ಚು ಅವಕಾಶವಿದೆ.ಅದರಲ್ಲಿಯೂ ಟ್ರಕಿಂಗ್‌ಗೆ ಹೇಳಿ ಮಾಡಿಸಿದ ಜಾಗ.ಅರ್ಥಗಂಟೆಯಿಂದ ಇಡೀ ದಿನ ಹತ್ತುವಂತಹ ಬೆಟ್ಟ ಗುಡ್ಡಗಳಿವೆ.ಆದರೆ ಇದುವರೆಗೂ ಒಂದು ಟ್ರಕಿಂಗ್ ಅಕಾಡೆಮಿ ಇಲ್ಲ.ಈ ನಿಟ್ಟಿನಲ್ಲಿ ತುಮಕೂರಿಗರು ಗಮನಹರಿಸಬೇಕು. ತುಮಕೂರು ನಗರದಲ್ಲಿ ಇಂತಹದೊಂದು ದೊಡ್ಡ ಇವೆಂಟ್ ನಡೆಯುತ್ತಿರುವುದು ಸ್ವಾಗತಾರ್ಹ.ಇದರಲ್ಲಿ ಮಿಲಿಟರಿ, ಅರೆಮಿಲಿಟರಿ ಸೇರಿದಂತೆ ಸೇನೆಯ ವಿವಿಧ ತಕ್ಕಡಿಗಳು ಭಾಗವಹಿಸಿರುವುದು ಸಂತೋಷದ ವಿಚಾರವಾಗಿದೆ.ಇಂತಹ ಮತ್ತಷ್ಟು ಕ್ರೀಡೆಗಳು ಒಳಾಂಗಣ ಮತ್ತು ಹೋರಾಂಗಣ ಅಂಕಣಗಳಲ್ಲಿ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕ್ರೀಡಾ ಪ್ರೋತ್ಸಾಹಕ ಧನಿಯಕುಮಾರ್ ಮಾತನಾಡಿ,ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ.ಬೇರೆಲ್ಲಾ ಕ್ಷೇತ್ರಗಳಲ್ಲಿ ಜಾತಿ ಎಂಬ ಪೆಡಂಭೂತ ಕಾಡುತ್ತಿದ್ದರೂ ಕ್ರೀಡಾ ಕ್ಷೇತ್ರ ಇದರಿಂದ ಹೊರತಾಗಿದೆ. ಎಂದು ಕ್ರೀಡೆಗೆ ಜಾತಿ ರಾಜಕೀಯ ಅಂಟಿಕೊಳ್ಳುತ್ತದೆಯೋ ಅಂದೆ ಭಾರತದಲ್ಲಿ ಕ್ರೀಡೆ ಸತ್ತಂತೆ. ಈ ಎಚ್ಚರ ನಮ್ಮ ಕ್ರೀಡಾಪಟುಗಳಿಗೆ ಇರಬೇಕು.ಹಾಗೆಯೇ ಪೋಷಕರು ಮಕ್ಕಳನ್ನು ಕ್ರೀಡೆಯ ಕಡೆಗೆ ಆಸಕ್ತಿ ವಹಿಸುವಂತೆ ಮಾಡಬೇಕೆಂದರು.
ಸಿದ್ದಗಂಗಾ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಸಿ.ಜಯಸ್ವಾಮಿ ಮಾತನಾಡಿ,ಸ್ಮಾರ್ಟ್ಸಿಟಿ ಯಾಗಿರುವ ತುಮಕೂರು ನಗರದಲ್ಲಿ ಇಂತಹ ದೊಡ್ಡ ಮಟ್ಟದ ಕ್ರೀಡೆ ನಡೆಯುತ್ತಿರುವುದು ಮುಂಬರುವ ಹಲವಾರು ಕ್ರೀಡಾಕೂಟಗಳಿಗೆ ಶುಭ ಸೂಚಕವಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಮ್ಮ ದೇಶ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ, ಮುಂದಿನ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಬರುವಂತೆ ಎಲ್ಲಾ ಕ್ರೀಡಾಪಟುಗಳು ಶ್ರಮವಹಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಮರ್ಜೆಂಟ್ ಕ್ರೆಡಿಟ್ ಕೋ ಅಪರೇಟಿವ್ ಬ್ಯಾಂಕಿನ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಮಾತನಾಡಿ,ನಾನು ವಿದ್ಯಾರ್ಥಿಯಾಗಿದ್ದಾಗ, ಎನ್.ಸಿ.ಸಿ.ಯಲ್ಲಿದ್ದೆ, ಆಗ ನನಗೆ ರೈಫಲ್ ನೀಡಿ ತರಬೇತಿ ಕೊಟ್ಟಿದ್ದರು. ಇಂದು ರಾಷ್ಟ್ರೀಯ ಮಟ್ಟದ ರೈಫಲ್ ಶೂಟಿಂಗ್ ಚಾಂಪಿಯನ್‌ಶಿಫ್ ನಡೆಯುತ್ತಿರುವುದು ಬಹಳಷ್ಟು ಸಂತೋಷವನ್ನು ಉಂಟು ಮಾಡಿದೆ.ವಿವೇಕಾನಂದ ಸ್ಟೋರ್ಟ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಶೂಟಿಂಗ್ ಅಲ್ಲದೆ, ವಾಲಿಬಾಲ್, ಪುಟ್‌ಬಾಲ್,ಕ್ರಿಕೆಟ್, ಖೋ-ಖೋ ದಂತಹ ಹಲವಾರು ಕ್ರೀಡಾಕೂಟಗಳನ್ನು ನಡೆಸಿದ್ದಾರೆ.ನೂರಾರು ಕ್ರೀಡಾಪಟಗಳನ್ನು ತಯಾರು ಮಾಡಿ, ಅವರು ರಾಜ್ಯ, ರಾಷ್ಟçಮಟ್ಟದಲ್ಲಿ ಮೆಡಲ್ ಪಡೆಯುವಂತೆ ಮಾಡಿದ್ದಾರೆ.ಭಾರತ ತಾಂತ್ರಿಕತೆಯಲ್ಲಿ ಮುಂದಿರುವಂತೆ ಕ್ರೀಡಾಕ್ಷೇತ್ರದಲ್ಲಿ ಮುಂದುವರೆಯುವಂತಹ ಸದಾವಕಾಶವನ್ನು ನಮ್ಮ ಯುವಜನರು ಮಾಡಬೇಕಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಶೂಟಿಂಗ್ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಮೊದಲು ಎರಡು ಸ್ಥಾನ ಪಡೆಯುವ ಕ್ರೀಡಾಪಟುಗಳಿಗೆ ಕ್ರಮವಾಗಿ 10 ಮತ್ತು 5 ಸಾವಿರ ರೂಗಳ ನಗದು ಬಹುಮಾನವನ್ನು ನಮ್ಮ ಬ್ಯಾಂಕ್ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಮೊದಲ ದಿನದ 10 ಮೀಟರ್ ರೈಫಲ್ ಓಪನ್ ಶೂಟಿಂಗ್ ಸ್ಪರ್ಧೆಯಲ್ಲಿ ವಿಜೇತ ಸ್ಪರ್ಧಾಳುಗಳಿಗೆ ಪದಕ ಮತ್ತು ನಗದು ಬಹುಮಾನ ವಿತರಿಸಲಾಯಿತು.ಅಲ್ಲದೆ ಕೊಲಂಬಿಯಾದಲ್ಲಿ ನಡೆದ ಜೂನಿಯರ್ ಅಥ್ಲೇಟಿಕ್ 120 ಮೀಟರ್ ಹರ್ಡಲ್ಸ್ನಲ್ಲಿ ಪದಕ ಪಡೆದ ತುಮಕೂರಿನ ಕೃಷಿಕ್ ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಎಸ್.ಎಲ್.ವಿ.ಪ್ರಾಮೋರ‍್ಸ್ನ ಹೆಚ್.ನಾಗರಾಜು, ಪತ್ರಕರ್ತರಾದ ಮಧುಕರ್ ಟಿ.ಎನ್.ಕ್ರೀಡಾ ತರಬೇತು ದಾರರಾದ ಗುರುಪ್ರಸಾದ್,ವಿವೇಕಾನಂದ ಸ್ಟೋರ್ಟ್ ಅಂಡ್ ಕಲ್ಚರಲ್ ಅಸೋಸಿಯೇಷನ್‌ನ ಅನಿಲ್‌ಕುಮಾರ್ ಉಪಸ್ಥಿತರಿದ್ದರು.