ತುಮಕೂರು

ಸೆಪ್ಟಂಬರ್ ನಲ್ಲಿ ಕಾಂಗ್ರೆಸ್ ಪಕ್ಷದ ಎಸ್ಸಿ,ಎಸ್ಟಿ ಕಾರ್ಯಕರ್ತರ ಬೃಹತ್ ಸಮಾವೇಶ : ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಜಿ.ನಿಂಗರಾಜು

ತುಮಕೂರು : ಕಾಂಗ್ರೆಸ್ ಸಂಪ್ರದಾಯಕ ಮತದಾರರಾದ ಪರಿಶಿಷ್ಟ ಜಾತಿ,ವರ್ಗ,ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಮುಂಬರುವ ಸೆಪ್ಟಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಜಿ.ನಿಂಗರಾಜು ತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಬಿಜೆಪಿ ಪಕ್ಷ ನೀಡುತ್ತಿರುವ ಸುಳ್ಳು ಭರವಸೆಗಳನ್ನು ನಂಬಿ,ದಲಿತ ಯುವಕರು ಕಾಂಗ್ರೆಸ್ ಪಕ್ಷದಿಂದ ದೂರವಾಗುತ್ತಿದ್ದಾರೆ.ಪರಿಶಿಷ್ಟ ಜಾತಿ ಮತ್ತು ವರ್ಗಗಳ ಯುವಜನತೆಗೆ ಬಿಜೆಪಿ ಹಿಡನ್ ಅಜೆಂಡಾವನ್ನು ತಿಳಿಸಿ,ಕಾಂಗ್ರೆಸ್ ಪಕ್ಷ ತನ್ನ ಆಡಳಿತದ ಅವಧಿಯಲ್ಲಿ ತಳಸಮುದಾಯದ ಏಳಿಗೆಗೆ ನೀಡಿರುವ ಕೊಡುಗೆಗಳನ್ನು ನೆನಪು ಮಾಡಿ,ಅವರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ನಿಟ್ಟಿನಲ್ಲಿ ಈ ಸಮಾವೇಶ ಮಹತ್ವವನ್ನು ಪಡೆದುಕೊಳ್ಳಲಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಮಂಚೂಣಿ ಘಟಕಗಳಾಗಿರುವ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಓಬಿಸಿ,ಮಹಿಳಾ,ಅಲ್ಪಸಂಖ್ಯಾತ, ಕಾರ್ಮಿಕ,ವಕೀಲ,ವೈದ್ಯ ವಿಭಾಗಗಳನ್ನು ಕಾಂಗ್ರೆಸ್ ಪಕ್ಷದ ಪೇರೆಂಟ್ ಬಾಡಿ ಕಡೆಗಣಿಸಿದ್ದರ ಫಲವಾಗಿ ಇಂತಹ ದುಸ್ಥಿತಿ ಬಂದಿದೆ.ಮತ್ತೊಮ್ಮೆ ಪಕ್ಷವನ್ನು ಸಂಘಟಿಸಿ,ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಮಂಚೂಣಿ ಘಟಕಗಳನ್ನು ಬಲ ಪಡಿಸಿ ಚುನಾವಣೆಯಲ್ಲಿ ಸಕ್ರಿಯವಾಗಿ ದುಡಿಸಿಕೊಳ್ಳುವ ಅಗತ್ಯವಿದೆ.ಈ ಹಿನ್ನಲೆಯಲ್ಲಿ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್,ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಜಿಲ್ಲೆಯ ಎಲ್ಲಾ ನಾಯಕರನ್ನು ಒಳಗೊಂಡಂತೆ ಬೃಹತ್ ಸಮಾವೇಶ ನಡೆಸುವ ಮೂಲಕ ಸಂಪ್ರದಾಯಕ ಮತಗಳನ್ನು ಒಗ್ಗೂಡಿಸುವ ಕೆಲಸ ಇದಾಗಿದೆ ಎಂದು ಬಿ.ಜಿ.ನಿಂಗರಾಜು ತಿಳಿಸಿದರು.
ಯುವಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ,ಪರೋಕ್ಷ ಸಂವಿಧಾನ ಬದಲಾವಣೆಯ ಪ್ರಯತ್ನಗಳು ಸರಕಾರಿ ಸಂಸ್ಥೆಗಳ ಖಾಸಗೀಕರಣದ ಮೂಲಕ ನಡೆಯುತ್ತಿವೆ.ಇದರಿಂದಾಗಿ ಮೀಸಲಾತಿ ಎಂಬುದೇ ಅಪ್ರಸ್ತುತವಾಗುತ್ತಿದೆ.ಇದರ ವಿರುದ್ದ ದ್ವನಿ ಎತ್ತಲು ಇಂತಹ ಸಮಾವೇಶಗಳು ಅತಿ ಅಗತ್ಯವಾಗಿ ಬೇಕಾಗಿವೆ ಎಂದರು.
ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ಇಂದು ನಾವೆಲ್ಲರೂ ಒಂದೆಡೆ ಕುಳಿತು ಮಾತನಾಡುತ್ತಿದ್ದೇವೆ ಎಂದರೆ ಅದಕ್ಕೆ ಸಂವಿಧಾನ ಕಾರಣ.ಅಂತಹ ಸಂವಿಧಾನವನ್ನೇ ಬದಲಾಯಿಸುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ.ದೇಶದಲ್ಲಿ ಇಂದು 10ಲಕ್ಷ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ಹೊರಗುಳಿದಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ.ಮತ್ತೊಮ್ಮೆ ದಲಿತರು, ಅಲ್ಪಸಂಖ್ಯಾತರು,ಬಡವರ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ.ಈ ವರ್ಗಗಳು ಶಿಕ್ಷಣ ಪಡೆದು ಸಂಘಟಿತರಾದರೆ ಹಕ್ಕುಗಳನ್ನು ಪಡೆಯುತ್ತಾರೆ.ಹಾಗಾಗಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಬರದಂತೆ ತಡೆಯುವ ಪ್ರಯತ್ನ ಇದಾಗಿದೆ.ಇದರ ವಿರುದ್ದ ಸಂಘಟಿತರಾಗಲು ಮುಂಬರುವ ಸಮಾವೇಶವನ್ನು ನಾವೆಲ್ಲರೂ ಆಸ್ತçವಾಗಿ ಬಳಸಿಕೊಳ್ಳ ಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಮಾತನಾಡಿ,ಒಂದು ಸಮಾವೇಶ ಎಂದರೆ ಒಬ್ಬರು ಮಾಡುವ ಕೆಲಸವಲ್ಲ.ಪಕ್ಷದ ಎಲ್ಲಾ ವಿಭಾಗಗಳು ಮುಖಂಡರು,ಅಲ್ಪಸಂಖ್ಯಾತರು,ದಲಿತ ಮತ ಪಡೆದಿರುವ ಪಕ್ಷದ ಇತರೆ ಮುಖಂಡರುಗಳು ಕೈ ಜೋಡಿಸಬೇಕಿದೆ.ಪಕ್ಷವೆಂಬ ಮರದ ರಂಬೆ,ಕೊಂಬೆಗಳಾಗಿರುವ ವಿವಿಧ ಮಂಚೂಣಿ ಘಟಕಗಳು ಮತದ ಬೇರಿಗೆ ಬಲ ತುಂಬುವ ಕೆಲಸ ಮಾಡಬೇಕಾಗಿದೆ.ಸಮಾವೇಶದ ಸಂದರ್ಭದಲ್ಲಿ ಪಕ್ಷ ನೀಡುವ ಜವಾಬ್ದಾರಿಯನ್ನು ನಿಬಾಯಿಸು ವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷದ ತುಮಕೂರು ಜಿಲ್ಲಾ ಉಸ್ತುವಾರಿ ಕೇಶವ ಮೂರ್ತಿ ಮಾತನಾಡಿ,ದೇಶಕ್ಕೆ ಸ್ವಾತಂತ್ರ ಬಂದ 75 ವರ್ಷಗಳು ತುಂಬುತ್ತಿದ್ದು, ಅದರ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 75 ಕಿ.ಮಿ. ಪಾದಯಾತ್ರೆ ನಡೆಸುವ ಕಾರ್ಯಕ್ರಮವನ್ನು ಎಐಸಿಸಿ ಮತ್ತು ಕೆಪಿಸಿಸಿ ನೀಡಿದೆ. ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಎಲ್ಲರು ಸನ್ನದ್ದರಾಗಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ಉಪಾಧ್ಯಕ್ಷರಾದ ಎಂ.ಎನ್.ಹನುಮಂತರಾಯಪ್ಪ,ರಂಗಧಾಮಯ್ಯ, ಮರಿಚನ್ನಮ್ಮ,ಪಿ.ಶಿವಾಜಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ರುದ್ರೇಶ್,ದಿನೇಶ್ ಕುಮಾರ್,ಮಧುಗಿರಿ ರಂಗಸ್ವಾಮಿ, ಗೀತಾ, ಯುವಘಟಕದ ಉಪಾಧ್ಯಕ್ಷ ಮೋಹನ್‌ಕುಮಾರ್, ಮಾರುತಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿವಿಧ ತಾಲೂಕು ಘಟಕಗಳ ಮುಖಂಡರು,ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker